ಮಹಾನಗರ: ಮಂಗಳೂರು ಸ್ಮಾರ್ಟ್ ನಗರವಾಗಿ ಅಭಿವೃದ್ಧಿಗೊಳ್ಳು ತ್ತಿದೆ. ಸಂಚಾರ ಸುವ್ಯವಸ್ಥೆಗೆ ಪೂರಕ ವಾಗಿ ಸೌಲಭ್ಯಗಳನ್ನು ಉನ್ನತೀಕರಣಗೊಳಿಸಲಾ ಗುತ್ತಿದೆ. ದ್ವಿಪಥ ರಸ್ತೆಗಳು ಚತುಷ್ಪಥವಾಗಿವೆ. ಡಾಮಾರು ರಸ್ತೆಗಳಿಗೆ ಕಾಂಕ್ರೀಟ್ ಕಾಮ ಗಾರಿ ನಡೆದಿವೆ. ಹೀಗೆ ನಗರ ಬೆಳೆದ, ಬೆಳೆ ಯುತ್ತಿರುವ ಗತಿಗೆ ಪೂರಕವಾಗಿ ಇಲ್ಲಿ ಪಾರ್ಕಿಂಗ್ ಸೌಲಭ್ಯ ಮಾತ್ರ ಇಲ್ಲಿ ಇಲ್ಲ!
ಪಾರ್ಕಿಂಗ್‌ಗಾಗಿ ಮಹಾನಗರ ಪಾಲಿಕೆ ರೂಪಿಸಿದ ಯೋಜನೆಗಳು ದಶಕಗ ಳಿಂದ ಕಡತಗಳಲ್ಲೇ, ಪ್ರಸ್ತಾವನೆಯಲ್ಲೇ ಸುತ್ತು ಹೊಡೆಯುತ್ತಿವೆ. ವಾಹನ ಚಾಲ ಕರು ಮಾತ್ರ ವಾಹನ ನಿಲುಗಡೆಗೆ ನಗರದಲ್ಲಿ ಅಲೆದಾಡುವ ಪರಿಸ್ಥಿತಿ ಇದೆ. ಎಲ್ಲಿಯಾದರೂ ಒಂದು ಕಡೆ ಜಾಗ ಸಿಕ್ಕಿದರೆ ಅದು ಅನಧೀಕೃತ ಪಾರ್ಕಿಂಗ್ ಎಂಬ ನೆಲೆಯಲ್ಲಿ ಪೊಲೀಸ್ ಇಲಾಖೆಗೆ ದುಬಾರಿ ದಂಡ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರು ಬಿಟ್ಟರೆ ಅತೀ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯದ ಎರಡನೇ ನಗರ ಎಂಬುದಾಗಿ ಮಂಗಳೂರು ಗುರುತಿಸಿಕೊಂಡಿದೆ. ನಗರದಲ್ಲಿ ವಾಣಿಜ್ಯ ವ್ಯವಹಾರ ಚಟುವಟಿಕೆಗಳು ವಿಸ್ತಾರ ಗೊಂಡಿವೆ.
ಮಂಗಳೂರು ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರ ಮತ್ತು ಪಾಲಿಕೆ ಕೇಂದ್ರ ವಾಗಿದೆ. ಆರೋಗ್ಯ ಕ್ಷೇತ್ರ, ಶಿಕ್ಷಣದ ಹಬ್ ಆಗಿ ರಾಜ್ಯ, ರಾಷ್ಟಮಟ್ಟದಲ್ಲಿ ಗುರುತಿಸಿ ಕೊಂಡಿದೆ. ಪ್ರಸಿದ್ಧ ಧಾರ್ಮಿಕ ಕೇಂದ್ರಗಳು, ಪ್ರವಾಸಿತಾಣಗಳು ಇರುವುದರಿಂದ ಹೊರ ಪ್ರದೇಶಗಳಿಂದ ಜನರು ಆಗಮಿಸುತ್ತಾರೆ. ಅಂಕಿ ಅಂಶಗಳ ಪ್ರಕಾರ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ದಿನವೊಂದಕ್ಕೆ ಮಂಗಳೂರಿಗೆ ಆಗಮಿಸಿ-ನಿರ್ಗಮಿಸುತ್ತಾರೆ.
ನಗರದ ಹೃದಯಭಾಗದ ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್, ಬಂದರು, ಕದ್ರಿ, ಲಾಲ್‌ಬಾಗ್, ಉರ್ವಸ್ಟೋರ್, ಕುಳೂರು, ಕಾವೂರು, ಕೆಪಿಟಿ, ಬಲ್ಮಠ, ಕಂಕನಾಡಿ, ವೆಲೆನ್ಸಿಯಾ, ಮಂಗಳಾದೇವಿ, ಪಂಪ್‌ವೆಲ್, ಪಿವಿಎಸ್ ವೃತ್ತದಿಂದ ಕರಂಲ್ಪಾಡಿ, ಪಿವಿಎಸ್ ವೃತ್ತದಿಂದ ಲಾಲ್‌ಬಾಗ್‌ವರೆಗಿನ ಪ್ರದೇಶ, ಕೊಟ್ಟಾರ ಚೌಕಿ, ಬಿಕರ್ನಕಟ್ಟೆ ಕೈಕಂಬ ಮುಂತಾದ ಪ್ರದೇಶಗಳಲ್ಲಿ ವಾಹನ ಪಾರ್ಕಿಂಗ್ ತಾಣಗಳಿಲ್ಲ. ರಸ್ತೆ ಬದಿಗಳಲ್ಲಿ ಇಲ್ಲವೆ ಯಾರದ್ದೊ ವಾಣಿಜ್ಯ ಮಳಿಗೆಗಳ ಜಾಗದಲ್ಲಿ ನಿಲ್ಲಿಸುವ ಅನಿವಾರ್ಯವಿದೆ. ಕೆಲವು ಬಾರಿ ಪಾರ್ಕಿಂಗ್ ವಿಚಾರದಲ್ಲಿ ಸಂಘರ್ಷಗಳು ನಡೆಯುವುದು ಇದೆ.
ಅಸಮರ್ಪಕ ನಿರ್ವಹಣೆ
ನಗರದಲ್ಲಿ ಪ್ರಸ್ತುತ ಕೆಲವು ಕಡೆ ಪಾರ್ಕಿಂಗ್ ತಾಣಗಳನ್ನು ಗುರುತಿಸಿ ಪಾವತಿ ಪಾರ್ಕಿಂಗ್ ತಾಣಗಳಾಗಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಹೆಚ್ಚಿನವುಗಳು ಆನ್‌ಸ್ಟ್ರೀಟ್ (ರಸ್ತೆಬದಿ) ಪಾರ್ಕಿಂಗ್ ತಾಣಗಳಾಗಿವೆ. ಈ ಪಾರ್ಕಿಂಗ್ ವ್ಯವಸ್ಥೆಗಳು ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಇದು ಹೊರತು ಪಡಿಸಿದರೆ ಬಹಳಷ್ಟು ಕಡೆಗಳಲ್ಲಿ ಅಧಿಕೃತವಾಗಿ ಪಾರ್ಕಿಂಗ್ ವ್ಯವಸ್ಥೆಗಳಿಲ್ಲ.