Advertisement
ಇದು ಕಳೆದ ವರ್ಷದ ಘಟನೆ. ಗ್ರಾಮಾಂತರ ಭಾಗದಲ್ಲಿನ ರಸ್ತೆಯಲ್ಲಿ ಸ್ಕಿಡ್ ಆಗಿ ಬೈಕ್‌ನಿಂದ ಗಂಡ ಹೆಂಡತಿ ಬೀಳುತ್ತಾರೆ. ಎದುರಿನಿಂದ ಬರುತ್ತಿದ್ದ ಬೈಕ್‌ಸವಾರ, ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸುವಷ್ಟು ಉಪಕಾರಿಯಾಗುತ್ತಾರೆ. ಅತ್ತ ಮಹಿಳೆ ಆಸ್ಪತ್ರೆಯಲ್ಲಿ ಸಾಯುತ್ತಾರೆ. ಕೆಲ ದಿನಗಳ ನಂತರ ಇವರನ್ನು ಆಸ್ಪತ್ರೆಗೆ ಸೇರಿಸಿ ಉಪಕಾರ ಮಾಡಿದ್ದನಲ್ಲ; ಆ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗುತ್ತದೆ. ಬೈಕ್ ಡಿಕ್ಕಿ ಹೊಡೆಸಿ ಅಪಘಾತಕ್ಕೆ ಕಾರಣರಾಗಿದ್ದಾರೆ ಎಂದು ಆರೋಪ ಹೊರಿಸಲಾಗಿರುತ್ತದೆ. ಮರುದಿನ ಎಲ್ಲ ಪತ್ರಿಕೆಗಳಲ್ಲಿ ಪೊಲೀಸ್ ಮೂಲವನ್ನು ಆಧರಿಸಿದ ಸುದ್ದಿಯಲ್ಲಿ ಉಪಕಾರಿಯೇ ವಿಲನ್. ವಿಮೆ ಪಡೆಯುವ ಆಟದಲ್ಲಿ ಉಪಕಾರಿ ಬಲಿಯಾಗುತ್ತಾನೆ. ಇಂಥದ್ದೇ ಇನ್ನೊಂದು ಪ್ರಕರಣದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದಾತ ಬೈಕ್‌ನಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದಾಗ ಹಿಂದಿನಿಂದ ಬಂದಾತ ಎತ್ತಿ ಸಹಾಯ ಮಾಡಲು ಮುಂದಾಗುತ್ತಾನೆ. ಆದರೆ ಮೃತನ ಸಂಬಂಧಿಕರು ಸಹಾಯ ಮಾಡಿದವನ ಮೇಲೆಯೇ ಗೂಬೆ ಕೂರಿಸುತ್ತಾರೆ. ಕೊನೆಗೆ ಸುಮಾರು 50 ಸಾವಿರ ರೂ. ತೆತ್ತು ಆತ ಸ್ಟೇಷನ್, ಕೋರ್ಟ್, ಕೇಸುಗಳಿಂದ ಬಚಾವಾಗಬೇಕಾಗುತ್ತದೆ. ಇಂತಹ ಪ್ರಕರಣಗಳನ್ನು ನೋಡಿದ ನಂತರ ಹೇಳಬಹುದು; ಅಪಘಾತದಲ್ಲಿ ರಸ್ತೆಯ ಮೇಲೆ ಬಿದ್ದು ನರಳುತ್ತಿರುವವರಿಗೆ ಸಹಾಯ ಮಾಡುವುದು ಅಪರಾಧವಲ್ಲ. ಅವರನ್ನು ರಕ್ಷಿ$ಸಲು ಹೋಗುವುದು ಪರಮಾಪರಾಧ!
