ಹೊಸದಿಲ್ಲಿ: ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಯವರ ಜತೆಗೆ ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ಮುಂಚೂಣಿಗೆ ಬಂದ ವರು ಅರವಿಂದ ಕೇಜ್ರಿವಾಲ್. ರಾಷ್ಟ್ರಮಟ್ಟದಲ್ಲಿ ಜನ ಲೋಕಪಾಲ ಕಾನೂನು ಜಾರಿಯಾಗಬೇಕು ಎಂದು 2011ರ ಎಪ್ರಿಲ್‌ನಿಂದ ಡಿಸೆಂಬರ್ ವರೆಗೆ ನಡೆಸಲಾಗಿದ್ದ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸಿದ್ದರು. ನಂತರ ಇಬ್ಬರು ಮುಖಂಡರ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಬೇರೆ ಬೇರೆ ದಾರಿ ಹಿಡಿಯಲು ತೀರ್ಮಾನಿಸಿದ್ದರು ಮತ್ತು 2012ರ ಅಕ್ಟೋಬರ್‌ನಲ್ಲಿ ಆಮ್ ಆದ್ಮಿ ಪಕ್ಷ ಸ್ಥಾಪನೆ ಮಾಡಲು ಕೇಜ್ರಿವಾಲ್ ನಿರ್ಧರಿಸಿದ್ದರು.
ಮೊತ್ತಮೊದಲ ಪ್ರಯತ್ನವೆಂಬಂತೆ ದಿಲ್ಲಿ ವಿಧಾನಸಭೆಗೆ ನಡೆದಿದ್ದ ಚುನಾವಣೆಯಲ್ಲಿ 70 ಕ್ಷೇತ್ರಗಳ ಪೈಕಿ 28 ಕ್ಷೇತ್ರಗಳಲ್ಲಿ ಗೆದ್ದಿದ್ದರು ಮತ್ತು ಅಲ್ಪಮತದ ಸರಕಾರ ಸ್ಥಾಪಿಸಿದ್ದರು. 2014ರ ಫೆಬ್ರವರಿಯಲ್ಲಿ ದಿಲ್ಲಿ ವಿಧಾನಸಭೆ ಯಲ್ಲಿ ಜನ ಲೋಕಪಾಲ ಮಸೂದೆ ಅಂಗೀಕರಿಸಲು ಸಾಧ್ಯ ವಾಗದ್ದಕ್ಕೆ ರಾಜೀನಾಮೆ ನೀಡಿದ್ದರು. ಅನಂತರ ನಡೆದ ಚುನಾವಣೆಯಲ್ಲಿ ಆಪ್ ಅಭೂತಪೂರ್ವ ವಾಗಿ ಜಯ ಸಾಧಿಸಿತ್ತು ಮತ್ತು 2019ರ ವಿಧಾನ ಸಭೆ ಚುನಾವಣೆಯಲ್ಲಿಯೂ ಗೆದ್ದು ಅಧಿಕಾರ ಉಳಿಸಿಕೊಂಡಿತ್ತು.
2017ರಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ 20 ಕ್ಷೇತ್ರಗಳಲ್ಲಿ ಗೆದ್ದು ಪ್ರಧಾನ ವಿಪಕ್ಷವಾಯಿತು. ಇದೀಗ ಪಂಜಾಬ್ ಚುನಾ ವಣೆಯಲ್ಲಿ ಗೆದ್ದು ಅಧಿಕಾರ ವಹಿಸಿಕೊಂಡಿದೆ. ಸೂರತ್ ಪಾಲಿಕೆ ಚುನಾವಣೆ ಮತ್ತು ಚಂಡೀಗಢ ಪಾಲಿಕೆ ಚುನಾವಣೆಯಲ್ಲೂ ಕೇಜ್ರಿವಾಲ್ ಪಕ್ಷ ಗಣನೀಯ ಸಾಧನೆ ಮಾಡಿದೆ.
2017ರಿಂದ 2022ರ ವರೆಗೆ ಕರ್ನಾಟಕ ಸೇರಿ ದಂತೆ ಪ್ರಮುಖ ರಾಜ್ಯಗಳ ವಿಧಾನಸಭೆ ಚುನಾ ವಣೆಯಲ್ಲಿ ಆಪ್ ಸ್ಪರ್ಧಿಸಿ ಸೋತಿದೆ. ಪ್ರಸಕ್ತ ಸಾಲಿನ ಗೋವಾ ವಿಧಾನಸಭೆ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲಿ ಗೆದ್ದಿದೆ. ಪಂಜಾಬ್‌ನ ಜಯ ದಿಂದಾಗಿ ಪ್ರಾದೇಶಿಕ ಪಕ್ಷವಾಗಿರುವ ಆಪ್ ರಾಷ್ಟ್ರೀ ಯ ಪಕ್ಷದ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಸಾಗು ತ್ತಿದೆ ಎನ್ನುತ್ತಿದ್ದಾರೆ ವಿಶ್ಲೇಷಕರು. ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ಸ್ಪರ್ಧಿಸಿ ಶೇ.6ಕ್ಕಿಂತ ಹೆಚ್ಚು ಮತಗಳನ್ನು ಪಡೆಯಬೇಕು. ಹಿಂದಿನ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್‌ಗೆ ಶೇ.54, ಗೋವಾದಲ್ಲಿ ಶೇ. 6.77, ಪಂಜಾಬ್‌ನಲ್ಲಿ ಶೇ.42, ಉತ್ತರಾಖಂಡದಲ್ಲಿ ಶೇ.3.4, ಉತ್ತರ ಪ್ರದೇಶದಲ್ಲಿ ಶೇ.0.3 ಮತಗಳನ್ನು ಪಡೆದು ಕೊಂಡಿದೆ. ವರ್ಷಾಂತ್ಯಕ್ಕೆ ನಡೆಯಲಿರುವ ಗುಜ ರಾತ್, ಹಿಮಾಚಲ ಪ್ರದೇಶ ವಿಧಾನಸಭೆಯಲ್ಲೂ ಆಪ್ ಅದೃಷ್ಟ ಪರೀಕ್ಷಿಸಿಕೊಳ್ಳಲಿದೆ.
ಇದೊಂದು ಕ್ರಾಂತಿ
ಪಂಜಾಬ್‌ನಲ್ಲಿ ಗೆದ್ದದ್ದು ಕ್ರಾಂತಿ ಎಂದು ಬಣ್ಣಿಸಿರುವ ಆಪ್ ಸಂಚಾಲಕ ಅರವಿಂದ ಕೇಜ್ರಿವಾಲ್ ಮುಂದಿನ ದಿನಗಳಲ್ಲಿ ದೇಶಾದ್ಯಂತ ಹಬ್ಬಲಿದೆ. ಈ ಕ್ರಾಂತಿಯ ಮೊದಲ ಕಿಡಿ ಹೊತ್ತಿದ್ದು ದಿಲ್ಲಿಯಲ್ಲಿ ಎಂದಿದ್ದಾರೆ. ರಾಜ್ಯದಲ್ಲಿನ ಜಯದ ಬಳಿಕ ಅರವಿಂದ ಕೇಜ್ರಿವಾಲ್ ಭಯೋತ್ಪಾದಕ ಅಲ್ಲ. ಆತನೂ ಈ ದೇಶದ ಸಾಮಾನ್ಯ ಪ್ರಜೆ ಮತ್ತು ಒಬ್ಬ ದೇಶಭಕ್ತ ಎನ್ನುವುದು ಸಾಬೀತಾಗಿದೆ ಎಂದರು.