ಇಂಗ್ಲಿಷಿನಲ್ಲಿ ಒಂದು ಮಾತಿದೆ ” It’s not the destination, it is the journey” ಅಂತ. ಅಂದರೆ ಗಮ್ಯಸ್ಥಾನಕ್ಕಿಂತ ಅದನ್ನು ತಲುಪುವ ವರೆಗಿನ ದಾರಿ ಬಹಳ ಮುಖ್ಯವಾಗುತ್ತದೆ ಎಂದರ್ಥ. ನಾವು ಬದುಕುವ ರೀತಿ, ಸಾಧಿಸುವ ಕ್ರಮ, ಕೆಲಸ ಮಾಡುವ ಪದ್ಧತಿ ಹೀಗೆ ಎಲ್ಲದರ ಮೇಲೂ ಈ ಮಾತನ್ನು ಅಳವಡಿಸಿಕೊಳ್ಳಬಹುದು.
ಗುರಿಯನ್ನು ತಲುಪಲಿಕ್ಕೆ, ಅಂದುಕೊಂಡಿದ್ದನ್ನು ಸಾಧಿಸಲಿಕ್ಕೆ, ಮಾಡಬೇಕಾಗಿರುವ ಕೆಲಸವನ್ನು ಮಾಡಿ ಮುಗಿಸಲಿಕ್ಕೆ, ಪರೀಕ್ಷೆಗಳನ್ನು ಬರೆಯುವುದಕ್ಕೆ…ಹೀಗೆ ಪ್ರತಿಯೊಂದಕ್ಕೂ ನಾವು ಆ ಘಟ್ಟದವರೆಗೆ ಹೇಗೆ ತಲುಪಿದೆವು ಎಂಬುದು ಮುಖ್ಯ. ಇಡೀ ವರ್ಷ ಓದದೇ ಹೋದರೆ ಪರೀಕ್ಷೆಯ ಹಿಂದಿನ ದಿನ ಓದಿದ್ದು ತಲೆಯೊಳಗೆ ಇಳಿಯುವುದಿಲ್ಲ. ಅಡುಗೆ ಮಾಡುವ ಮೊದಲು ಏನು ಮಾಡಬೇಕು, ಬೇಕಾಗಿರುವ ಸಾಮಗ್ರಿಗಳೇನು, ಎಷು¤ ಹೊತ್ತು ಬೇಕಾಗಬಹುದು ಎಂದೆಲ್ಲ ಕರಾರುವಕ್ಕಾಗಿ ಯೋಚಿಸಿ ಮಾಡದಿದ್ದರೆ ಅಡುಗೆಯಾಗುವುದೇ ಇಲ್ಲ. ಇನ್ನು ಪ್ರಯಾಣದ ವಿಷಯಕ್ಕಂತೂ ಈ ಮಾತು ಬಹಳ ಸರಿಯಾಗಿ ಹೊಂದುತ್ತದೆ. ನಾವು ಯಾವ ಸ್ಥಳವನ್ನು ನೋಡಲಿಕ್ಕೆ ಹೋಗುತ್ತಿದ್ದೇ ವೋ ಆ ಸ್ಥಳವನ್ನು ತಲುಪುವವರೆಗಿನ ಪ್ರಯಾಣವನ್ನು ಆಸ್ವಾದಿಸಿದಾಗ ಅದು ಜೀವನಪೂರ್ತಿ ನೆನಪಾಗಿ ಮನಸ್ಸಿನಲ್ಲಿ ಉಳಿಯುತ್ತದೆ.
