Advertisement

ನನೆಗುದಿಗೆ ಬಿದ್ದ ಕ್ರೀಡಾಂಗಣದಲ್ಲೇ ಕ್ರೀಡಾಕೂಟ

06:06 PM Sep 05, 2022 | Team Udayavani |

ಅಫಜಲಪುರ: ಕಳೆದ ಆರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ತಾಲೂಕು ಕ್ರೀಡಾಂಗಣದಲ್ಲೇ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮಟ್ಟದ ಕ್ರೀಡಾಕೂಟ ಆಯೋಜಿಸಿದ್ದರಿಂದ ಕ್ರೀಡಾಸಕ್ತರು, ಕ್ರೀಡಾಪ್ರೇಮಿಗಳಿಗೆ ಅಸಮಾಧಾನ ಉಂಟಾಗಿದೆ.

Advertisement

2015-16ರಲ್ಲಿ 3.98ಕೋಟಿ ರೂ. ವೆಚ್ಚದಲ್ಲಿ ಎಂಟು ಎಕರೆ ಜಾಗದಲ್ಲಿ ತಾಲೂಕು ಕ್ರೀಡಾಂಗಣ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಅದು ಇನ್ನೂ ವರೆಗೂ ಮುಗಿದಿಲ್ಲ. ಚುನಾಯಿತರಾದ ಶಾಸಕರಾದವರೆಲ್ಲ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ತಾಲೂಕು ಕ್ರೀಡಾಂಗಣದಲ್ಲೇ ಆಚರಿಸುತ್ತೇವೆ ಎನ್ನುವ ಮಾತುಗಳನ್ನಾಡುತ್ತಾರೆ. ಆದರೆ ಇದುವರೆಗೂ ತಾಲೂಕು ಕ್ರೀಡಾಂಗಣವನ್ನು ಪೂರ್ಣಗೊಳಿಸುವ ಗೋಜಿಗೆ ಹೋಗುತ್ತಿಲ್ಲ ಎನ್ನುವುದೇ ದುರಂತ ಸಂಗತಿ.

ಕ್ರೀಡಾಂಗಣಕ್ಕೆ ಹೋಗಲು ದಾರಿಯೇ ಇಲ್ಲ: ಯಾವುದೇ ಒಂದು ಕಾಮಗಾರಿ ಮಾಡುವಾಗ ಅದಕ್ಕೆ ಹೋಗಲು ದಾರಿ ಮಾಡಿಕೊಂಡೇ ಕಾಮಗಾರಿ ಆರಂಭಿಸಬೇಕಾಗುತ್ತದೆ. ಆದರೆ ತಾಲೂಕು ಕ್ರೀಡಾಂಗಣಕ್ಕೆ ಹೋಗಲು ದಾರಿ ಇಲ್ಲದೇ ಕಾಮಗಾರಿ ಆರಂಭಿಸಲಾಗಿದೆ. ಅಲ್ಲದೇ ಕ್ರೀಡಾಂಗಣ ಮೇಲೆಯೇ ಹೈಟೆನ್ಶನ್‌ ವಿದ್ಯುತ್‌ ತಂತಿ ಹಾಯ್ದು ಹೋಗಿದೆ.ಇದರಿಂದ ಕ್ರೀಡಾಪಟುಗಳು ಜೀವ ಭಯದಲ್ಲಿ ಆಟವಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಿರ್ಲಕ್ಷ್ಯ: ತಾಲೂಕು ಕ್ರೀಡಾಂಗಣ ಕಾಮಗಾರಿ ನನೆಗುದಿಗೆ ಬೀಳಲು ಮುಖ್ಯ ಕಾರಣ ಭೂಸೇನಾ ನಿಗಮ ಇಲಾಖೆ ಹಾಗೂ ಜನಪ್ರತಿನಿಧಿಗಳು. ಜನಪ್ರತಿನಿಧಿ ಗಳು ಪ್ರತಿ ವರ್ಷ ಆ. 15 ಹತ್ತಿರವಾಗುತ್ತಿದ್ದಾಗ ಕ್ರೀಡಾಂಗಣ ಕಾಮಗಾರಿ ಮುಗಿಸಿ ಅಲ್ಲೇ ಸ್ವಾತಂತ್ರ ದಿನಾಚರಣೆ ಮಾಡುತ್ತೇವೆ ಎಂದು ಘೋಷಣೆ ಮಾಡುತ್ತಾರೆ. ಆದರೆ ಕಾಮಗಾರಿಗೆ ವೇಗ ನೀಡುವ ಕೆಲಸ ಮಾತ್ರ ಮಾಡುತ್ತಿಲ್ಲ. ಇನ್ನೊಂದೆಡೆ ಭೂಸೇನಾ ನಿಗಮ ಇಲಾಖೆ ಅ ಧಿಕಾರಿಗಳು ಕ್ರೀಡಾಂಗಣ ಕಾಮಗಾರಿ ಮುಗಿಸಬೇಕೆನ್ನುವ ಉತ್ಸುಕತೆಯನ್ನೇ ತೋರುತ್ತಿಲ್ಲ.