ಮೊದಲ 48 ಘಂಟೆಗಳ ಚಿಕಿತ್ಸೆಯನ್ನು ಹಣವಿಲ್ಲದಿದ್ದರೂ ಜರುಗಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಹೆಜ್ಜೆಗಳು ನಿರಾಸೆ ತರುತ್ತವೆ. 2014ರ ಡಿಸೆಂಬರ್ 12ರಂದು ಲೋಕಸಭೆಯಲ್ಲಿ ಸದಸ್ಯರೋರ್ವರು ಈ ಕುರಿತು ತಂದ ಖಾಸಗಿ ಬಿಲ್‌ಗೆ ಯಾವ ರಾಜಕೀಯ ಪಕ್ಷಗಳೂ ಗಮನವನ್ನೇ ಕೊಡುವುದಿಲ್ಲ. ಇಂಥ ಬಲಿಪಶುಗಳ ರಕ್ಷಣೆಯ ಪಣ ತೊಟ್ಟಿರುವ “ಸೇವ್ ಲೈಫ್ ಪೌಂಡೇಶನ್’ ಈ ಬಿಲ್‌ನ ಕರಡನ್ನು ವೈಜಾnನಿಕವಾಗಿ ರೂಪಿಸಿತ್ತು. ಖಾಸಗಿ ಬಿಲ್‌ಗೆ ನಮ್ಮ ವ್ಯವಸ್ಥೆ ಬೆಲೆ ಕೊಡುವುದಿಲ್ಲ ಎಂಬುದು ಒಂದು ರೀತಿಯ ಸಂಪ್ರದಾಯವಾಗಿದ್ದರೂ ಕೊನೆಪಕ್ಷ ಆ ಬಿಲ್‌ನ ಅಂಶಗಳನ್ನು ಇರಿಸಿಕೊಂಡು ಒಂದು ಉತ್ತಮ ಕಾಯ್ದೆ ರೂಪಿಸುವ ಅವಕಾಶವಂತೂ ಸರ್ಕಾರಕ್ಕಿತ್ತು.
Related Articles
Advertisement
ಸಧ್ಯ ಕಾನೂನು ಒಂದು ಮಟ್ಟಿಗೆ ದಯಾಳು ನಾಗರಿಕರ ಪರವಿದೆ. 2016ರ ಜನವರಿಯಲ್ಲಿ ಸುಪ್ರೀಂಕೋರ್ಟ್ ಕೂಡ ಮಾರ್ಗದರ್ಶಿಗಳನ್ನು ಎತ್ತಿಹಿಡಿದಿರುವುದರಿಂದ ಅಷ್ಟರಮಟ್ಟಿನ ಸಂಕಷ್ಟಕ್ಕೆ ತೆರೆ ಬಿದ್ದಿದೆ. ಈ ನಡುವೆ ಈ ಮಾರ್ಗಸೂಚಿ ಎಲ್ಲ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗುತ್ತದೆ.
ಇದು ಅಂಕಿಅಂಶಗಳ ಕಾಲ. ಕರ್ನಾಟಕದಲ್ಲಿ 2013ರಲ್ಲಿ 39,591, 14ರಲ್ಲಿ 43,694, 2015ರಲ್ಲಿ 44,011 ಅಪಘಾತದ ಪ್ರಕರಣ ದಾಖಲಾಗಿದೆ. ಇದರಲ್ಲಿ ಅನುಕ್ರಮವಾಗಿ 52,793, 56,818 ಮತ್ತು 56,971 ಜನ ಗಾಯಾಳುಗಳಾಗಿದ್ದಾರೆ. 9,044, 10,444, 10,857 ಜನ ಅಸುನೀಗಿದ್ದಾರೆ. 2015ರಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಡೆದ 13,888 ಪ್ರಕರಣಗಳಲ್ಲಿ 18,262 ಜನ ಗಾಯಗೊಂಡರೆ 3,794 ಜನ ಸಾವನ್ನಪ್ಪಿದ್ದಾರೆ. ಈ ಅನುಪಾತ ರಾಜ್ಯ ರಸ್ತೆಗಳಲ್ಲಿ 10,693, 13,347 ಹಾಗೂ 3,047. ಸೈಕಲ್‌ನಲ್ಲಿ ಹೋಗುತ್ತಿದ್ದ 43 ಜನ 2015ರಲ್ಲಿ, 60 ಮಂದಿ 2014ರಲ್ಲಿ ಮತ್ತು 27 ಸವಾರರು 2013ರಲ್ಲಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ನ್ಯಾಷನಲ್ ಕ್ರೆ„ಮ್ ರೆಕಾರ್ಡ್ಸ್ ಬ್ಯೂರೋ ಪ್ರಕಾರ 2015ರೊಂದರಲ್ಲೇ ಬೆಂಗಳೂರಿನಲ್ಲಿ ಜರುಗಿದ 5001 ಅಪಘಾತದಲ್ಲಿ 890 ಜನ ಜೀವ ತೆತ್ತಿದ್ದಾರೆ.
