Advertisement

ಅ.8: ಪಿಲಿಕುಳದಲ್ಲಿ ಹಸುರೀಕರಣ ಯೋಜನೆ ಉದ್ಘಾಟನೆ

10:33 AM Oct 06, 2017 | |

ಮಹಾನಗರ: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಎಂಆರ್‌ಪಿಎಲ್‌ ಪ್ರಾಯೋಜಕತ್ವದಲ್ಲಿ ಪೂರ್ಣಗೊಂಡ ಮೊದಲನೇ ಹಂತದ ಹಸುರೀಕರಣ ಯೋಜನೆಯ ಉದ್ಘಾಟನೆ ಮತ್ತು ಎರಡನೇ ಹಂತದ ಪ್ರಾರಂಭೋತ್ಸವವು ಅ.8ರಂದು ಪಿಲಿಕುಳದಲ್ಲಿ ನಡೆಯಲಿದೆ.

Advertisement

ಪ್ರಥಮ ಹಂತದಲ್ಲಿ ಇಪ್ಪತ್ತು ಎಕರೆ ಪ್ರದೇಶದಲ್ಲಿ 2,000ಕ್ಕೂ ಮಿಕ್ಕಿ ಪಶ್ಚಿಮ ಘಟ್ಟದ ವಿವಿಧ ತಳಿಗಳ ಸಸ್ಯಗಳನ್ನು, 1,000 ಔಷಧೀಯ ಸಸ್ಯಗಳನ್ನು ನೆಡಲಾಗಿದೆ. ಜತೆಗೆ ಇದೇ ಪ್ರದೇಶದಲ್ಲಿ ಚಿಟ್ಟೆಗಳನ್ನು ಆಕರ್ಷಿಸುವ ಉದ್ದೇಶದಿಂದ ಸುಮಾರು 1ಸಾವಿರದಷ್ಟು ವಿವಿಧ ಚಿಟ್ಟೆಗಳಿಗೆ ಪ್ರಿಯವಾದ ಸಸ್ಯಗಳನ್ನು ನೆಡಲಾಗಿದೆ. ವಿವಿಧ ಜಾತಿಯ ತಾವರೆಗಳು, ಜಲ ಸಸ್ಯಗಳೂ ಇಲ್ಲಿದೆ. ಜೈವಿಕ ಉದ್ಯಾನವನದಲ್ಲಿರುವ ಸುಮಾರು 300ಕ್ಕೂ ಮಿಕ್ಕಿದ ಸಸ್ಯಾಹಾರಿ ಪ್ರಾಣಿಗಳ ಆಹಾರವಾಗಿ ನೇಪಿಯರ್‌ ಸಿಒ4 ಜಾತಿಯ ಮೇವನ್ನು ಬೆಳೆಸಲಾಗಿದೆ.

ಮೃಗಾಲಯದ ಪ್ರಾಣಿ, ಪಕ್ಷಿಗಳಿಗಾಗಿ ಬಾಳೆ, ಅನಾನಸು, ಕಬ್ಬು, ಗೆಡ್ಡೆಗೆಣಸುಗಳನ್ನು ಬೆಳೆಸಲಾಗಿದ್ದು, ಈ ಪ್ರದೇಶವು ಸಸ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ. ಪ್ರಥಮ ಹಂತದ 20 ಎಕರೆ ನೆಡುತೋಪಿನ ರಚನೆಗೆ ಮೂರು ವರ್ಷಕ್ಕೆ 30 ಲಕ್ಷ ರೂ. ಮತ್ತು ಎರಡನೇ ಹಂತಕ್ಕೆ 40 ಲಕ್ಷ ರೂ. ಎಂಆರ್‌ಪಿಎಲ್‌ ಸಂಸ್ಥೆ ವ್ಯಯಿಸುತ್ತಿದೆ.

ಕಾರ್ಯಕ್ರಮದ ದಿನ ಬೆಳಗ್ಗೆ 9.30ರಿಂದ ಸಂಜೆ 4 ಗಂಟೆಯವರೆಗೆ ವನ್ಯಜೀವಿ ಸಪ್ತಾಹದ ಅಂಗವಾಗಿ ಸಾರ್ವಜನಿಕರಿಗೆ ವನ್ಯಜೀವಿ ಛಾಯಾಚಿತ್ರ, ವಿದ್ಯಾರ್ಥಿಗಳಿಗೆ ಛಾಯಾಚಿತ್ರ, ಚಿತ್ರಕಲಾ ಹಾಗೂ ಛದ್ಮವೇಷ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸಹಿತ ಶಾಸಕರು ಮತ್ತು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next