ಇದು ಅರಿವಾದ ಗಳಿಗೆಯಿಂದಲೂ ನಾನು ಪ್ರವಾಸಕ್ಕೆ ಹೋಗಲಿರುವ ಜಾಗದ ಜತೆಗೆ ಆ ಸ್ಥಾನಕ್ಕೆ ತಲುಪುವ ವರೆಗಿನ ಪ್ರಯಾಣವನ್ನು ಆಸ್ವಾದಿಸುವ ಪ್ರಯತ್ನ ಮಾಡುತ್ತೇನೆ. ಪ್ರಯಾಣ ಎಂದರೆ ಯಾವುದೋ ದೂರದ, ಗುಡ್ಡಗಾಡಿನ, ವಿಮಾನಯಾನದ ಪ್ರಯಾಣವಷ್ಟೇ ಅಲ್ಲ. ಪ್ರತೀ ದಿನ ಆಫೀಸಿಗೆ ಹೋಗಬೇಕಾದರೆ ಅದಕ್ಕೆ ತಲುಪಿಸುವ ಮೆಟ್ರೋ ಸವಾರಿ ಕೂಡ ಪ್ರಯಾಣವೇ. ಕಣ್ಣು ಬಿಟ್ಟು ನೋಡಿದರೆ ಹೊಸದೇನೋ ದಕ್ಕಬಹುದು. ಕೆಲವೊಮ್ಮೆ ಅಂತೂ, ಬೇಡಿ ಬಯಸಿ ನೋಡಿದ ಸ್ಥಳಗಳು ನಮ್ಮ ನಿರೀಕ್ಷೆಯನ್ನು ಸುಳ್ಳು ಮಾಡಿ ಮಾರ್ಗ ಮಧ್ಯದಲ್ಲಿ ದೊರೆತ ಯಾವುದೋ ಒಂದು ಜಾಗ ಅದಕ್ಕಿಂತ ಚೆಂದವೆನ್ನಿಸಿ ಬಿಡುತ್ತದೆ. ಅಂತಹದೇ ಒಂದು ಅನುಭವದ ಕತೆ ಇದು.
ಅದು ನವೆಂಬರ್‌ನ ಸಮಯ. ಶರತ್ಕಾಲದ ಬಣ್ಣ ಅಳಿದು ಎಲೆಗಳು ಒಣಗಿ ಬೋಳಾಗುತ್ತಿದ್ದ, ಘೋರ ಚಳಿಗಾಲ ಇನ್ನೇನು ಆರಂಭವಾಗಲಿದೆ ಎಂಬಂತಹ ಸಮಯ. ಆಗ ನಾವು ಲೇಕ್ ಟಾಹೋಗೆ ಹೊರಟಿ¨ªೆವು. ಕ್ಯಾಲಿಫೋರ್ನಿಯಾ ಮತ್ತು ನೇವಾಡಾ ರಾಜ್ಯದ ಮಧ್ಯದಲ್ಲಿ ಸಿಗುವ ಈ ಲೇಕ್ ಟಾಹೋ ಬೃಹತ್ ಗಾತ್ರದ ಸಿಹಿನೀರಿನ ಕೆರೆಯಿಂದ ಆವೃತವಾಗಿದೆ. ಸಿಯಾರಾ ಬೆಟ್ಟಗಳ ಮಧ್ಯದಿಂದ ಹರಿಯುವ ಈ ಕೆರೆ ಸಮುದ್ರವೇನೋ ಎಂದೆನ್ನಿಸುವಂತೆ ಅಲ್ಲಲ್ಲಿ ಬೀಚ್‌ಗಳನ್ನು ಹೊಂದಿದೆ. ಫೆಸಿಫಿಕ್ ಸಮುದ್ರ ಹತ್ತಿರದಲ್ಲೇ ಇದ್ದರೂ ಬೇ ಏರಿಯಾ ಜನರ ಫೇವರೇಟ್ ತಾಣಗಳಲ್ಲಿ ಲೇಕ್ ಟಾಹೋ ಸೇರಿಕೊಂಡಿದೆ. ಡಿಸೆಂಬರ್‌ನ ಸಮಯದಲ್ಲಿ ಇಲ್ಲಿ ಹಿಮವೂ ಬೀಳುತ್ತದಾದ್ದರಿಂದ ಸ್ನೋ ಫಾಲ್ ಮಿಸ್ ಮಾಡಿಕೊಳ್ಳುವ ಈ ಪಶ್ಚಿಮ ಕರಾವಳಿಯ ಮಂದಿ ಲೇಕ್ ಟಾಹೋಗೆ ಹೋಗಿ ಅಲ್ಲಿರುವ ಸ್ಕೀ ರೆಸಾರ್ಟ್‌ಗಳಲ್ಲಿ ಬೆಟ್ಟಗಳ ಮೇಲಿಂದ ಸ್ಕೀ ಮಾಡುತ್ತ ಕಾಲ ಕಳೆಯಲು ಇಚ್ಛಿಸುತ್ತಾರೆ.