ಇಷ್ಟಿದ್ದರೂ ಮತ್ತು ಸುಪ್ರೀಂಕೋರ್ಟ್ ಸೂಚಿಸಿದ್ದರೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಿರಲಿಲ್ಲವೇನೋ, ಕಳೆದ ವರ್ಷ ಇಂಥ ಒಂದು ಪ್ರಕರಣದಲ್ಲಿ ಅಪಘಾತಕ್ಕೀಡಾಗಿ ಸೊಂಟದ ಕೆಳ ಭಾಗವನ್ನೇ ಕಳೆದುಕೊಂಡ ವ್ಯಕ್ತಿಯೋರ್ವ ರಸ್ತೆ ಮಧ್ಯೆ ಸಹಾಯಕ್ಕಾಗಿ ಯಾಚಿಸುತ್ತಿದ್ದ ಹೃದಯದ್ರಾವಕ ಘಟನೆ ಎಬ್ಬಿಸಿದ ಕಲರವ ಕರ್ನಾಟಕ ಸರ್ಕಾರವನ್ನು ಎಚ್ಚರಿಸಿತ್ತು. ಕರ್ನಾಟಕ ಗುಡ್ ಸಮರಿಟೇನ್ ಮತ್ತು ಮೆಡಿಕಲ್ ಪೊ›ಫೆಶನಲ್(ಪೊ›ಟೆಕÏನ್ ಎಂಡ್ ರೆಗ್ಯುಲೇಶನ್ ಡೂರಿಂಗ್ ಎಮರ್ಜೆನ್ಸಿ ಸಿಚುಯೇಷನ್ಸ್)ಬಿಲ್, 2016ಕ್ಕೆ ರಾಜ್ಯದ ಬೆಳಗಾವಿ ಅಧಿವೇಶನದಲ್ಲಿ ಸಮ್ಮತಿ ಸಿಕ್ಕಿತ್ತು. ವರ್ಷಕ್ಕೆ 10 ಸಾವಿರಕ್ಕೂ ಹೆಚ್ಚು ಜನ ಜೀವ ತೆರುವ ಅತ್ಯಧಿಕ ಬಲಿದಾನದ ಮೂರು ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕ ಇಂತಹ ಕಾಯ್ದೆಗೆ ಮುಂದಾದ ಮೊದಲ ರಾಜ್ಯವಾಗಿತ್ತು.
ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ 5 ಕೋಟಿ ರೂ.ಗಳ ಆವರ್ತ ನಿಧಿ ಸ್ಥಾಪಿಸಿ, ದಯಾಳು ನಾಗರಿಕರಿಗೆ ಸಹಾಯ ಮಾಡಿದ್ದಕ್ಕೆ ಪುರಸ್ಕಾರವಾಗಿ ಒಂದೂವರೆ ಸಾವಿರ ರೂ. ನೀಡುವ, ಅವರಿಗೆ ಕೋರ್ಟ್, ಪೊಲೀಸ್ ಸ್ಟೇಷನ್ ಹಾಜರಾತಿಯಿಂದ ವಿನಾಯಿತಿ ಕೊಡುವ, ಅನಿವಾರ್ಯ ಸಂದರ್ಭದಲ್ಲಿನ ಹಾಜರಿಗೆ ವೆಚ್ಚ ಪಾವತಿಸುವ, ಗಾಯಾಳುವನ್ನು ದಾಖಲಿಸಿ ತಮ್ಮ ವರ ಕೊಟ್ಟು ಮರಳುವ ಹಾಗೂ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಗಾಯಾಳುಗೆ ಶುಲ್ಕ ಕೇಳದೆ ಚಿಕಿತ್ಸೆ ಆರಂಭಿಸುವ ಕುರಿತು ಕಾಯ್ದೆ ಪ್ರಸ್ತಾಪಿಸಿತ್ತು.
