Advertisement

Mangaluru: ವೆ‌ನ್ಲಾಕ್‌ನಲ್ಲಿ ಸುಸಜ್ಜಿತ ಸರ್ಜಿಕಲ್‌ ಬ್ಲಾಕ್‌ ಸಿದ್ಧ

02:18 PM Aug 07, 2024 | Team Udayavani |

ಮಹಾನಗರ: ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಮಂಗಳೂರಿನ ವೆನ್ಲಾಕ್‌ ಸರಕಾರಿ ಆಸ್ಪತ್ರೆ ಯಲ್ಲಿ ನಿರ್ಮಾಣಗೊಂಡ ಅತ್ಯಾಧುನಿಕ ಸರ್ಜಿಕಲ್‌ ಬ್ಲಾಕ್‌ ಕಟ್ಟಡ ರೋಗಿಗಳ ಸೇವೆಗೆ ಸಿದ್ಧವಾಗಿದೆ.

Advertisement

ಸುಮಾರು 53 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯ ಮೂಲಕ 2020ರ ಡಿಸೆಂಬರ್‌ ತಿಂಗಳಿನಲ್ಲಿ ಶಿಲಾನ್ಯಾಸ ಗೊಂಡ ಕಟ್ಟಡ ಈಗಾಗಲೇ ಉದ್ಘಾಟನೆ ಗೊಳ್ಳಬೇಕಿತ್ತು. ಕಟ್ಟಡ ಕಾಮಗಾರಿ ಬೇಗ ಆದರೂ ಕೆಲವೊಂದು ತಾಂತ್ರಿಕ ತೊಂದರೆ ಎಂಬ ನೆಪದಿಂದಾಗಿ ಉದ್ಘಾಟನೆ ಮಾತ್ರ ವಿಳಂಬವಾಗಿತ್ತು. ಸಮಸ್ಯೆ ಬಗೆಹರಿಸಿ, ಶೀಘ್ರ ಲೋಕಾರ್ಪಣೆಗೊಳಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂ ರಾವ್‌ ಅವರು ಕೂಡ ಸೂಚನೆ ನೀಡಿದ್ದರು. ಅದರಂತೆ ಸದ್ಯ ಉದ್ಘಾಟನೆಗೆ ರೆಡಿಯಾಗಿದೆ.

ವಿಳಂಬವೇಕೆ?

ಸ್ಮಾರ್ಟ್‌ಸಿಟಿಯಿಂದ ಅತ್ಯಾಕರ್ಷವಾಗಿ ಹೊಸ ಕಟ್ಟಡ ನಿರ್ಮಾಣವಾದರೂ ಇದು ಜನರಿಗೆ ಉಪಯೋಗಕ್ಕೆ ಸಿಗುವಂತಾಗಲು ಹಲವು ವರ್ಷ ಬೇಕಾಯಿತು. ಆರಂಭಿಕ ಯೋಜನೆಯ ಪ್ರಕಾರ ಸ್ಮಾರ್ಟ್ ಸಿಟಿಯಿಂದ ಕಟ್ಟಡ ನಿರ್ಮಾಣಕ್ಕೆ ಮಾತ್ರ ಅನುದಾನ ನೀಡಲಾಗಿತ್ತು. ಕಟ್ಟಡ ಕಾಮಗಾರಿ ಆದರೂ, ಇಲ್ಲಿ ಶಸ್ತ್ರಚಿಕಿತ್ಸೆಗೆ, ಚಿಕಿತ್ಸೆಗೆ ಸಂಬಂಧಿತ ಉಪಕರಣ ಇದ್ದಿಲ್ಲ. ವೆನ್ಲಾಕ್‌ ಹಳೆ ಕಟ್ಟಡದಲ್ಲಿರುವ ಸರ್ಜಿಕಲ್‌ ಬೆಡ್‌, ಸರ್ಜಿಕಲ್‌ ಉಪಕರಣವನ್ನು ಹೊಸ ಬ್ಲಾಕ್‌ನಲ್ಲಿ ಅಳವಡಿಸುವ ಉದ್ದೇಶ ಇತ್ತು. ಆರೋಗ್ಯ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂ ರಾವ್‌ ಈ ಹಿಂದೆ ಸಭೆ ನಡೆಸಿ, ಹೊಸ ಉಪಕರಣ ಖರೀದಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಮಾರ್ಟ್‌ಸಿಟಿಯು ವೆನ್ಲಾಕ್‌ಗೆ ಹೆಚ್ಚುವರಿ ಅನುದಾನ ನೀಡಿ ಉಪಕರಣ ಖರೀದಿ ಮಾಡಲಾಗಿದೆ.

