Advertisement
ಮನುಷ್ಯ ಹೀಗೂ ಯೋಚಿಸಬಹುದಾ ಎಂದು ಚಿಂತಿಸುವ ಅಂಶಗಳಿವೆ, ಸಿನಿಮಾ ಮುಗಿದು ಹೊರಗೆ ಬಂದರೂ ನಿಮ್ಮನ್ನು ಕಾಡುವ ಶಕ್ತಿಯೂ ಈ ಸಿನಿಮಾಕ್ಕಿದೆ. ಮನಸ್ಸಿನೊಳಗೆ ನಡೆಯುವ ಶಿಕಾರಿಯ “ದೃಶ್ಯರೂಪ’ವಾಗಿ ಈ ಚಿತ್ರ ಮೂಡಿಬಂದಿದೆ. ಇಲ್ಲಿ ಪರಿಚಿತ ಮುಖ ಎಂದಿರೋದು ಪ್ರಮೋದ್ ಶೆಟ್ಟಿ ಹಾಗೂ ಎಂ.ಕೆ.ಮಠ ಇಬ್ಬರೇ. ಉಳಿದಂತೆ ಇದು ಸಂಪೂರ್ಣ ಹೊಸಬರ ಸಿನಿಮಾ. ಆದರೆ, ಸಿನಿಮಾ ಸಾಗುತ್ತಾ ಇದು ಹೊಸಬರ ಸಿನಿಮಾ ಎಂಬ ಭಾವವನ್ನು ಅಳಿಸಿ ಹಾಕಿ, ಒಂದು ಸುಂದರ ಕಥಾನಕವಾಗಿ ರಂಜಿಸುತ್ತಾ ಹೋಗುತ್ತದೆ.
Related Articles
Advertisement
ಚಿತ್ರದ ತುಂಬಾ ಸಹಜತೆ ತುಂಬಿಕೊಂಡಿರೋದು ಕೂಡಾ ಸಿನಿಮಾದ ಗಾಂಭೀರ್ಯತೆಯನ್ನು ಹೆಚ್ಚಿಸಿದೆ. ಇಡೀ ಸಿನಿಮಾ ಕರಾವಳಿ ಹಿನ್ನೆಲೆಯಲ್ಲಿ ಸಾಗುತ್ತದೆ. ಯಕ್ಷಗಾನದ ಹಿನ್ನೆಲೆಯೂ ಈ ಚಿತ್ರಕ್ಕಿದೆ. ಕೆಲವು ಸಿನಿಮಾಗಳು ಯಕ್ಷಗಾನ ಪಾತ್ರಗಳನ್ನು ಬಳಸಿ ಅಪಹಾಸ್ಯ ಮಾಡಿದಂತೆ ಇಲ್ಲಿ ಮಾಡಿಲ್ಲ. ತುಂಬಾ ಅಚ್ಚುಕಟ್ಟಾಗಿ ಬಳಸಲಾಗಿದೆ. ಜೊತೆಗೆ ಈ ಚಿತ್ರದಲ್ಲಿ ಸುಂದರ ಪರಿಸರವೂ ಇದೆ. ಅದು ಸಿನಿಮಾದಿಂದ ಹೊರತಾಗಿ, ಸಿನಿಮೇಟಿಕ್ ಬ್ಯೂಟಿಗಾಗಿ ಸೆರೆಹಿಡಿದಂತೆ ಭಾಸವಾಗದೇ, ಕಥೆಯ ಒಂದು ಭಾಗವಾಗಿದೆ.
ನಿರ್ದೇಶಕರು ತುಂಬಾ ತಾಳ್ಮೆಯಿಂದ ಕಥೆ ಹೇಳಿದ್ದಾರೆ. ಹಾಗಾಗಿ, ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ ಪ್ರಿಯರಿಗೆ ಇದು ನಿಧಾನ ಎನಿಸಬಹುದು. ಫೈಟ್, ಕಾಮಿಡಿ, ಹಾಡಿಗಾಗಿ ಇಲ್ಲಿ ಯಾವುದೇ ಟ್ರ್ಯಾಕ್ ಇಲ್ಲ. ಹೊಸ ಬಗೆಯ ನಿರೂಪಣೆಯೊಂದಿಗೆ “ಒಂದು ಶಿಕಾರಿಯ ಕಥೆ’ಯನ್ನು ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಪಾತ್ರಧಾರಿಗಳು ಅಕ್ಷರಶಃ ಪಾತ್ರವನ್ನು ಜೀವಿಸಿದ್ದಾರೆ. ವಿರಕ್ತ ಸಾಹಿತಿ ಶಂಭು ಶೆಟ್ಟಿಯಾಗಿ ಪ್ರಮೋದ್ ಶೆಟ್ಟಿಯವರದ್ದು ಮಾಗಿದ ಅಭಿನಯ.
ಪಾತ್ರಕ್ಕಿರಬೇಕಾದ ಗಾಂಭೀರ್ಯ, ಮಾಡದ ತಪ್ಪಿನ ಕೊರಗು, ತಂದೆಯ ಆಸೆಯ ಮೆಲುಕು .. ಹೀಗೆ ಪ್ರತಿ ದೃಶ್ಯಗಳಲ್ಲೂ ಪ್ರಮೋದ್ ಶೆಟ್ಟಿ ಇಷ್ಟವಾಗುತ್ತಾರೆ. ಇನ್ನು, ನಿಯತ್ತಿನ ಸೇವಕನ ಪಾತ್ರದಲ್ಲಿ ಎಂ.ಕೆ.ಮಠ ಹೊಂದಿಕೊಂಡಿದ್ದಾರೆ. ಉಳಿದಂತೆ ಯಕ್ಷಗಾನ ಕಲಾವಿದನಾಗಿ ಪ್ರಸಾದ್ ಅವರ ಪಾತ್ರ, ಉಳಿದಂತೆ ಮೋಹನ, ಉಮಾ, ಪಾತ್ರಗಳು ಸಿನಿಮಾವನ್ನು ಯಶಸ್ವಿಯಾಗಿ ಮುನ್ನಡೆಸಿವೆ. ಚಿತ್ರದ ಹಿನ್ನೆಲೆ ಸಂಗೀತ “ಶಿಕಾರಿ’ಯ ಸದ್ದು ಹೆಚ್ಚಿಸಿವೆ. ಕಾಡುವ ಸಿನಿಮಾವೊಂದರ ಭಾಗವಾಗ ಬೇಕೆಂದು ಬಯಸುವವರು ಈ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು.
ಚಿತ್ರ: ಒಂದು ಶಿಕಾರಿಯ ಕಥೆನಿರ್ಮಾಣ: ಶೆಟ್ಟಿಸ್ ಫಿಲಂ ಫ್ಯಾಕ್ಟರಿ
ನಿರ್ದೇಶನ: ಸಚಿನ್ ಶೆಟ್ಟಿ
ತಾರಾಗಣ: ಪ್ರಮೋದ್ ಶೆಟ್ಟಿ, ಸಿರಿ, ಪ್ರಸಾದ್, ಎಂ.ಕೆ.ಮಠ, ಅಭಿಮನ್ಯು ಪ್ರಜ್ವಲ್, ಶ್ರೀಪ್ರಿಯಾ ಮತ್ತಿತರರು. * ರವಿಪ್ರಕಾಶ್ ರೈ