Advertisement

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

05:16 PM Sep 07, 2024 | Team Udayavani |

ಗೌರಿ ಗಣೇಶ ಕನ್ನಡಿಗರ ಬಹುದೊಡ್ಡ ಹಬ್ಬವಾಗಿದೆ. ಅದರಲ್ಲಿಯೂ ಮಹಿಳೆಯರು ಅತ್ಯಂತ ಭಕ್ತಿಯುತವಾಗಿ ಆಚರಿಸುತ್ತಾರೆ.

Advertisement

ಗೌರಿ ಹಬ್ಬವು ತನ್ನದೇ ಆದ ಪೌರಾಣಿಕತೆಯನ್ನು ಹೊಂದಿದ್ದು, ಗೌರಿಯು ತವರು ಮನೆಗೆ ಹೋಗುವ ಸಾಂಕೇತಿಕವಾಗಿದೆ. ಅಂತೆಯೇ ಇಂದು ಕೂಡ ಕೆಲವು ಸಂಪ್ರದಾಯದ ಪಾಲನೆ ನಡೆದುಕೊಂಡು ಬಂದಿದೆ. ವಿವಾಹವಾದ ಹೆಣ್ಣು ಮಕ್ಕಳಿಗೆ ತನ್ನ ತವರು ಮನೆಯಿಂದ ಬಾಗಿನ ರೂಪದಲ್ಲಿ ಕುಂಕುಮ, ಬಳೆ, ವೀಳ್ಯದೆಲೆ, ಹೂ – ಹಣ್ಣು, ತೆಂಗಿನಕಾಯಿ ಸೇರಿದಂತೆ ತವರು ಮನೆಯ ಪ್ರೀತಿಯನ್ನು ಉಡುಗೊರೆಯಾಗಿ ನೀಡಲಾಗುವುದು.

ಗೌರಿ ಪೂಜೆಯನ್ನು ಪ್ರತೀ ಮನೆಯ ಹೆಣ್ಣು ಮಕ್ಕಳು ಅತೀ ಶ್ರದ್ದೆಯಿಂದ ಪಾಲಿಸುತ್ತಾರೆ. ಗಂಗೆ ತಾಯಿಗೆ ಹೂ – ಹಣ್ಣು, ಕಾಯಿಗಳನ್ನು ಅರ್ಪಿಸಿ ಕಳಸವನ್ನು ಶ್ರದ್ದೆ ಭಕ್ತಿಯಿಂದ ಪೂಜಿಸಿ ಮನೆಗೆ ಕೊಂಡೊಯ್ಯಲಾಗುತ್ತದೆ. ನಂತರ ಪ್ರತಿ ಹೆಣ್ಣು ಮಕ್ಕಳು ಗೌರಿದಾರವನ್ನು ಧರಿಸುತ್ತಾರೆ.  ಇದರ ಉದ್ದೇಶವೆನೆಂದರೆ ಅವಿವಾಹಿತ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆ ಹಾಗೂ ನವ ವಿವಾಹಿತ ಹೆಣ್ಣು ಮಕ್ಕಳು ತನ್ನ ತವರು ಮನೆಗೆ ಹೋಗುವ ಪದ್ಧತಿಯೂ ಆಗಿದೆ. ಗೌರಿ ಹಬ್ಬದ ದಿನವೆಂದಕ್ಷಣ ನೆನಪಾಗುವುದೆಂದರೆ – ಶಾವಿಗೆ, ಊರುಗೆಸ, ಕಾಯಿ ಹಾಲು, ಹೋಳಿಗೆ ಇತ್ಯಾದಿ ಸಿಹಿ ತಿಂಡಿಯನ್ನು ತಯಾರಿಸಿ ಸವಿಯಲಾಗುತ್ತದೆ. ಗೌರಿ ಪೂಜೆಯ ನಂತರ ಸೂರ್ಯ ಮುಳುಗುವುದರೊಳಗೆ, ಮುಂಜಾನೆ ತಂದಂತಹ ಗಂಗೆಯನ್ನು ಹರಿಯುವ ನೀರಿಗೆ ಬಿಟ್ಟು, ಪುನಃ ಹರಿಯುವ ನೀರನ್ನು ಮನೆಗೆ ತಂದು ಪೂಜಿಸಲಾಗುತ್ತದೆ.