ಇತ್ತೀಚಿನ ಮಾಹಿತಿಯಂತೆ, ಕರ್ನಾಟಕದ ರಾಜ್ಯಪಾಲರು ಸದರಿ ಬಿಲ್‌ಗೆ ಈವರೆಗೆ ಅಂಕಿತವನ್ನೇ ಹಾಕಿಲ್ಲ. ಅವರಸಹಿ ಬೀಳದೆ ಕಾಯ್ದೆ ಜಾರಿಗೊಳ್ಳುವುದಿಲ್ಲ. ಕಾಯೆುª ಇದ್ದರೆ ಸಾಕಾಗುವುದಿಲ್ಲ. ಅದರ ಅಂಶಗಳನ್ನು ಅಳವಡಿಸಿಕೊಂಡು ನಿಯಮ ನಿಬಂಧನೆಗಳನ್ನು ರೂಪಿಸಬೇಕಾಗುತ್ತದೆ. ರಾಜ್ಯಪಾಲರ ಹಸ್ತಾಕ್ಷರವಿಲ್ಲದೆ ಅದನ್ನು ತಯಾರಿಸುವಂತಿಲ್ಲ. ಅಂದರೆ ಈಗಲೂ ಕರ್ನಾಟಕದಲ್ಲಿ ದಯಾಳು ನಾಗರಿಕರ ಪರವಾದ ಕಾನೂನು ಜಾರಿಯಲ್ಲಿಲ್ಲ. ಈ ನಡುವೆ ಕೇರಳ ಕೂಡ “ಗುಡ್ ಸಮರಿಟೇನ್ ಕಾಯ್ದೆ’ಯ ಜಾರಿಗೆ ಮುಂದಾಗಿದೆ. ಅಲ್ಲಿ 2017ರಲ್ಲಿ ನವೆಂಬರ್ ವೇಳೆಗೆ 35 ಸಾವಿರ ಅಪಘಾತದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರ ಜೀವ ಎರವಾಗಿದೆ. ಅವಸರ ಅಪಘಾತಕ್ಕೆ ಕಾರಣ. ದುರಂತವೆಂದರೆ ಈ ಮಾತನ್ನು ನಂಬಿ ಯಾವುದೇ ರಾಜ್ಯ ಸರ್ಕಾರ ಕ್ಷಿಪ್ರವಾಗಿ ಈ ಕುರಿತಾಗಿ ಕಾನೂನು ಮಾಡಲು ಮುಂದಾಗುತ್ತಿಲ್ಲ! ಇತ್ತ ಕರ್ನಾಟಕದಲ್ಲಿ ವಿಧಾನ ಮಂಡಲ ಬಿಲ್‌ಗೆ ಒಪ್ಪಿಗೆ ನೀಡಿದ್ದರೂ ರಾಜ್ಯಪಾಲರ ಸಮ್ಮತಿ ಲಭಿಸಿಲ್ಲ. ಅತ್ತ ಚುನಾವಣೆಯಲ್ಲಿ ಅಪಘಾತಕ್ಕೆ ಒಳಗಾಗಲು ಅಥವಾ ಮಾಡಲು ಸನ್ನದ್ಧರಾಗಿರುವ ರಾಜಕಾರಣಿಗಳಿಗೆ ರಸ್ತೆ ಪಾಲಾಗುವ ಜೀವಗಳ ಬಗ್ಗೆ ಗಮನಿಸಲು ಆಗುತ್ತಿಲ್ಲ. ಇದೂ ಒಂದು ದುರಂತ! -ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