ಆದರೆ ನಾವು ಹೋಗಿದ್ದ ಸಮಯ ಅತ್ತ ಬಿಸಿಲೂ ಅಲ್ಲದ, ಇತ್ತ ಹಿಮ ಬೀಳುವಷ್ಟು ಘೋರ ಚಳಿಯೂ ಅಲ್ಲದ ಕಾಲ. ನಾವು ಹೋದ ರಾತ್ರಿ ಮಳೆ ಸುರಿದಿತ್ತು. ಮೈ ಕೈಯೆಲ್ಲ ತಣ್ಣಗಾಗುವಷ್ಟು ಚಳಿಯಿದ್ದ ಮುಂಜಾನೆಯಲ್ಲಿ ನಾವು ಬೇಗನೆ ಎದ್ದು ಹೈಕ್ ಮಾಡಿಕೊಂಡು ಬರೋಣವೆಂದು ಹೊರಟಿದ್ದೇವು. ಫಾಲನ್ ಲೀಫ್ ಲೇಕ್, ನಮ್ಮ ದಾರಿಯುದ್ದಕ್ಕೂ ಸುಮಾರು ಮೂರು ಮೈಲಿಗಳವರೆಗೆ ಸುತ್ತುವರೆದಿತ್ತು. ಅದರ ತಿಳಿ ನೀರಿನೊಳಗೆ ಪ್ರತಿಫಲಿಸುತ್ತಿದ್ದ ಬೆಟ್ಟ ಆ ಮುಂಜಾನೆಯ ಸಮಯದಲ್ಲಿ ನೋಡಲು ಬಹಳ ಆಹ್ಲಾದವೆನ್ನಿಸುತ್ತಿತ್ತು. ಗ್ಲೆನ್ ಅಲ್ಪೈನ್ ಟ್ರೆಲ್ ಹಿಡಿದು ಸುಮಾರು ನಾಲ್ಕೆçದು ಕಿಲೋ ಮೀಟರ್ ನಡೆದು ಆ ಮಾರ್ಗಮಧ್ಯದಲ್ಲಿ ಸಿಗುವ ಅನೇಕ ಜಲಪಾತಗಳನ್ನು, ಶರತ್ಕಾಲದ ಬಣ್ಣಗಳು ಕಂಡಲ್ಲಿ ಕಣ್ತುಂಬಿಸಿಕೊಂಡು ಬರುವ ಯೋಜನೆ ನಮ್ಮದಾಗಿತ್ತು.
ಆದರೆ ಅಲ್ಲಿಗೆ ಹೋದ ಮೇಲೆ ಗೊತ್ತಾಗಿದ್ದು ಮಳೆಯ ಕಾರಣದಿಂದ ನೆಲವೆಲ್ಲ ರಾಡಿಯಾಗಿ ನಡೆದಾಡಲು ಆಗದ್ದರಿಂದ ಆ ಟ್ರೇಲ್ ಅಂದರೆ, ದಾರಿಯನ್ನು ಮುಚ್ಚಿ ಬಿಟ್ಟಿದ್ದರು. ನಮ್ಮ ಜತೆಗೆ ಇನ್ನೊಂದೈದಾರು ಜನ ಇದ್ದರೇನೋ.. ಎಲ್ಲರೂ ಮರಳಿ ಹೋದರೆ ನಾವು ಏನು ಮಾಡುವುದೆಂದು ಯೋಚನೆ ಮಾಡುತ್ತ ಅಲ್ಲಿಯೇ ಕುಳಿತಿದ್ದೇ ವು. ಮೋಡ ಕವಿದು ವಾತಾವರಣದಲ್ಲಿ ಮುಸುಕು ಹಾಕಿತ್ತು. ಎಲ್ಲ ಕಡೆಯೂ ಹೀಗೆ. ಆದರೆ ಇಡೀ ದಿನ ಏನು ಮಾಡಬೇಕು, ಹೇಗೆ ಸಮಯ ಕಳೆಯಬೇಕು ಎಂಬುದು ನಮ್ಮ ಆತಂಕ. ಕೆಲವೊಮ್ಮೆ ಹೀಗಾಗಿ ಬಿಡುತ್ತದೆ. ಏನೋ ನೋಡಬೇಕೆಂದುಕೊಂಡು ಹೋಗಿ ಯಾವುದೋ ಕಾರಣದಿಂದ ಅದು ಸಾಧ್ಯವಾಗದೇ ಹೋದರೆ ಮತ್ತೆಲ್ಲಿಗೆ ಹೋಗಬೇಕೆಂದು ತಿಳಿಯದಾಗಿ ಮಂಕು ಕವಿದಂತಾಗುತ್ತದೆ. ನಮ್ಮ ಪಟ್ಟಿಯಲ್ಲಿದ್ದುದೆಲ್ಲವೂ ಹೈಕ್ ಜಾಗಗಳೇ. ಮಳೆಯಂತೂ ಇಡೀ ಟಾಹೋದ ತುಂಬ ಸುರಿದಿದ್ದರಿಂದ ನಾವು ಬೇರೆ ಯಾವುದೇ ಜಾಗವನ್ನು ಹುಡುಕಿಕೊಂಡು ಹೋದರೂ ಇದೇ ಸಮಸ್ಯೆ ಎದುರಾಗುತ್ತದೆ ಎಂದು ತಿಳಿದು ಯೋಚನೆ ಮಾಡುತ್ತ ಕೂಳಿತ್ತಿದ್ದಾಗಲೇ ಮುಂದೆ ಇದ್ದ ಬೆಟ್ಟ ಕಣ್ಣಿಗೆ ಬಿದ್ದಿತ್ತು.
