Advertisement

ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌; ಉತ್ತಮ ವ್ಯವಸ್ಥೆ

09:16 AM Apr 23, 2019 | Team Udayavani |

ಬೆಂಗಳೂರು: ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಸಂಖ್ಯೆಯನ್ನು ಲಿಂಕ್‌ ಮಾಡಿರುವುದರಿಂದ ಸರ್ಕಾರವು ಫ‌ಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತಿದ್ದು, ಈ ಮೂಲಕ ಒಂದು ಉತ್ತಮ ವ್ಯವಸ್ಥೆ ರೂಪುಗೊಂಡಿದೆ ಎಂದು ಭಾರತೀಯ ವಿಶೇಷ ಗುರುತು ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದನ್‌ ನೀಲೇಕಣಿ ಹೇಳಿದರು.

Advertisement

ನಗರದ ಹೋಟೆಲೊಂದರಲ್ಲಿ ಭಾರತೀಯ ಕೈಗಾರಿಕೆಗಳ ಒಕ್ಕೂಟ ಆಯೋಜಿಸಿದ್ದ ಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ಮೊಬೈಲ್‌ ಸಂಬಂಧಿಸಿದ ವಹಿವಾಟುಗಳು ವಲಸೆ ಕಾರ್ಮಿಕರ ಜೀವನವನ್ನು ಸುಧಾರಿಸಿವೆ. ಇದರಿಂದ ವಲಸೆ ಕಾರ್ಮಿಕರು ತಮ್ಮ ಕುಟುಂಬದವರಿಗೆ ಸಕಾಲದಲ್ಲಿ ಹಣ ವರ್ಗಾವಣೆ ಮಾಡಲು ಸಹಾಯವಾಗಿದೆ. ನೋಟು ಅಮಾನ್ಯದ ನಂತರದ ದಿನಗಳಲ್ಲಿ ಡಿಜಿಟಲ್‌ ಬ್ಯಾಂಕಿಂಗ್‌ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆ ಕಂಡಿದೆ ಎಂದರು.

ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಮಾªರ್‌ ಶಾ ಮಾತನಾಡಿ, ವಿಜ್ಞಾನ ಮತ್ತು ಸಂಶೋಧನೆಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನವನ್ನು ಮೀಸಲಿರಿಸುತ್ತಿಲ್ಲ. ಸಣ್ಣ ದೇಶಗಳೂ ಸಹ ತಮ್ಮ ಬಜೆಟ್‌ಗಳಲ್ಲಿ ಶೇ.2 ರಿಂದ ಶೇ.3 ಜೆಡಿಪಿ ಮೊತ್ತವನ್ನು ಮೀಸಲಿರಿಸುತ್ತಿವೆ. ಆದರೆ, ನಮ್ಮ ದೇಶದಲ್ಲಿ ಶೇ.1ಕ್ಕಿಂತಲೂ ಕಡಿಮೆ ಇದೆ ಎಂದು ವಿಷಾದ ವ್ಯಕ್ತಪಡಿಸಿದರು.

ಇಸ್ರೋ ಕಡಿಮೆ ವೆಚ್ಚದಲ್ಲಿ ಮಹತ್ತರ ಸಾಧನೆಗಳನ್ನು ಮಾಡುತ್ತಿದೆ ಎಂದರೆ, ಅಲ್ಲಿ ಉತ್ತಮವಾದ ನಾಯಕತ್ವ ಇರುವುದು ಕಾರಣ. ನಮ್ಮ ಕೈಗಾರಿಕೆಯಲ್ಲೂ ಇಂತಹ ಬೆಳವಣೆಗೆ ಆಗಬೇಕಿದೆ. ಒಂದು ಕಾಲದಲ್ಲಿ ಬಯೋಕಾನ್‌ ಅನ್ನು ನಾವು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೆವು. ಇಂದು ನಾವು ಉಳಿದ ದೇಶಗಳಿಗೆ ರಪು¤ ಮಾಡುವಷ್ಟು ಬದಲಾವಣೆಯಾಗಿದೆ ಎಂದರು.

ಬಯೋಕಾನ್‌ನ ಮೂಲಕ ನಮ್ಮ ದೇಶದಲ್ಲಿ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ದೆಹಲಿಯಲ್ಲಿ ಉಂಟಾಗಿರುವ ವಾಯುಮಾಲಿನ್ಯ ಉಳಿದ ನಗರಗಳಿಗೂ ಹಬ್ಬುವ ಆತಂಕವಿದೆ. ಇದನ್ನು ಕೃಷಿ ತ್ಯಾಜ್ಯಗಳನ್ನು ಬಳಸಿಕೊಂಡು ಪರಿಹರಿಸಬಹುದಾಗಿದೆ.

