Advertisement

ಅಪ್ಪಯ್ಯ ಎಂಬ ಅಪೂರ್ವ ಅನುಬಂಧ : ಡಾ ಪ್ರದೀಪ್‌ ಸಾಮಗರ ಮಾತು

03:00 PM Jun 16, 2018 | Sharanya Alva |

ಮಲ್ಪೆ ವಾಸುದೇವ ಸಾಮಗರು  ಯಕ್ಷರಂಗದ ವಾಗ್‌ವಿಶಾರದ ಪ್ರಖ್ಯಾತ ಅರ್ಥಧಾರಿ, ವೇಷಧಾರಿಗಳು.  ಅಪಾರ ಅನುಭವದ ಆಗರ ಆಗಿರುವ ಸಾಮಗರ  ಪುತ್ರ ಡಾ.ಪ್ರದೀಪ್‌ ಸಾಮಗ ಅವರು ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದರಾದರೆ ವೃತ್ತಿಯಲ್ಲಿ ಪ್ರಾಧ್ಯಾಪಕರು.

Advertisement

ಮಲ್ಪೆ ಸಾಮಗ ಪರಂಪರೆಯ ಯಕ್ಷಗಾನದ ಕುರಿತಾಗಿನ ಅಪಾರ ಆಸಕ್ತಿಯನ್ನು ಮುಂದುವರಿಸಿರುವ ಪ್ರದೀಪ್‌ ಸಾಮಗರು ತಂದೆಯ ಮಾಗದರ್ಶನದಲ್ಲಿ ಉತ್ತಮ ಕಲಾವಿದರಾಗಿ ಸ್ತ್ರೀ ಮತ್ತು ಪುರುಷವೇಷಗಳೆರಡರಲ್ಲೂ ದಿಗ್ಗಜ ಕಲಾವಿದರ ಎದುರು ನಟಿಸಿ ಸೈ ಎನಿಸಿಕೊಂಡಿದ್ದಾರೆ. ತಮ್ಮ ಪಾತ್ರಗಳಲ್ಲಿ ತಂದೆ ವಾಸುದೇವ ಸಾಮಗರ ಮಾತಿನ ಶೈಲಿಯನ್ನು ಪ್ರೇಕ್ಷಕರಿಗೆ ಉಣ ಬಡಿಸುವ ಅವರು ಅಭಿನಯಿಸುವ ಪಾತ್ರಗಳಿಗೆ ಪರಿಪೂರ್ಣ ನ್ಯಾಯ ಒದಗಿಸುವವರು.

ಬೇಸ್‌ ಎಜುಕೇಷನ್‌ ಪ್ರೈ.ಲಿ ನಲ್ಲಿ ಪ್ರಾಧ್ಯಾಪಕರಾಗಿರುವ ಪ್ರದೀಪ್‌ ಅವರು ತಮ್ಮ ತಂದೆಯೊಂದಿನ ಅನುಬಂಧದ ಕುರಿತು ಬರೆದಿದ್ದಾರೆ.