ಗೌರಿ ಪೂಜೆಯು ಮುಗಿದ ನಂತರ ಮರುದಿನ ಗೌರಿಯ ಮಗ ಗಣಪತಿಯನ್ನು ಪೂಜಿಸಲಾಗುತ್ತದೆ.

ಪ್ರತಿ ವರ್ಷದ ಭಾದ್ರಪದ ಶುಕ್ಲ ಪಕ್ಷದ ಚೌತಿಯ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಮೂರ್ತಿಯನ್ನು ಕೆಲವರು ಐದು ದಿನ ಹತ್ತು ದಿನದವರೆಗೆ ಪ್ರತಿಷ್ಠಾಪಿಸಿ ಸಂಭ್ರಮಿಸುತ್ತಾರೆ.

Advertisement

ಗಣಪನ ಹಬ್ಬದ ದಿನದಂದು ಗಣಪನಿಗೆ ಇಷ್ಟವಾದ ತಿನಿಸುಗಳು ಅಂದರೆ ಮೋದಕ, ಕಾಯಿ – ಕಡಬು, ಲಡ್ಡು, ಗರಜಿಕಾಯಿ, ಬಾಳೆಹಣ್ಣು, ಗರಿಕೆ ಹುಲ್ಲುಗಳನ್ನು ಗಣಪನಿಗೆ ನೈವೇದ್ಯವಾಗಿ ಅರ್ಪಿಸಿ, ತದನಂತರ ಗಣೇಶನಿಗೆ ಪೂಜೆ ಮಾಡಲಾಗುತ್ತದೆ.

ಹಳ್ಳಿಯ ಗಣೇಶ ಹಬ್ಬ ಎಂದರೆ ಅದರ ಸಂಭ್ರಮವೇ ಬೇರೆ. ಹಳ್ಳಿಯವರೆಲ್ಲ ಒಟ್ಟಾಗಿ ಗಣೇಶನ ಮೂರ್ತಿಯನ್ನು ಕೂರಿಸಿ, ಪಗಡೆ (ಕವಡೆ)ಯಾಡುವ ಪದ್ಧತಿ ರೂಢಿಯಲ್ಲಿದೆ. ಹಾಗೆಯೇ ಆರ್ಕೆಸ್ಟ್ರಾ, ಸಂಗೀತ ಕಚೇರಿ, ಕುಣಿತ ಸೇರಿದಂತೆ ಆಟ- ಓಟಗಳನ್ನು ಏರ್ಪಡಿಸಲಾಗುತ್ತದೆ. ಇಲ್ಲಿ ಜಾತಿ – ಮತ ಎಂಬ ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಖುಷಿಯಿಂದ ಪಾಲ್ಗೊಳ್ಳುತ್ತಾರೆ. ನಂತರ ಗಣೇಶನ ಮೂರ್ತಿಯನ್ನು ಮೆರವಣಿಗೆಯ ಮೂಲಕ ಕೊಂಡೊಯ್ದು, ಪೂಜೆ ಸಲ್ಲಿಸಿ, ಹರಿಯುವ ನದಿಗೆ ವಿಸರ್ಜಿಸಲಾಗುತ್ತದೆ.

ಹೀಗೆ ಗೌರಿ ಮತ್ತು ಗಣೇಶ ಹಬ್ಬವು ಪ್ರತಿಯೊಬ್ಬರಲ್ಲೂ ಏಕತಾಭಾವವನ್ನು ಮೂಡಿಸುತ್ತದೆ ಹಾಗೂ ಸಂಪ್ರದಾಯದ ಉಳಿವಿಗೆ ಕಾರಣವಾಗಿದೆ.

- ಕೀರ್ತನ ಒಕ್ಕಲಿಗ ಬೆಂಬಳೂರು

ವಿವೇಕಾನಂದ ಕಾಲೇಜು ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next