Advertisement

“ಎ’ತಂಡಗಳ 2ನೇ ಟೆಸ್ಟ್‌: ಡ್ರಾದತ್ತ ಭಾರತ-ಆಫ್ರಿಕಾ ಪಂದ್ಯ

06:00 AM Aug 13, 2018 | Team Udayavani |

ಬೆಂಗಳೂರು: ಉದ್ಯಾನನಗರಿಯಲ್ಲಿ ನಡೆಯುತ್ತಿರುವ ಭಾರತ -ದಕ್ಷಿಣ ಆಫ್ರಿಕಾ “ಎ’ ತಂಡಗಳ ನಡುವಿನ ಎರಡನೇ ಟೆಸ್ಟ್‌ ಪಂದ್ಯ ನೀರಸ ಡ್ರಾದತ್ತ ಹೊರಳಿದೆ.

Advertisement

ರವಿವಾರದ ಮೂರನೇ ದಿನದ ಆಟದಲ್ಲಿ ಭಾರತ “ಎ’ ತಂಡ ನೀಡಿರುವ 345 ರನ್ನಿಗೆ ಉತ್ತರ ನೀಡುತ್ತಿರುವ ದಕ್ಷಿಣ ಆಫ್ರಿಕಾ “ಎ’ ತಂಡ ದಿನದಾಟದ ಅಂತ್ಯಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟಿಗೆ 294 ರನ್‌ ಗಳಿಸಿದೆ. ಆಫ್ರಿಕಾ “ಎ’ ತಂಡದ ಬ್ಯಾಟ್ಸ್‌ಮನ್‌ ಮುತ್ತುಸ್ವಾಮಿ (ಅಜೇಯ 23 ರನ್‌) ಹಾಗೂ ಇನ್ನೂ ಖಾತೆ ತೆರೆಯದ ಒಲಿವರ್‌ ಅಂತಿಮ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

3ನೇ ದಿನ ಆಫ್ರಿಕಾದ 4 ವಿಕೆಟ್‌ ಪತನ 
ಭಾರತದ ಮೊದಲ ಇನ್ನಿಂಗ್ಸ್‌ಗೆ ಪ್ರತಿಯುತ್ತರವಾಗಿ ಬ್ಯಾಟಿಂಗ್‌ ಆರಂಭಿಸಿದ್ದ ದಕ್ಷಿಣ ಆಫ್ರಿಕಾ “ಎ’ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡು 209 ರನ್‌ ಗಳಿಸಿತ್ತು. 3ನೇ ದಿನದ ಆಟದಲ್ಲಿ ಮುಂದುವರಿಸಿದ ಆಫ್ರಿಕಾ “ಎ’ ಭಾರತೀಯ ಬೌಲರ್‌ಗಳ ದಾಳಿಗೆ ಸಿಲುಕಿ ರನ್‌ ಗಳಿಸಲು ಒದ್ದಾಟ ನಡೆಸಿತು. ವಾನ್‌ ಡೆರ್‌ (22 ರನ್‌), ಪ್ರಿಟೋರಿಯಸ್‌ (10 ರನ್‌), ಪಿಡೆಟ್‌ (22 ರನ್‌) ಗಳಿಸಲಷ್ಟೇ ಶಕ್ತರಾದರು. ರುಡಿ ಸೆಕೆಂಡ್‌ (47 ರನ್‌) 3ನೇ ದಿನದ ಆಟದಲ್ಲಿ ಕೊಂಚ ಗಮನ ಸೆಳೆಯಬಲ್ಲ ಬ್ಯಾಟಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾದ ಏಕೈಕ ಬ್ಯಾಟ್ಸ್‌ಮನ್‌ ಎನ್ನುವುದು ದಿನದ ಹೈಲೈಟ್‌.

ಭಾರತದಿಂದ ತ್ರಿವಳಿ ದಾಳಿ 
ಮೊದಲ ಟೆಸ್ಟ್‌ ಪಂದ್ಯದಲ್ಲಿ ಮಿಂಚಿದ್ದ ವೇಗಿ ಮೊಹಮ್ಮದ್‌ ಸಿರಾಜ್‌ (58ಕ್ಕೆ 2)  ಆಫ್ರಿಕಾ ದೊಡ್ಡ ಮೊತ್ತದ ಕನಸಿಗೆ ಮತ್ತೂಮ್ಮೆ ಬ್ರೇಕ್‌ ಹಾಕಿದರು. ಮೊದಲ ಟೆಸ್ಟ್‌ ಪಂದ್ಯದಲ್ಲಿ ಸಿರಾಜ್‌ ತಲಾ ಐದರಂತೆ ಒಟ್ಟಾರೆ 10 ವಿಕೆಟ್‌ ಕಬಳಿಸಿದ್ದರು. ರಜಪೂತ್‌ (42ಕ್ಕೆ 2) ಮತ್ತು ಯಜುವೇಂದ್ರ ಚಹಲ್‌ (84ಕ್ಕೆ 2) ವಿಕೆಟ್‌ ಕಬಳಿಸಿ ಆಫ್ರಿಕಾ ರನ್‌ ವೇಗಕ್ಕೆ ಮೂಗುದಾರ ಹಾಕಿದರು.

ಪ್ರಸ್ತುತ ಸನ್ನಿವೇಶದಲ್ಲಿ ಮೊದಲ ಇನ್ನಿಂಗ್ಸ್‌ ಮುನ್ನಡೆಯಲು ಆಫ್ರಿಕಾಕ್ಕೆ ಇನ್ನೂ 51 ರನ್‌ ಬೇಕಿದೆ. ಕೈಯಲ್ಲಿ ಇರುವುದು ಕೇವಲ 3 ವಿಕೆಟ್‌. ಪವಾಡ ನಡೆದು 51 ರನ್‌ ಒಳಗೆ ಆಲೌಟಾದರೂ ಆಫ್ರಿಕಾವನ್ನು ಮತ್ತೆ ಭಾರತ ಬ್ಯಾಟಿಂಗ್‌ಗೆ ಆಹ್ವಾನಿಸಬಹುದು. ಅಥವಾ ತಾನೇ ಬ್ಯಾಟಿಂಗ್‌ ನಡೆಸಬಹುದು. ಏನೇ ನಡೆದರೂ ಅಂತಿಮವಾಗಿ ಪಂದ್ಯ ಡ್ರಾಗೊಳ್ಳುವ ಸಾಧ್ಯತೆಯೇ ಹೆಚ್ಚಿದೆ.

Advertisement

ಸಂಕ್ಷಿಪ್ತ ಸ್ಕೋರ್‌
ಭಾರತ “ಎ’ 1ನೇ ಇನ್ನಿಂಗ್ಸ್‌ 345; ದಕ್ಷಿಣ ಆಫ್ರಿಕಾ “ಎ’ 1ನೇ ಇನ್ನಿಂಗ್ಸ್‌ 7 ವಿಕೆಟಿಗೆ 294 (ರುಡಿ ಸೆಕೆಂಡ್‌ 47, ಮುತ್ತುಸ್ವಾಮಿ ಅಜೇಯ 23, ರಜಪೂತ್‌ 42ಕ್ಕೆ 2)

Advertisement

Udayavani is now on Telegram. Click here to join our channel and stay updated with the latest news.

Next