ಅಪ್ಪಯ್ಯ ಎಂಬ ಅಪೂರ್ವ ಅನುಬಂಧ

ಯಕ್ಷಗಾನದಲ್ಲಿ ತನ್ನ ಮಾತುಗಾರಿಕೆಯಿಂದ ಸಂಚಲನವನ್ನುಂಟುಮಾಡಿದ ನನ್ನ ತಂದೆ ವಾಸುದೇವ ಸಾಮಗರು ಯಕ್ಷಗಾನದ ಬಗ್ಗೆ ಅರಿವಿರುವ ಎಲ್ಲರಿಗೂ ಚಿರಪರಿಚಿತ. ಸದಾ ಕಾಲ ಆಟ-ಕೂಟ ಎಂದು ತಿರುಗಾಟದಲ್ಲೇ ಇರುತ್ತಿದ್ದ ಅಪ್ಪಯ್ಯನೊಂದಿಗೆ ಆಟವಾಡುತ್ತಾ ಕಳೆಯುವ ಸಂದರ್ಭಗಳು ನನ್ನ ಬಾಲ್ಯದಲ್ಲಿ ಸಿಕ್ಕಿದ್ದೇ ವಿರಳ. ಎರಡೂ ಮೂರು ತಿಂಗಳಿಗೊಮ್ಮೆ ಬೆಳಿಗ್ಗೆ ಆಂಜನೇಯ ಬಸ್ಸಿಗೆ ಬಂದರೆ ಮಧ್ಯಾಹ್ನ ಮೂರುವರೆಯ ಮಲ್ಲಿಕಾರ್ಜುನ ಬಸ್ಸಿಗೆ ಮರಳಿ ಕ್ಯಾಂಪಿಗೆ ಹೋಗಬೇಕಾದ ಅನಿವಾರ್ಯತೆ. ಅದರ ಮಧ್ಯೆ ತುಸು ಮಾತು ಮತ್ತೆ ನಿದ್ರೆ.

Advertisement

ನನ್ನನ್ನು ಅಪ್ಪಯ್ಯ ತೊದಲು ನುಡಿಗಳಿಂದ ನುಡಿಸಿದ್ದೇ ಇಲ್ಲ.ಹಾಗಾಗಿ ಬಾಲ್ಯದಿಂದಲೂ ನನ್ನ ಅವರ ಸಂಭಾಷಣೆ ಓರಗೆಯ ಸ್ನೇಹಿತರಂತೆ. ನನ್ನ ಸಾಮರ್ಥ್ಯದ ಬಗ್ಗೆ ನನಗಿಂತ ಹೆಚ್ಚಿನ ನಂಬಿಕೆ ಇದ್ದವರು ಅವರು. ಅಥವಾ ಹಾಗೆ ತೋರಿಸಿಕೊಂಡು ನನ್ನಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿದವರು ಎನ್ನಬಹುದೇನೋ.

ತನ್ಮೂಲಕ ತನ್ನಲ್ಲಿದ್ದ ಸಾಹಸೀ ಪ್ರವೃತ್ತಿಯನ್ನು ನನ್ನಲ್ಲೂ ಸ್ಫುರಿಸಿದವರು ಅವರು . ನನಗೆ 2 ವರ್ಷವಿದ್ದಾಗ ಮುಂಬಯಿಯಿಂದ ಸ್ಕೇಟಿಂಗ್‌ ತಂದು ಕೊಟ್ಟಿದ್ದೋ, ನಲವತ್ತಡಿಯ ಕಲ್ಲು ಕಟ್ಟದ ಬಾವಿಗೆ ಕೊಡಪಾನ ಬಿದ್ದಾಗ , ಅಮ್ಮನ ವಿರೋಧದ ನಡುವೆ ಏನಾಗುವುದಿಲ್ಲ ಎಂಬ ಭರವಸೆ ನೀಡಿ 6 ವರ್ಷದ ನನ್ನನ್ನು ಬಾವಿಗಿಳಿಸಿದ್ದೋ, ಕೆಂಪಿರುವೆ ತುಂಬಿದ್ದ ಎತ್ತರದ ಹಲಸಿನ ಮರಕ್ಕೆ  ನೀ ಬಿದ್ರೆ ನಾ ಹಿಡ್ಕಂತೆ ಹತ್ತ್ ಎಂದು ಹತ್ತಿಸಿದ್ದೋ, ಅಟ್ಟದ ಬಲೆ ತೆಗೆಯಲು ಹದಿನೈದು ಅಡಿ ಎತ್ತರದ ಎರಡೂವರೆ ಇಂಚು ಪಕ್ಕಾಸಿನ ಮೇಲೆ ನಡೆಸಿದ್ದೋ, ಡಾಮರ್‌ ಡ್ರಮ್ಮಿನ ಮೇಲೆ ನಡೆಯುವ ಸರ್ಕಸ್‌ ಕಲಿಸಿದ್ದೋ, ಮನೆಗೆ ಆಗಾಗ ಬರುವ ನೆಂಟ ನಾಗರ ಹಾವಿನ ಬಾಲ ಹಿಡಿಸಿದ್ದೋ  ಇವೆಲ್ಲಾ ನಿದರ್ಶನಗಳಾಗಿ ನೆನಪಾಗುತ್ತದೆ.

