Advertisement

ಕಳೆದು ಹೋಗಿದ್ದ ಪುತ್ರನನ್ನು ಹುಡುಕಿಕೊಟ್ಟ ಆಧಾರ್‌: 6 ವರ್ಷದ ಬಳಿಕ ಅಮ್ಮನ ಮಡಿಲು ಸೇರಿದ ಮಗ

12:49 PM Mar 13, 2022 | Team Udayavani |

ಬೆಂಗಳೂರು: ಆಧಾರ್‌ ಕಾರ್ಡ್‌ ನೀಡಿದ ಮಾಹಿತಿ ಆಧಾರದಲ್ಲಿ ಕಳೆದ 6 ವರ್ಷಗಳ ಹಿಂದೆ ಯಲಹಂಕದಲ್ಲಿ ನಾಪತ್ತೆಯಾಗಿದ್ದ ಮಾತು ಬಾರದ ಮಗನನ್ನು ತಾಯಿ ಮಡಿಲು ಸೇರಿಸುವಲ್ಲಿ ಪೊಲೀಸರು ಯಶಸ್ವಿಯಾಗಿರುವ ಮಾನವೀಯ ಘಟನೆ ನಡೆದಿದೆ.

Advertisement

ಪತ್ತೆಯಾಗಿರುವ ಭರತ್‌ (19) ಮಾತು ಬಾರದ ಯುವಕನಾಗಿದ್ದು, ಭಜರಂಗಿ ಭಾಯ್‌ಜಾನ್‌ ಸಿನಿಮಾದಲ್ಲಿ ನಡೆಯುವಂತಹದ್ದೇ ಘಟನೆಯಾಗಿದೆ.

2016ರಲ್ಲಿ ಯಲಹಂಕ ಬಳಿಯ ಸಿಂಗನಾಯಕನಹಳ್ಳಿ ತರಕಾರಿ ಮಾರುಕಟ್ಟೆಗೆ ಭರತ್‌ ತಾಯಿ ಪಾರ್ವತಮ್ಮ ಮಗನನ್ನು ಕರೆದುಕೊಂಡು ಹೋಗಿದ್ದರು. ಅಲ್ಲಿ ಭರತ್‌ ನಾಪತ್ತೆಯಾಗಿದ್ದ. ಮಾರುಕಟ್ಟೆಯಲ್ಲಿ ಜನದಟ್ಟಣೆಯಿಂದ ಕೂಡಿದ್ದರಿಂದ ಮತ್ತೆ ಎಷ್ಟೇ ಹುಡುಕಾಡಿದರೂ ಮಗ ಸಿಕ್ಕಿರಲಿಲ್ಲ. ಕೊನೆಗೆ ಪಾರ್ವತಮ್ಮ ಯಲಹಂಕ ಠಾಣೆಯಲ್ಲಿ ಮಗ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು.

ಪೊಲೀಸರು ಕೆಲ ಸಮಯ ಭರತ್‌ಗಾಗಿ ಹುಡುಕಾಡಿದರೂ ಪ್ರಯೋಜನವಾಗಿರಲಿಲ್ಲ. ಇತ್ತ ಭರತ್‌, ಯಲಹಂಕ ರೈಲ್ವೆ ನಿಲ್ದಾಣದ ವರೆಗೆ ನಡೆದುಕೊಂಡು ಬಂದು ಅಲ್ಲಿ ನಿಂತಿದ್ದ ರೈಲು ಹತ್ತಿದ್ದ. ಅದು ಮಹಾರಾಷ್ಟ್ರದ ನಾಗಪುರ ರೈಲ್ವೆ ನಿಲ್ದಾಣ ತಲುಪುತ್ತಿದ್ದಂತೆ ರೈಲಿನಿಂದ ಇಳಿದಿದ್ದ. ಭರತ್‌ನನ್ನು ಗಮನಿಸಿದ್ದ ರೈಲ್ವೆ ಭದ್ರತಾ ಪಡೆ ಅಧಿಕಾರಿಗಳು ಆತನನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದರು. ಭರತ್‌ಗೆ ಮಾತು ಬಾರದೇಯಿದ್ದ ಹಿನ್ನೆಲೆಯಲ್ಲಿ ಊರು ಹಾಗೂ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯ ವಾಗಿರಲಿಲ್ಲ.

ಆಧಾರ್‌ ಕಾರ್ಡ್‌ ಕೊಟ್ಟ ಸುಳಿವು: ಭರತ್‌ಗೆ ಆಧಾರ್‌ ಕಾರ್ಡ್‌ ಮಾಡಿಸಲು ಪುನರ್ವಸತಿ ಕೇಂದ್ರದ ಅಧಿಕಾರಿಯೊಬ್ಬರು ಕಳೆದ ಜನವರಿಯಲ್ಲಿ ನಾಗಪುರದ ಸ್ಥಳೀಯ ಆಧಾರ್‌ ಸೇವಾ ಕೇಂದ್ರಕ್ಕೆ ಕರೆದೊಯ್ದಿದ್ದರು. ಅಲ್ಲಿ ಭರತ್‌ನ ಬೆರಳು ಮುದ್ರೆ ಪಡೆದಾಗ ತಿರಸ್ಕೃತವಾಗಿತ್ತು.

Advertisement

ಈಗಾಗಲೇ ಬೆಂಗಳೂರಿನಲ್ಲಿ ಭರತ್‌ ಕುಮಾರ್‌ ಹೆಸರಿನಲ್ಲಿ ಆಧಾರ್‌ ಕಾರ್ಡ್‌ ಚಾಲ್ತಿಯಲ್ಲಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಬೆಂಗಳೂರಿನಲ್ಲಿ ಭರತ್‌ ಹೆಸರಿನಲ್ಲಿದ್ದ ವ್ಯಕ್ತಿಯ ಬೆರಳಚ್ಚು ಹೋಲಿಕೆ ಮಾಡಿದಾಗ ಎರಡಕ್ಕೂ ಸಾಮ್ಯತೆ ಇರುವುದು ಕಂಡು ಬಂದಿತ್ತು.

ಆಧಾರ್‌ ಕಾರ್ಡ್‌ ದಾಖಲೆ ಮೂಲಕ ಭರತ್‌ನ ತಾಯಿ ಪಾರ್ವತಮ್ಮ ಮೊಬೈಲ್ ನಂಬರ್‌ ಪಡೆದ ನಾಗಪುರ ಪುನರ್ವಸತಿ ಕೇಂದ್ರದ ಸಿಬ್ಬಂದಿ, ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಜೊತೆಗೆ ಯಲಹಂಕ ಪೊಲೀಸರನ್ನು ಸಂಪರ್ಕಸಿ ಮಾಹಿತಿ ನೀಡಿದ್ದರು. ಯಲಹಂಕ ಠಾಣೆ ಪೊಲೀಸರು ಪಾರ್ವತಮ್ಮ ಅವರನ್ನು ಪತ್ತೆ ಹಚ್ಚಿ, ಠಾಣಾ ಸಿಬ್ಬಂದಿ ಜತೆಗೆ ನಾಗಪುರಕ್ಕೆ ಕರೆದುಕೊಂಡು ಹೋದರು. ಮಾ.7ರಂದು ಮಗನನ್ನು ಕಂಡ ಪಾರ್ವತಮ್ಮ ಭಾವುಕರಾಗಿದ್ದು, ಸದ್ಯ ಮನೆಗೆ ಕರೆ ತಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next