ಜಾಲಿ ಕಂಟಿ-ಕಲ್ಲು ಮುಳ್ಳಿನ ಜಾಗ: ಜಾಲಿ ಕಂಟಿ-ಮುಳ್ಳು ಕಲ್ಲಿನ ಜಾಗದಲ್ಲೇ ತಾಲೂಕು ಮಟ್ಟದ ಕ್ರೀಡಾಕೂಟ ಆಯೋಜನೆ ಮಾಡಿದ್ದು ಕ್ರೀಡಾಪಟುಗಳ ಅಸಮಾಧಾನಕ್ಕೆ ಕಾರಣವಾಗಿದೆ.

Advertisement

ತಾಲೂಕು ಕ್ರೀಡಾಂಗಣ ಕಾಮಗಾರಿಗೆ ದಾರಿ ಇಲ್ಲದೇ ಯೋಜನೆ ರೂಪಿಸಿದ್ದು ತಪ್ಪು. ಈಗ ರೈತರ ಮನವೊಲಿಸುವ ಕೆಲಸ ಮಾಡಿದ್ದೇನೆ. ಆದಷ್ಟು ಬೇಗ ಕಾಮಗಾರಿ ಸಂಬಂಧ ಸಮಸ್ಯೆಗಳನ್ನು ಸರಿಪಡಿಸಿ ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡಲಾಗುತ್ತದೆ.
ಎಂ.ವೈ. ಪಾಟೀಲ, ಶಾಸಕ

ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದವರು ಹೈಟೆನ್ಶನ್‌ ತಂತಿ ಕೆಳಗೆ 32ಲಕ್ಷ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಿದ್ದಾರೆ. ಅಲ್ಲದೇ ಪೆವಿಲಿಯನ್‌ ಬಳಿ ಕಟ್ಟಡ ಕಟ್ಟಿ 30 ಲಕ್ಷ ರೂ. ವ್ಯಯಿಸಿದ್ದಾರೆ. ಕ್ರೀಡಾಂಗಣಕ್ಕೆ ದಾರಿಯೂ ಇಲ್ಲದ್ದರಿಂದ ಸಮಸ್ಯೆಯಾಗುತ್ತಿದೆ. ಈಗ ಶಾಸಕರು ಹಾಗೂ ಅವರ ಪುತ್ರ ಅರುಣಕುಮಾರ ಪಾಟೀಲ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಕ್ರಿಡಾಂಗಣದ ಪಕ್ಕದ ಜಮೀನಿನ ರೈತರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹೈ ಟೆನ್ಶನ್‌ ತಂತಿ ಕೆಳಗೆ ಕಾಮಗಾರಿ ಮಾಡಿದ್ದಕ್ಕೆ ಕೆಲ ಅಧಿಕಾರಿಗಳ ಮೇಲೆ ಲೋಕಾಯುಕ್ತದಲ್ಲಿ ರೇಫರ್‌ ಆಗಿದೆ. ಈಗ ಅವರೆಲ್ಲ ನಿವೃತ್ತಿಯಾಗಿದ್ದಾರೆ. ಈ ಕೇಸು ಖುಲಾಸೆ ಆಗುವ ವರೆಗೆ ಕಾಮಗಾರಿ ಮಾಡಲು ಬರುವುದಿಲ್ಲ.
ಬಸವರಾಜ ರಾಠೊಡ, ಎಇಇ, ಕೆಆರ್‌ಐಡಿಎಲ್‌

ಮಲ್ಲಿಕಾರ್ಜುನ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next