ನನಗೆ ಹತ್ತು ವರ್ಷವಿದ್ದಾಗ ಶೃಂಗೇರಿಯಲ್ಲಿ ಶಿರಸಿ ಮೇಳದ ಮಧು-ಮಾಧವಿ ಪ್ರಸಂಗವನ್ನು ನೋಡಲೆಂದು ಕರೆದುಕೊಂಡು ಹೋಗಿ ,ಅಲ್ಲಿ ಎರಡು ವೇಷಗಳನ್ನು ಹಾಕಿಸಿ , ನನ್ನ ಬದುಕಿಗೆ ಯಕ್ಷಗಾನದ ಬಾಗಿಲನ್ನು ತೆರೆದುಕೊಟ್ಟವರು ಅವರೆ.

ಅವರ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದ್ದ ಎಲ್ಲಾ ಆಟ-ಕೂಟಗಳಲ್ಲಿ ನನಗೊಂದು ಪಾತ್ರ ನೀಡುತ್ತಾ ನನ್ನನ್ನು ತಿದ್ದಿ ತೀಡಿದವರು. ಆದರೆ ಇದರಿಂದ ಪೋಂಕು ಮಗನನ್ನು ಮೆರ್ಸುದು ಅಂತ ಎಷ್ಟು ಸಹ ಕಲಾವಿದರ ಟೀಕೆ ಕೇಳಿದ್ದಾರೋ ಗೊತ್ತಿಲ್ಲ.ಆದರೆ ಅದರ ಪರಿಣಾಮ ಈಗ ಕಾಣಿಸುತ್ತಿದೆ.

ಶಾಲಾ ಕಾಲೇಜಿನಲ್ಲಿ ಭಾಷಣ-ಪ್ರಬಂಧಗಳಿಗೆ ಮಾತ್ರವಲ್ಲ, ಯಕ್ಷಗಾನ ಪಾತ್ರ ಚಿತ್ರಣಗಳಿಗೂ ನನಗೆ ಅಪ್ಪಯ್ಯ ಆಕರ ಗ್ರಂಥ, ಯಾವುದಾದರೊಂದು ವಿಷಯವನ್ನು ಮತ್ತೆ ಮರೆಯದಂತೆ ಹೇಳುವ ಅವರ ಮನೋಜ್ಞ ಶೈಲಿ, ಒಬ್ಬ ಅಧ್ಯಾಪಕನಾಗಿ ನನಗೆ ಆದರ್ಶ. ಹೀಗೇ ನನ್ನ ಜೀವನದ ಹಲವು ಮಜಲುಗಳಲ್ಲಿ ನನಗೇ ಅರಿವಿರದಂತೆ ಗಾಢವಾಗಿ ಪ್ರಭಾವ ಬೀರಿ , ನನ್ನ ವ್ಯಕ್ತಿತ್ವವನ್ನು ರೂಪಿಸಿಕೊಟ್ಟ  ನನ್ನಪ್ಪಯ್ಯನೊಂದಿಗಿನ ಈ ಅನುಬಂಧ ಇನ್ನೂ ಹಲವು ಕಾಲ ದೊರಕುವಂತೆ ಭಗವಂತ ಅನುಗ್ರಹಿಸಲಿ ಎಂದು ಈ ತಂದೆಯರ ದಿನದಂದು ಹಾರೈಸುತ್ತೇನೆ .

*ಡಾ.ಪ್ರದೀಪ್‌ ಸಾಮಗ 

Advertisement

Udayavani is now on Telegram. Click here to join our channel and stay updated with the latest news.

Next