ಅದರ ಮುಂದೆ ಇದ್ದ ಸಣ್ಣ ರಸ್ತೆಯೂ ಕಣ್ಣಿಗೆ ಕಂಡು ಅಲ್ಲಿ ಹೋಗಿ ನೋಡಿಕೊಂಡು ಬಂದರಾಯಿತು ಎಂದು ಕಾರಿನ ಮೂಲಕ ಆ ದಾರಿಯನ್ನು ಹಿಂಬಾಲಿಸಿಕೊಂಡು ಹೊರಟೆವು. ಕಡಿದಾದ ಏರು ರಸ್ತೆ. ಎದುರಿಗೆ ಇನ್ನೊಂದು ಗಾಡಿ ಬಂದರೆ ಇಬ್ಬರಿಗೂ ಸಮಸ್ಯೆಯಾಗುವಂತಿತ್ತು. ಪುಣ್ಯಕ್ಕೆ ಯಾವ ಗಾಡಿಯೂ ನಮಗೆ ಎದುರಾಗಲಿಲ್ಲ. ಹಿಂದೆಯೂ ಯಾರೂ ಇರಲಿಲ್ಲ. ಆ ಜಾಗಕ್ಕೆ ಆ ಬೆಳಗಿನಲ್ಲಿ ಹೊರಟಿದ್ದವರು ನಾವಿಬ್ಬರೇ ಇರಬೇಕು. ಗೂಗಲ್ ಮ್ಯಾಪ್ಸ್‌ನಲ್ಲಿ ಆ ಜಾಗ ಇಲ್ಲದೇ ಇರುವುದು ಸಹ ಒಂದು ಕಾರಣವಿರಬಹುದೇನೋ…ದಾರಿ ಸಾಗಿದಂತೆ ಬೆಟ್ಟ ಹತ್ತಿರವಾಗತೊಡಗಿತು. ಆ ಪುಟ್ಟ ರಸ್ತೆಗೆ ಕೊನೆಯೇ ಇಲ್ಲವೇನೋ ಎಂಬಂತೆ ನಾವು ಮುಂದೆ ಹೋದಷ್ಟು ಇನ್ನಷ್ಟು ತೆರೆದುಕೊಳ್ಳುತ್ತಿತ್ತು. ಎದುರಿಗೆ ಬೆಳ್ಳನೆಯ ಕಲ್ಲಿನ ಬೆಟ್ಟ. ಸ್ವಲ್ಪ ಸಮಯದ ಅನಂತರ ಬೆಟ್ಟದ ಪಕ್ಕದಲ್ಲಿಯೇ ನಾವಿದ್ದೇವು. ಎತ್ತರದ ಜಾಗದಲ್ಲಿದ್ದುದರಿಂದ ದೂರ ದೂರಕ್ಕೂ ಆವರಿಸಿಕೊಂಡ ಕೆರೆಯನ್ನು, ನಗರವನ್ನು ತುಂಬಿದ ಮನೆಗಳನ್ನೆಲ್ಲ ನೋಡಬಹುದಿತ್ತು. ಕಾರನ್ನು ನಿಲ್ಲಿಸಿ ಸ್ವಲ್ಪ ಸಮಯ ಅಲ್ಲಿಯೇ ಕಳೆಯಲು ನಿರ್ಧರಿಸಿದೆವು. ಕುಳಿತುಕೊಳ್ಳಲು ಪ್ರಶಸ್ತವಾದ ಜಾಗವಿತ್ತು.
