ಶ್ರೀರಂಗಪಟ್ಟಣ: ಮೂರು ತಿಂಗಳ ಹಿಂದೆ ವಾಸಕ್ಕೆ ಮನೆ ಇಲ್ಲದೆ ಶೌಚಾಲಯದಲ್ಲಿ ನೆಲೆಸಿದ್ದ ಮಹಿಳೆಯನ್ನು ಹೊರಗೆ ಕರೆತರಲಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಆಕೆಗೆ ಸೂಕ್ತ ನೆಲೆ ಕಲ್ಪಿಸುವಲ್ಲಿ ವಿಫಲರಾಗಿರುವುದರಿಂದ ಆ ಮಹಿಳೆ ಮತ್ತೆ ಶೌಚಾಲಯವನ್ನೇ ಸೇರಿಕೊಂಡಿದ್ದಾಳೆ.
ತಾಲೂಕಿನ ಗಂಜಾಂ ನಿವಾಸಿಯಾಗಿರುವ ನಿರ್ಮಲಾ ತನ್ನ ಎರಡು ಹೆಣ್ಣು ಮಕ್ಕಳೊಂದಿಗೆ ಎರಡು ವರ್ಷಗಳಿಂದ ಗ್ರಾಮದಲ್ಲಿರುವ ಶೌಚಾಲಯದಲ್ಲಿ ನೆಲೆಸಿದ್ದಳು. ಮೂರು ತಿಂಗಳ ಹಿಂದೆ ಈಕೆ ಶೌಚಾಲಯದೊಳಗೆ ಅಸಹನೀಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವುದರ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಿದ್ದವು.
ಇದರಿಂದ ಎಚ್ಚೆತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿ.ರಾಜಮೂರ್ತಿ ಸ್ಥಳಕ್ಕೆ ಆಗಮಿಸಿ ನೆರವಿನ ಭರವಸೆ ನೀಡಿದ್ದರು. ಅಲ್ಲದೆ, ಆ ಮಹಿಳೆಗೆ ತಾತ್ಕಾಲಿಕವಾಗಿ ಬಾಡಿಗೆ ಮನೆ ಮಾಡಿ ಇರಿಸಲಾಗಿತ್ತು. ಕೆಲವು ತಿಂಗಳ ಕಾಲ ಬಾಡಿಗೆ ಹಣ ಪಾವತಿಸುವ ಭರವಸೆ ನೀಡಿ ನಂತರ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದರು.
ಆದರೆ, ನಂತರದಲ್ಲಿ ಬಡ ಮಹಿಳೆ ವಾಸವಿದ್ದ ಬಾಡಿಗೆ ಮನೆಗೆ ಇದುವರೆಗೂ ಅಧಿಕಾರಿಗಳು ಬಾಡಿಗೆ ಹಣ ಪಾವತಿಸಿಲ್ಲ. ಪರ್ಯಾಯ ವ್ಯವಸ್ಥೆ ಕಲ್ಪಿಸುವ ಗೋಜಿಗೂ ಹೋಗಲಿಲ್ಲ. ಇದುವರೆಗೂ ಮನೆಗೆ ಬಾಡಿಗೆ ಹಣ ಪಾವತಿಸದಿದ್ದರಿಂದ ಮಾಲೀಕರು ಹಣ ಪಾವತಿಸುವಂತೆ ಪೀಡಿಸಲು ಆರಂಭಿಸಿದರು. ಬಾಡಿಗೆ ಹಣ ಪಾವತಿಸಲಾಗದ ಮಹಿಳೆ ನಿರ್ಮಲಾ ತನ್ನ ಮಕ್ಕಳೊಂದಿಗೆ ಮತ್ತೆ ಹಿಂದೆ ಇದ್ದ ಶೌಚಾಲಯವನ್ನೇ ಸೇರಿಕೊಂಡಿದ್ದಾರೆ.
ಈಕೆಯನ್ನು ಸ್ಥಳಾಂತರಿಸುವ ಸಮಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿ.ರಾಜಮೂರ್ತಿ ಇಲಾಖೆ ವತಿಯಿಂದ ಆರ್ಥಿಕ ನೆರವಿನ ಭರವಸೆ ನೀಡಿದ್ದರು. ಸಂತ್ರಸ್ತ ಮಹಿಳೆ ಅಧಿಕಾರಿಗಳನ್ನು ಬಾಡಿಗೆ ಹಣ ಕೇಳಿದರೆ ಗದರಿಸಿ ಕಳುಹಿಸಿದ್ದಾರೆ. ಇದುವರೆಗೂ ಯಾವುದೇ ನೆರವನ್ನೂ ನೀಡಿಲ್ಲ. ಅಧಿಕಾರಿ ವರ್ತನೆಯಿಂದ ಬೇಸತ್ತ ಮಹಿಳೆ ನಿರ್ಮಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಪುರಸಭೆಯವರು ಸಂತ್ರಸ್ತ ಮಹಿಳೆಗೆ ಸೂಕ್ತ ಜಾಗ ಗುರುತಿಸಿ ನೆಲೆ ಕಲ್ಪಿಸಿಕೊಡಬೇಕು. ಬಾಡಿಗೆ ಹಣವನ್ನೂ ಅವರೇ ಪಾವತಿಸಬೇಕು. ನಮ್ಮಲ್ಲಿ ನೆಲೆ ಇಲ್ಲದ ಮಹಿಳೆಯರಿಗೆ ನೆಲೆ ಕಲ್ಪಿಸಿಕೊಡುವ ಯಾವುದೇ ಕಾರ್ಯಕ್ರಮಗಳೂ, ಯೋಜನೆಗಳು ಇಲ್ಲ ಎಂದು ಕೈಚೆಲ್ಲಿದ್ದಾರೆ.