ಬೆಂಗಳೂರು: ಟೀಮ್‌ಇಂಡಸ್ ಫೌಂಡೇಷನ್ ತನ್ನ “ಚಂದ್ರಯಾನ’ ಮಿಷನ್‌ನಡಿ ಶಾಲಾ ಮಕ್ಕಳಿಗೆ ಬಾಹ್ಯಾಕಾಶದ ಬಗ್ಗೆ ಪಾಠ ಹೇಳುವುದಕ್ಕೆ ಉಪಗ್ರಹ ಆಧಾರಿತ ವಿಶೇಷ ಬಸ್‌ವೊಂದನ್ನು ಸಿದ್ಧಪಡಿಸಿದೆ.
ಕರ್ನಾಟಕ ಸೇರಿದಂತೆ ದೇಶದ ಒಂಬತ್ತು ರಾಜ್ಯಗಳಲ್ಲಿ ಸಂಚರಿಸಿ ಶಾಲಾ ಮಕ್ಕಳಿಗೆ ಉಚಿತವಾಗಿ ಸೌರಮಂಡಲದ ಬಗ್ಗೆ ಮಾಹಿತಿ ನೀಡಲಿರುವ ಈ ಹೈಟೆಟ್ ಬಸ್‌ಗೆ ಮಂಗಳವಾರ ಟಾಟಾ ಸಂಸ್ಥೆಯ ರತನ್ ಟಾಟಾ ಅವರು ಚಾಲನೆ ನೀಡಿದರು.
ಈ ಬಸ್‌ನೊಳಗೆ ಪ್ರವೇಶಿಸಿದರೆ ಸೌರಮಂಡಲದೊಳಗೆ ಪ್ರವೇಶಿಸಿದ ನೈಜ ಅನುಭವವಾಗುತ್ತದೆ. ಭೂಮಿಯ ಆಕಾರ, ಚಂದ್ರನ ರೂಪ, ಸೂರ್ಯ-ಚಂದ್ರ ಗ್ರಹಣ ಪ್ರಕ್ರಿಯೆ? ನಕ್ಷತ್ರಗಳ ಬಗ್ಗೆ ಮಕ್ಕಳಿಗೆ ಪ್ರಾಯೋಗಿಕವಾಗಿ ತಿಳಿಸಿಕೊಡಲಾಗುತ್ತದೆ. ಈ ಬಸ್ ಉಪಗ್ರಹ ಆಧಾರಿತವಾಗಿದ್ದು, ಬಾಹ್ಯಾಕಾಶದಲ್ಲಿ ಸುತ್ತಾಡುತ್ತಿರುವ ಉಪಗ್ರಹಗಳು, ಅವು ಯಾವ ಕಕ್ಷೆಯಲ್ಲಿ ಹಾದು ಹೋಗುತ್ತಿದೆ ಎಂಬುದನ್ನು ಬಸ್‌ನೊಳಗೆ ಅಳವಡಿಸಿರುವ ಸ್ಟುಡಿಯೋದಲ್ಲಿ ಕುಳಿತುಕೊಂಡು ಲೈವ್ ಅಗಿ ನೋಡಬಹುದು.
ಕರ್ನಾಟಕದಲ್ಲಿ ಈ ಬಸ್ ಬೆಂಗಳೂರಿನ ಕಾಡುಗೋಡಿ ಮತ್ತು ಹುಬ್ಬಳ್ಳಿಯಲ್ಲಿ ನಿಲುಧಿಗಡೆಧಿ ಯಾಗಿ, ಆ ಮೂಲಕ ಸುತ್ತಲಿನ ಸರ್ಕಾರಿ ಪ್ರೌಢಶಾಲೆಗಳ ಮಕ್ಕಳನ್ನು ಆಯ್ಕೆ ಮಾಡಿಕೊಂಡು, ಬಾಹ್ಯಾಕಾಶದ ಬಗ್ಗೆ ಮಾಹಿತಿ ನೀಡಲಿದೆ. ಅದಕ್ಕಾಗಿ ಈ ಬಸ್‌ನಲ್ಲಿ ಇಬ್ಬರು ನುರಿತ ಶಿಕ್ಷಕರು ಕೂಡ ಇದ್ದು, ಅವರು ಮಕ್ಕಳಿಗೆ ಸ್ಥಳೀಯ ಭಾಷೆಯಲ್ಲಿ ವೈಜ್ಞಾನಿಕ ಪಾಠ ಮಾಡುತ್ತಾರೆ.
ಡಿಸೆಂಬರ್ ಅಂತ್ಯಕ್ಕೆ ಚಂದ್ರನತ್ತ
“ಗೂಗಲ್ ಲೂನಾರ್ ಎಕ್ಸ್‌ಪ್ರೈಜ್’ನ ಜಾಗತಿಕ ಮಟ್ಟದ ಸ್ಪರ್ಧೆಯಡಿ ಆಯ್ಕೆಗೊಂಡು ಚಂದ್ರಯಾನ ಕೈಗೊಂಡಿರುವ “ಟೀಮ್ ಇಂಡಸ್’ ತಂಡ ಡಿಸೆಂಬರ್ ಅಂತ್ಯಕ್ಕೆ ಚಂದ್ರನ ಮೇಲೆ ನೌಕೆಯನ್ನು ಕಳುಹಿಸಲು ನಿರ್ಧರಿಸಿದೆ.