Advertisement

ಹಲವು ಸಮಸ್ಯೆಗಳನ್ನು ಏಕಕಾಲಕ್ಕೆ ಪರಿಹರಿಸಬಹುದಾಗಿದ್ದು, ಜೈವಿಕ ಆರ್ಥಿಕತೆಗೆ ಸಂಬಂಧಿಸಿದಂತೆ ಹಲವು ಬದಲಾವಣೆಗಳು ಆಗಬೇಕಿದೆ. ಇದಕ್ಕೆ ಪೂರಕವಾದ ಕಾಯ್ದೆಗಳು ಬರಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಉಗ್ರರ ದಾಳಿ ಪರಿಣಾಮ: ಉಗ್ರರದಾಳಿ ಎಲ್ಲೇ ನಡೆದರೂ ಹಲವು ದೇಶಗಳ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಸಂಸದ ರಾಜೀವ್‌ ಚಂದ್ರಶೇಖರ್‌ ಹೇಳಿದರು. ಶ್ರೀಲಂಕಾದಲ್ಲಿ ಬಾಂಬ್‌ ದಾಳಿಗೆ ಹಲವು ನಾಗರಿಕರು ಮೃತಪಟ್ಟಿದ್ದಾರೆ. ಇದು ಶ್ರೀಲಂಕಾ ಸೇರಿದಂತೆ ಉಳಿದ ದೇಶದ ಆರ್ಥಿಕತೆ ಮೇಲೂ ಪರಿಣಾಮ ಬೀರಲಿದೆ. ಮುಂಬೈ ದಾಳಿ ನಡೆದಾಗಲೂ ಭಾರತದಲ್ಲಿ ಇದೇ ಸ್ಥಿತಿ ನಿರ್ಮಾಣವಾಗಿತ್ತು ಎಂದು ಅಭಿಪ್ರಾಯಪಟ್ಟರು.

ಉಗ್ರರ ದಾಳಿ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿತ್ತು. ಆದರೆ, ಅದನ್ನು ಯಾರೂ ಬಹಿರಂಗವಾಗಿ ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ನಾನು ಮನಮೋಹನ್‌ ಸಿಂಗ್‌ ಅವರಿಗೆ ಇದರ ಬಗ್ಗೆ ಡಾಕ್ಯುಮೆಂಟರಿಯ ಮೂಲಕ ಮಾಹಿತಿ ನೀಡಿದ್ದೆ ಎಂದರು.

ಪ್ರತಿದಾಳಿ ಮಾಡುವ ಇಚ್ಛಾಶಕ್ತಿ ಕೊರತೆ: 2008 ಮತ್ತು 2009ರಲ್ಲಿ ದೇಶದ ಆಡಳಿತ ವ್ಯವಸ್ಥೆಯಲ್ಲಿ ನ್ಯೂನತೆಗಳಿದ್ದವು. ಆಗ ನಮ್ಮ ವ್ಯವಸ್ಥೆ ಉತ್ತಮವಾಗಿದ್ದಿದ್ದರೆ ನಾವು ಇನ್ನಷ್ಟು ಅಭಿವೃದ್ಧಿ ಸಾಧಿಸುತ್ತಿದೆವು. 2014ರ ನಂತರ ಕೈಗಾರಿಕಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳು ಆಗಿವೆ.

ಕೈಗಾರಿಕೆ, ವ್ಯಾಪಾರ ಮತ್ತು ಉದ್ಯೋಗಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ಬಾಲಾಕೋಟ್‌ ದಾಳಿಯನ್ನು ಮೋದಿಯವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಈ ಆರೋಪ ಮಾಡುತ್ತಿರುವವರಲ್ಲೇ ಇದರ ಬಗ್ಗೆ ಸ್ಪಷ್ಟತೆ ಇಲ್ಲ. ಈ ಹಿಂದೆಯೂ ದೇಶದಲ್ಲಿ ಉಗ್ರರ ದಾಳಿಗಳು ನಡೆದಿದ್ದವು. ಅದನ್ನು ಎದುರಿಸುವ ಮತ್ತು ಪ್ರತಿದಾಳಿ ಮಾಡುವ ಇಚ್ಛಾಶಕ್ತಿಯ ಕೊರತೆ ಕಾಣಿಸುತ್ತಿತ್ತು ಎಂದು ರಾಜೀವ್‌ ಚಂದ್ರಶೇಖರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next