Advertisement

ಸುಗಮ-ಸುಲಲಿತ ಸಂಚಾರ ವ್ಯವಸ್ಥೆ ಮರೀಚಿಕೆ

04:13 PM Oct 15, 2022 | Team Udayavani |

ದಾವಣಗೆರೆ: ದಾವಣಗೆರೇಲಿ ಹಂಗೇನಿಲ್ಲ.. ಎಲ್ಲಂದ್ರಲ್ಲೆ ಹೆಂಗಂದ್ರಂಗೆ ಬೈಕ್‌, ಕಾರು, ಏನ್ಬೇಕಾದ್ರೂ.. ನುಗ್ಗಿಸ್ಕೊಂಡ್‌ ಹೋಗ್ಬೋದು ಎನ್ನುವಂತಾಗುತ್ತಿದೆ ಜಿಲ್ಲಾ ಕೇಂದ್ರ ದಾವಣಗೆರೆಯ ಸಂಚಾರಿ ವ್ಯವಸ್ಥೆ.

Advertisement

ದಾವಣಗೆರೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬೈಕ್‌, ಕಾರು ಚಾಲನೆ ಮಾಡಬೇಕು ಎಂದರೆ ನಿಜಕ್ಕೂ ಗುಂಡಿಗೆ ಗಟ್ಟಿ ಇರಬೇಕು. ಜೊತೆಗೆ ಭಂಡ ಧೈರ್ಯನೂ ಇರಲೇಬೇಕು. ಆಗಿದ್ದರೆ ಮಾತ್ರ ವಾಹನಗಳ ಚಾಲನೆ ಮಾಡಬಹುದು ಎನ್ನುವಂತಾಗುತ್ತಿಗಿದೆ ಸಂಚಾರಿ ವ್ಯವಸ್ಥೆ. ಜನನಿಬಿಡ ಜಯದೇವ ವೃತ್ತ, ಅಂಬೇಡ್ಕರ್‌ ವೃತ್ತ, ವಿದ್ಯಾರ್ಥಿ ಭವನ ವೃತ್ತ, ರಿಂಗ್‌ ರಸ್ತೆ ವೃತ್ತ ಮಾತ್ರವಲ್ಲ ಹಳೆಯ ದಾವಣಗೆರೆ ಭಾಗದಲ್ಲೂ ಸುಗಮ ಸಂಚಾರ ಎನ್ನುವುದು ಅಕ್ಷರಶಃ ಗಗನಕುಸುಮವಾಗುತ್ತಿದೆ. ಅನೇಕ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್‌ ಸಿಗ್ನಲ್‌ ಬಿದ್ದಿದೆ ಎಂದು ಸವಾರರು ಧೈರ್ಯವಾಗಿ ಹೋಗುವಂತೆಯೇ ಇಲ್ಲ. ಟ್ರಾಫಿಕ್‌ ಸಿಗ್ನಲ್‌ ಬಿದ್ದರೂ ಇನ್ನೊಂದು ಕಡೆಯಿಂದ ವಾಹನಗಳು ಯಾವುದೇ ಮುಲಾಜಿಲ್ಲದೆ ನುಗ್ಗಿ ಬರುತ್ತವೆ.

ಸಿಗ್ನಲ್‌ ಬಿದ್ದರೂ ಡೋಂಟ್‌ ಕೇರ್‌ ಎನ್ನುವಂತೆ ಬರುವಂತಹ ವಾಹನಗಳಿಂದ ತಪ್ಪಿಸಿಕೊಂಡು ಮುಂದೆ ಹೋಗಲು ಗಟ್ಟಿ ಗುಂಡಿಗೆ ಇರಬೇಕು. ಎ.ವಿ. ಕಮಲಮ್ಮ ಮಹಿಳಾ ಕಾಲೇಜು ರಸ್ತೆ ಒಮ್ಮುಖ ರಸ್ತೆಯಾಗಿತ್ತು. ಆಧುನೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಕೆಲ ಕಾಲ ಎಲ್ಲ ಕಡೆಯಿಂದ ಸಂಚಾರಕ್ಕೆ ಅವಕಾಶ ಮಾಡಿ ಕೊಡಲಾಗಿತ್ತು. ಈಗ ಎಲ್ಲ ಕಡೆ ನುಗ್ಗಿ ಬರುವ ವಾಹನಗಳ ನೋಡಿದರೆ ಒಮ್ಮುಖ ರಸ್ತೆ ಇದೆಯೋ ಇಲ್ಲವೋ ಎನ್ನುವುದೇ ಅಯೋಮಯವಾಗಿದೆ.

