ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಪಂಜಾಬ್ ನಲ್ಲಿ ಭರ್ಜರಿ ಜಯಭೇರಿ ಗಳಿಸಿದ್ದು, ಗೋವಾದಲ್ಲಿ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿ ತನ್ನ ಖಾತೆಯನ್ನು ತೆರೆದಿತ್ತು. ಇದೀಗ 2023ರ ಡಿಸೆಂಬರ್ ನಲ್ಲಿ ಗುಜರಾತ್ ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಹಿಂದುತ್ವದ ವಿನಾಶ ಮಾಡುತ್ತಿರುವ ‘ನಕಲಿ’ಗಳ ಮಾತು ನಂಬಬೇಡಿ: ಜನತೆಗೆ ಎಚ್ ಡಿಕೆ ಕರೆ
ಆಮ್ ಆದ್ಮಿ ಪಕ್ಷ ಶನಿವಾರದಿಂದ (ಏಪ್ರಿಲ್ 02) ಗುಜರಾತ್ ನಲ್ಲಿ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಗುಜರಾತ್ ನಲ್ಲಿ 1995ರಿಂದ ಭಾರತೀಯ ಜನತಾ ಪಕ್ಷ ಆಡಳಿತ ನಡೆಸುತ್ತಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಎರಡು ದಿನಗಳ ಭೇಟಿಗಾಗಿ ಈಗಾಗಲೇ ಅಹಮ್ಮದಾಬಾದ್ ತಲುಪಿರುವುದಾಗಿ ವರದಿ ವಿವರಿಸಿದೆ.
ಶನಿವಾರ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಸಬರಮತಿ ಆಶ್ರಮಕ್ಕೆ ಭೇಟಿದ ನಂತರ ಎರಡು ಕಿಲೋ ಮೀಟರ್ ಗಳವರೆಗೆ ತಿರಂಗಾ ಯಾತ್ರೆ ಹೆಸರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಭಾನುವಾರ (ಏಪ್ರಿಲ್ 03) ಅಹಮ್ಮದಾಬಾದ್ ನ ಸ್ವಾಮಿನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.
ಇತ್ತೀಚೆಗೆ ಅರವಿಂದ್ ಕೇಜ್ರಿವಾಲ್ ನಿವಾಸದ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಹಾಗೂ ಭಗವಂತ್ ಮಾನ್ ಗೆ ಹೆಚ್ಚುವರಿ ಭದ್ರತಾ ವ್ಯವಸ್ಥೆ ಮಾಡಬೇಕು ಎಂದು ಗುಜರಾತ್ ನ ಆಮ್ ಆದ್ಮಿ ಪಕ್ಷ ಅಹಮ್ಮದಾಬಾದ್ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.