ಕುಳಿತುಕೊಳ್ಳಲು ವ್ಯವಸ್ಥೆ ಮಾಡಿಕೊಂಡು ಒಲೆ ಹಚ್ಚಿ, ಬರ್ಗರ್ ಮತ್ತು ಪ್ಯಾಟಿ ಬಿಸಿ ಮಾಡಿಕೊಂಡು ನಾಷ್ಟಾಕ್ಕೆ ಸಿದ್ಧ ಮಾಡಿಕೊಳ್ಳುವ ಹೊತ್ತಿಗೆ ಸೂರ್ಯ ಸಣ್ಣಗೆ ಇಣುಕುತ್ತಿದ್ದ. ಎದುರಿಗೆ ಬೃಹತ್ ಬೆಟ್ಟ. ಯಾರೂ ಇಲ್ಲದ ಇಡೀ ಜಾಗವೇ ನಮ್ಮದೆನ್ನಿಸುವಂತಹ ಏಕಾಂತ. ನಮ್ಮ ಉಸಿರು ನಮಗೆ ಕೇಳಿಸುವಷ್ಟು ಶಾಂತ ವಾತಾವರಣ. ಪಕ್ಷಿಗಳ ಚಿಲಿಪಿಲಿ. ಹಿಂದಿನ ದಿನ ಮಳೆಯಲ್ಲಿ ಮಿಂದು ಸ್ವತ್ಛವಾಗಿ ತೊಳೆದಂತಿದ್ದ ಭೂಮಿ. ಬಿಸಿ ಬಿಸಿ ತಿಂಡಿಯ ಅನಂತರ ಏಲಕ್ಕಿ ಬೆರೆಸಿದ ಚಹಾ ಸಹ ಸಿದ್ಧವಾಗಿತ್ತು. ಅಷ್ಟೊತ್ತಿಗೆ ಸೂರ್ಯನೂ ಬೆಚ್ಚನೆಯ ಕಿರಣಗಳನ್ನು ಹಾಯಿಸುತ್ತಿದ್ದ. ಮಧ್ಯಾಹ್ನವಾದರೂ ನಮಗೆ ಅಲ್ಲಿಂದ ಎದ್ದು ಬರಲಿಕ್ಕೆ ಮನಸ್ಸಾಗಲಿಲ್ಲ. ಗೂಗಲ್ ಮ್ಯಾಪ್ಸ್ ನೋಡಿ ಸಾವಿರಾರು ಜನ ರಿವಿವ್ಯೂ ಬರೆದು ವಾವ್ ಎಂದು ಉದ್ಘರಿಸಿದ ಜಾಗಗಳನ್ನು ಹುಡುಕಿಕೊಂಡು ಹೋಗುವ ನಮಗೆ ಅದೇ ಮೊದಲ ಬಾರಿಗೆ ಅನಾಯಾಸವಾಗಿ ಇಂತಹ ಜಾಗ ಸಿಕ್ಕಿದ್ದು. ಈಗಲೂ ಈ ಜಾಗ ಗೂಗಲ್ ಮ್ಯಾಪ್ಸ್‌ನಲ್ಲಿ ಕಾಣಿಸುವುದಿಲ್ಲ. ಬಾಯಿ ಮಾತಿನಲ್ಲಿ ಹೀಗೆ ಹೋಗಿ ಎಂದು ಹೇಳಬೇಕು. ಅದಕ್ಕೆ ಏನೋ ಮನುಷ್ಯರು ಸೋಕದ ಪವಿತ್ರ ಜಾಗದಂತಿತ್ತು. ಎಲ್ಲರೂ ಹೋಗುವ ಜಾಗಗಳಿಗೆ ಹೋಗಿ ಗುಂಪು ಗಲಾಟೆಯಲ್ಲಿ ಪ್ರವಾಸದಲ್ಲಿ ದಕ್ಕಬೇಕಾದ ಏಕಾಂತವನ್ನು ಕಳೆದುಕೊಳ್ಳುವುದಕ್ಕಿಂತ ಹೀಗೆ ಅಪರೂಪದ ಜಾಗಗಳನ್ನು ಹೆಕ್ಕಿ ನಮ್ಮದಾಗಿಸಿಕೊಂಡಾಗ, ಅಲ್ಲಿ ನೆನಪುಗಳನ್ನು ಬಿತ್ತಿ ಬಂದಾಗ ಸಿಗುವ ಆನಂದವೇ ಬೇರೆ ಅಲ್ಲವೇ?
*ಸಂಜೋತಾ ಪುರೋಹಿತ್