ಇನ್ನು ಶಾಲಾ-ಕಾಲೇಜು, ಕಚೇರಿ ಸಮಯದಲ್ಲಿ ಹೆಚ್ಚಿನ ಟ್ರಾಫಿಕ್‌ ಇರುವಾಗಲಂತೂ ಯಾವ ಕಡೆಯಿಂದ ಬೇಕಾದರೂ ವಾಹನಗಳು ಬರುತ್ತವೆ. ಒನ್‌ ವೇ ಎನ್ನುವುದೇ ಇಲ್ಲವಾಗಿದೆ.

ಇಲಾಖೆಯಿಂದಲೇ ಸ್ಪರ್ಧೆ!?: ಕೆಲ ಪ್ರಮುಖ ವೃತ್ತಗಳಲ್ಲಂತೂ ಒಂದು ಕಡೆಯಿಂದ ಇನ್ನೊಂದು ಕಡೆ ತೆರಳಲು ಸಿಗ್ನಲ್‌ ಬೋರ್ಡ್‌ನಲ್ಲಿ ನಿಗದಿ ಪಡಿಸಿರುವುದು ಕೇವಲ 9 ಇಲ್ಲವೇ 15 ಸೆಕೆಂಡ್‌. ಅಷ್ಟರೊಳಗೆ ವಾಹನ ಸವಾರರು ಒಂದು ಕಡೆಯಿಂದ ಇನ್ನೊಂದು ಕಡೆ ಹೋಗಲೇಬೇಕಾಗುವುದನ್ನ ನೋಡಿದರೆ ಇಲಾಖೆಯವರೇ ಏನಾದರೂ ಕಾಂಪಿಟೇಷನ್‌ ಇಟ್ಟಿದ್ದಾರಾ ಎನ್ನುವ ಂತಾಗಿದೆ. 2 ನಿಮಿಷ ವಾಹನಗಳನ್ನು ನಿಲ್ಲಿಸಿಕೊಳ್ಳಬೇಕಾದ ಸವಾರರು 9
ಇಲ್ಲವೇ 15 ಸೆಕೆಂಡ್‌ಗಳಲ್ಲಿ ಪಾಸ್‌ ಆಗಬೇಕು. ಇರುವಂತಹ 9, 15 ಸೆಕೆಂಡ್‌ ಗಳಲ್ಲಿ ಇನ್ನೊಂದು ಕಡೆಯಿಂದ ಯಾವ ಸಿಗ್ನಲ್‌ನೂ° ಲೆಕ್ಕಿಸದೆ ನುಗ್ಗಿ ಬರುವಂತಹ
ವಾಹನಗಳ ದಾಟಬೇಕು.ಇನ್ನು ಮಕ್ಕಳು, ಮರಿಇದ್ದರಂತೂ ಜೀವವನ್ನ ಕೈಯಲ್ಲೇ ಇಟ್ಟುಕೊಂಡು ವಾಹನ ಚಲಾಯಿಸಬೇಕು. ಕೆಲವಾರು ಸಿಗ್ನಲ್‌ಗ‌ಳಲ್ಲಿ ಸಂಚಾರಿ ಪೊಲೀಸರು ಕಾಣ ಸಿಗುವುದು ತೀರಾ ತೀರಾ ಅಪರೂಪ. ಇದ್ದರೂ ಅವರು ಯಾವುದೇ ತಂಟೆಗೂ ಬರದೇ ತಮ್ಮ ಪಾಡಿಗೆ ತಾವು ಇರುತ್ತಾರೆ. ಯಾರಿಗಾದರೂ ಏನಾದರೂ ಆದರೆ ಯಾರು ಹೊಣೆ ಎಂದು ಅನೇಕ
ಸಾರ್ವಜನಿಕರು ಪ್ರಶ್ನಿಸುತ್ತಾರೆ.

