ಬ್ರಿಸ್ಬೇನ್: ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಉಳಿಸಿಕೊಳ್ಳುವ ಹಾದಿಯಲ್ಲಿರುವ ವಿಶ್ವದ ನಂ.1 ಆಟಗಾರ್ತಿ, ಬೆಲರೂಸ್ನ ಅರಿನಾ ಸಬಲೆಂಕಾ ಇದಕ್ಕಾಗಿ ಭರ್ಜರಿ ಸಿದ್ಧತೆಯೊಂದನ್ನು ಮಾಡಿಕೊಂಡಿದ್ದಾರೆ. 2025ನೇ ಸಾಲಿನ “ಬ್ರಿಸ್ಬೇನ್ ಓಪನ್ ಇಂಟರ್ನ್ಯಾಶನಲ್ ಟೆನಿಸ್’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ರವಿವಾರದ ಫೈನಲ್ನಲ್ಲಿ ಅರಿನಾ ಸಬಲೆಂಕಾ ರಷ್ಯಾದ ಅರ್ಹತಾ ಆಟಗಾರ್ತಿ ಪೊಲಿನಾ ಕುಡೆರ್ಮಟೋವಾ ವಿರುದ್ಧ 3 ಸೆಟ್ಗಳ ಕಾದಾಟ ನಡೆಸಿ 4-6, 6-3, 6-2 ಅಂತರದ ಜಯ ಸಾಧಿಸಿದರು.
“ವರ್ಷಾರಂಭದ ಈ ಟ್ರೋಫಿಯನ್ನು ಗೆದ್ದುದು ಸಂತಸ ಮೂಡಿಸಿದೆ. ಆಸ್ಟ್ರೇಲಿಯನ್ ಓಪನ್ನಲ್ಲಿ 3ನೇ ಸಲ ಪ್ರಶಸ್ತಿ ಉಳಿಸಿಕೊಳ್ಳುವ ನನ್ನ ಯೋಜನೆಗೆ ಇದು ಹೆಚ್ಚಿನ ಶಕ್ತಿ ತುಂಬಿದೆ’ ಎಂದು ಸಬಲೆಂಕಾ ಹೇಳಿದರು.
ಅರಿನಾ ಸಬಲೆಂಕಾ 2023 ಮತ್ತು 2024ರ ಸಾಲಿನ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಆಗಿದ್ದಾರೆ. 2023ರಲ್ಲಿ ಎಲೆನಾ ರಿಬಾಕಿನಾ ವಿರುದ್ಧ, ಕಳೆದ ವರ್ಷ ಜೆಂಗ್ ಕ್ವಿನ್ವೆನ್ ವಿರುದ್ಧ ಗೆದ್ದು ಬಂದಿದ್ದರು. ಈ ಸಲವೂ ಪ್ರಶಸ್ತಿ ಉಳಿಸಿಕೊಂಡರೆ 1997-1999ರ ಬಳಿಕ ಈ ಸಾಧನೆಗೈದ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಅಂದು ಮಾರ್ಟಿನಾ ಹಿಂಗಿಸ್ ಪ್ರಶಸ್ತಿಗಳ ಹ್ಯಾಟ್ರಿಕ್ ಸಾಧಿಸಿದ್ದರು.
ವರ್ಷಾರಂಭದ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ಸ್ಲಾಮ್ ಜ. 12ರಂದು ಆರಂಭವಾಗಲಿದೆ.