ಆ.15ಕ್ಕೆ ಉದ್ಘಾಟನೆ ಸಾಧ್ಯತೆ

Advertisement

ಆರೋಗ್ಯ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂ ರಾವ್‌ ಅವರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿ ಯಾಗಲು ಆ.15ರಂದು ದ.ಕ. ಜಿಲ್ಲೆಗೆ ಆಗಮಿಸಲಿದ್ದಾರೆ. ವೆನ್ಲಾಕ್‌ ನಲ್ಲಿ ನಿರ್ಮಾಣಗೊಂಡ ಅತ್ಯಾಧುನಿಕ ಸರ್ಜಿಕಲ್‌ ಬ್ಲಾಕ್‌ ಕಟ್ಟಡವನ್ನು ಇದೇ ಸಂದರ್ಭದಲ್ಲಿ ಸಚಿವರಿಂದ ಉದ್ಘಾಟನೆ ಗೊಳಿಸಲು ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಏನೇನಿದೆ ಸರ್ಜಿಕಲ್‌ ಬ್ಲಾಕ್‌ನಲ್ಲಿ?

ಸಂಪೂರ್ಣ ಹವಾನಿಯಂತ್ರಿತ ಕಟ್ಟಡವು ತಳಮಹಡಿ, ನೆಲಮಹಡಿಯಲ್ಲದೆ ಹೆಚ್ಚುವರಿ 5 ಮಹಡಿ ಹೊಂದಿದೆ.
ಒಟ್ಟು 12 ಆಪರೇಷನ್‌ ಥಿಯೇಟರ್‌ ಮತ್ತು ಒಟ್ಟು 250 ಹಾಸಿಗೆಗಳೊಂದಿಗೆ ಸಂಪೂರ್ಣ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಸ್ಪೆಷಾಲಿಟಿ, ಸೂಪರ್‌ ಸ್ಪೆಷಾಲಿಟಿ ವಿಭಾಗಗಳಿವೆ.
ಹಳೆ ಮೆಡಿಸಿನ್‌ ಬ್ಲಾಕ್‌ನಿಂದ ಸರ್ಜಿಕಲ್‌ ಬ್ಲಾಕ್‌ಗೆ ಸಂಪರ್ಕಿಸಲು ಪಾದಾಚಾರಿ ಸೇತುವೆ ನಿರ್ಮಾಣ ಮಾಡಲಾಗಿದೆ.
ಕಟ್ಟಡದಲ್ಲಿ ಸಮಗ್ರ ಸುರಕ್ಷತೆ ಮತ್ತು ಸಂರಕ್ಷಣೆಗೆ ಬೇಕಾದ ಸೌಕರ್ಯ ಒದಗಿಸಲಾಗಿದೆ.

ಕ್ಯಾಥ್‌ ಲ್ಯಾಬ್‌ ನಿರ್ಮಾಣಕ್ಕೆ ಚಿಂತನೆ

ಹೃದಯ ಸಂಬಂಧಿಸಿದ ರೋಗಗಳ ಅತ್ಯಾಧುನಿಕ ತಪಾಸಣೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಇರುವ ಕಾರ್ಡಿಯಾಕ್‌ ಕ್ಯಾಥಟರೈಜೇಶನ್‌ ಲ್ಯಾಬ್‌ (ಕ್ಯಾಥ್‌ ಲ್ಯಾಬ್‌) ಸ್ಥಾಪಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಚಿಂತನೆ ನಡೆಸಿದೆ. ವೆನ್ಲಾಕ್‌ನಲ್ಲಿ ಈಗಾಗಲೇ ನಿರ್ಮಾಣ ಆಗಿರುವ ಅತ್ಯಾಧುನಿಕ ಸರ್ಜಿಕಲ್‌ ಬ್ಲಾಕ್‌ ಕಟ್ಟಡದ ಅಂತಸ್ತಿನಲ್ಲಿಯೇ ಲ್ಯಾಬ್‌ ಆರಂಭವಾಗುವ ಸಾಧ್ಯತೆ ಇದೆ.

ಸ್ಮಾರ್ಟ್‌ಸಿಟಿ ಯೋಜನೆ ಯಲ್ಲಿ ಅತ್ಯಾಧುನಿಕ ಸರ್ಜಿ ಕಲ್‌ ಬ್ಲಾಕ್‌ ಕಟ್ಟಡ ನಿರ್ಮಾಣ ಗೊಂಡಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ವೈದ್ಯಕೀಯ ಉಪಕರಣ ಜೋಡಣೆ ನಡೆಯುತ್ತಿದೆ. ವಾರದೊಳಗೆ ಪೂರ್ಣಗೊ ಳ್ಳಲಿದೆ. ಬಳಿಕ ಉದ್ಘಾಟನೆ ದಿನಾಂಕ ನಿಗದಿಯಾಗಲಿದೆ.