Advertisement

ಮನ ಬಂದಂತೆ ನಿಲುಗಡೆ: ದಾವಣಗೆರೆಯ ಕೆಲವಾರು ಕಡೆ ಮನಸ್ಸಿಗೆ ಬಂದಂತೆ
ವಾಹನಗಳ ನಿಲ್ಲಿಸುವುದು ಕಾಮನ್‌ ಎನ್ನುವಂತಾಗಿದೆ. ಪಿ.ಜೆ. ಬಡಾವಣೆಯ ಕೆಲವಾರು ಭಾಗದಲ್ಲಿ ಪ್ರತಿ ನಿತ್ಯವೂ ಇಂತಹ ವಾತಾವರಣ ಸರ್ವೇ ಸಾಮಾನ್ಯ. ಕೆಲವರಂತೂ ನಡು ರಸ್ತೆಯಲ್ಲೇ ವಾಹನಗಳ ನಿಲ್ಲಿಸಿಕೊಂಡು ಬಿಂದಾಸ್‌ ಆಗಿ ಮೊಬೈಲ್‌ನಲ್ಲಿ ಮಾತನಾಡುವುದು ಸಹಜ ಎನ್ನುವಂತಾಗಿದೆ. ಕೆಲವು ಕಡೆಯಲ್ಲಂತೂ ನಡು ರಸ್ತೆಯಲ್ಲೇ ಆರಾಮವಾಗಿ ನಿಂತು ಮನೆಯ ಕಷ್ಟ ಸುಖ ಮಾತನಾಡುವುದೂ ಇದೆ. ವಾಹನ ಸವಾರರೇ ದಾರಿ ಮಾಡಿಕೊಂಡು ಹೋಗಬೇಕು.

ಯಾವುದಾದರೂ ಅಪಘಾತ ಸಂಭವಿಸಿದಾಗಲೇ ಎಚ್ಚೆತ್ತುಕೊಳ್ಳುವ ಬದಲಿಗೆ ಸಂಚಾರಿ ನಿಯಮಗಳ ಪಾಲನೆ, ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಸುಗಮ, ಸುಲಲಿತ ಸಂಚಾರದತ್ತ ಸಂಬಂಧಿತರು ಗಮನ ಹರಿಸಬೇಕು ಎಂಬುದು ಅನೇಕರ ಒತ್ತಾಯ.

ನುಗ್ಗಿ ಬರುತ್ತಾರೆ
ಕೆಲವಾರು ರಸ್ತೆಗಳಲ್ಲಿ ವಾಹನಗಳ ನಡುವೆ ಕೊಂಚ ಜಾಗ ಇದ್ದರೆ ಸಾಕು ಯಾವುದೇ ಮುಲಾಜಿಲ್ಲದೆ ಅನೇಕ ವಾಹನ ಸವಾರರು ನುಗ್ಗಿ ಬರುತ್ತಾರೆ. ಮುಂದೆ, ಹಿಂದೆ ಇರುವವರ ಬಗ್ಗೆ ಕಿಂಚಿತ್ತೂ ಗಮನ ಕೊಡುವುದೇ ಇಲ್ಲ. ಅವರು ಮುಂದೆ ಹೋಗಬೇಕು ಅಷ್ಟೇ ಎನ್ನುವಂತೆ ಬರುವಂತಹ ವಾಹನ ಸವಾರರ ಬಗ್ಗೆಯೂ
ಇಲಾಖೆ ಯವರು ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ. ಕರ್ಕಶ ಸೈಲೆನ್ಸರ್‌, ಸೌಂಡ್‌, ಕೈ ಬಿಟ್ಟು ಗಾಡಿ ಚಲಾಯಿಸುವುದು ಕಂಡು ಬರುತ್ತದೆ.

ಡಾ.ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next