ತೆಕ್ಕಟ್ಟೆ (ಬೇಳೂರು): ಸುಮಾರು ಒಂಬತ್ತು ವರ್ಷಗಳ ಹಿಂದೆ ಕುಂದಾಪುರ ಪರಿಸರದಲ್ಲಿ ಭಿಕ್ಷೆ ಬೇಡುತ್ತಿದ್ದ ಕಾವೇರಿ ಎನ್ನುವ ಬಾಲಕಿಯನ್ನು ಕುಂದಾಪುರದ ಕೆಲವು ಯುವಕರ ಸಹಕಾರದಿಂದ ಬೇಳೂರು ಸ್ಫೂರ್ತಿಧಾಮಕ್ಕೆ ದಾಖಲಿಸಿದ್ದರು. ಅಲ್ಲಿ ಹೊಸ ಜೀವನ ಪಡೆದುಕೊಂಡ ಕಾವೇರಿ ಪ್ರಸಕ್ತ ಸಾಲಿನ ಪಿಯುಸಿ ಕಲಾ ವಿಭಾಗದ ಪರೀಕ್ಷೆಯಲ್ಲಿ 533 ಅಂಕ ಗಳಿಸಿ ವಿಶೇಷ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಎಲ್ಲರಿಗೂ ಮಾದರಿಯಾಗಿದ್ದಾಳೆ.
ಒಂಬತ್ತು ವರ್ಷಗಳ ಹಿಂದೆ ಸಂಚಾಲಕ ಡಾ| ಕೇಶವ ಕೋಟೇಶ್ವರ ಅವರು ಬಾಲಕಿಯನ್ನು ಸಂಸ್ಥೆಗೆ ದಾಖಲಿಸಿಕೊಂಡಿದ್ದರು. ಕಲಿಕೆಗೆ ಪೂರಕವಾಗುವ ನಿಟ್ಟಿನಿಂದ ಕೆದೂರು ಸರಕಾರಿ ಪ್ರೌಢಶಾಲೆಗೆ ದಾಖಲಿಸಿದ್ದರು. ಕಾವೇರಿ ಎಸೆಸೆಲ್ಸಿಯಲ್ಲಿಯೂ ಉತ್ತಮ ಅಂಕವನ್ನು ಗಳಿಸಿದ್ದಳು. ಮುಂದೆ ಈಕೆ ತೆಕ್ಕಟ್ಟೆಯ ಪ. ಪೂ. ಕಾಲೇಜಿನಲ್ಲಿ ದಾಖಲಾಗಿ ಕಲಾ ವಿಭಾಗದಲ್ಲಿ ವ್ಯಾಸಂಗ ನಡೆಸಿದ್ದಳು. ಕಲಿಕೆಯ ಜತೆಗೆ ಇನ್ನಿತರ ಪಾಠೇತರ ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಉಪನ್ಯಾಸಕರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದಳು.
ಮುಂದಿನ ದಿನಗಳಲ್ಲಿ ಎಲ್‌ಎಲ್‌ಬಿ ಕಲಿಯಬೇಕು ಎನ್ನುವ ಹಂಬಲವಿದೆ. ಸಮಾಜದ ಕಟ್ಟಕಡೆಯ ಜನರ ಬದುಕುವ ಹಕ್ಕು,ಸಮಾನತೆ ಹಾಗೂ ನ್ಯಾಯವನ್ನು ಒದಗಿಸುವ ಕಾರ್ಯದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕು ಎನ್ನುವ ಬಯಕೆ ನನ್ನದು.
– ಕಾವೇರಿ