-ರಾಜು, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ

ಸ್ಮಾರ್ಟ್‌ಸಿಟಿ ವತಿಯಿಂದ ಸರ್ಜಿಕಲ್‌ ಬ್ಲಾಕ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ನಾಲ್ಕನೇ ಮಹಡಿಯವರೆಗೆ ಈಗಾಗಲೇ ಹಸ್ತಾಂತರಗೊಳಿಸಲಾಗಿದೆ. ಕೆಲವೊಂದು ಸೇವೆಗಳು ಮೊದಲನೇ ಹಂತದಲ್ಲಿ ಶೀಘ್ರ ಆರಂಭವಾಗಲಿದೆ.

– ಡಾ| ಜೆಸಿಂತ ಡಿ’ಸೋಜಾ, ಅಧೀಕ್ಷಕರು, ಜಿಲ್ಲಾ ಶಸ್ತ್ರಚಿಕಿತ್ಸಕರು ವೆನ್ಲಾಕ್‌ ಜಿಲ್ಲಾಸ್ಪತ್ರೆ ಮಂಗಳೂರು

ಹಲವು ಸೇವೆ ಆರಂಭ

ಹೊಸ ಸರ್ಜಿಕಲ್‌ ಬ್ಲಾಕ್‌ನಲ್ಲಿ ಮೊದಲನೇ ಹಂತದಲ್ಲಿ ಕೆಲವೊಂದು ಸೇವೆಗಗಳು ಶೀಘ್ರವೇ ಆರಂಭವಾಗಲಿದೆ. ಮುಖ್ಯವಾಗಿ ತಳ ಮಹಡಿ ರೇಡಿಯಾಲಜಿ ವಿಭಾಗದಲ್ಲಿ ಎಕ್ಸರೇ, ಅಲ್ಟ್ರಾಸೌಂಡ್‌, ಎಂಡೋಸ್ಕೋಪಿ, ಮೊದಲನೇ ಮಹಡಿಯಲ್ಲಿ ಯುರೋಲಜಿ, ಇಎನ್‌ಟಿ ವಿಭಾಗ ಆರಂಭಗೊಳ್ಳಲಿದೆ. ಎರಡನೇ ಮಹಡಿಯಲ್ಲಿ ನ್ಯೂರೋ ಸರ್ಜರಿ, ಹೃದಯಶಾಸ್ತ್ರ, ನೇತ್ರ ಶಾಸ್ತ್ರ ವಾರ್ಡ್‌, ಸೂಪರ್‌ ಸ್ಪೆಷಾಲಿಟಿ ಬೆಡ್‌ ಗಳು ಆರಂಭವಾಗಲಿದೆ. ಐದು ಮಾಡ್ಯುಲರ್‌ ಸೂಪರ್‌ ಸ್ಪೆಷಾಲಿಟಿ ಆಪರೇಷನ್‌ ಥಿಯೇಟರ್‌ಗಳು ಆರಂಭ ಆಗಲಿದೆ. ಕೆಎಂಸಿ ಮತ್ತು ವೆನ್ಲಾಕ್‌ ಸರಕಾರಿ ವೈದ್ಯರು ಸಹಕಾರ ನೀಡಲಿದ್ದಾರೆ. ಹೆಚ್ಚುವರಿ ಮಾನವ ಸಂಪನ್ಮೂಲಗಳನ್ನು ಕೆಎಂಸಿಯಿಂದ ನೀಡಲಾಗುತ್ತಿದೆ. ಕೆಎಂಸಿ ವತಿಯಿಂದ ಕ್ಯಾಥ್‌ ಲ್ಯಾಬ್‌ ಕಾಮಗಾರಿ, 8 ಬೆಡ್‌ ಗಳ ತುರ್ತು ಐಸಿಯು, ಅಪಘಾತ ತುರ್ತು ಚಿಕಿತ್ಸಾ ವಿಭಾಗ, ಜನರಲ್‌ ಸರ್ಜರಿ ಆಥೋìಪೆಡಿಕ್ಸ್‌ ವಿಭಾಗ ಎರಡನೇ ಹಂತದಲ್ಲಿ ಆರಂಭ ಆಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next