ಮಹಾನಗರದ ಪಾಲಿಗೆ 2017ನೇ ವರ್ಷ ಕರಾಳ ನೆನಪು. ಕಾರಣ, ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಸುರಿದ ಭಾರೀ ಮಳೆ. ಈ ವರ್ಷದ ಮಳೆ ಹಿಂದಿನ ಎಲ್ಲ ವರ್ಷಗಳ ದಾಖಲೆಯನ್ನು ಹಿಂದಿಕ್ಕಿದ್ದು ಎಷ್ಟು ನಿಜವೋ, ದಾಖಲೆ ಮಳೆಯಲ್ಲಿ ಜನರ ಜೀವ-ಜೀವನ ಕೊಚ್ಚಿಹೋಗಿದ್ದು ಕೂಡ ಅಷ್ಟೇ ಕಟು ವಾಸ್ತವ.
ಸೆಪ್ಟೆಂಬರ್-ಅಕ್ಟೋಬರ್ ತಿಂಗಳಾದ್ಯಂಥ ಎಡೆಬಿಡದೆ ಆರ್ಭಟಿಸಿದ ವರುಣ, ನಗರದಲ್ಲಿ ಎಂಟು ಮಂದಿ ಅಮಾಯಕರ ಪ್ರಾಣ ಹೊತ್ತೂಯ್ದಿದ್ದಾನೆ. ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜೆ.ಸಿ.ರಸ್ತೆಯಲ್ಲಿ ಮರ ಉರುಳಿ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಮೃತಪಟ್ಟರೆ, ಶಿವಾನಂದ ವೃತ್ತದ ಬಳಿಯ ಕಾಲುವೆಯಲ್ಲಿ ಯುವಕ ಕೊಚ್ಚಿ ಹೋಗಿದ್ದ.
ವರುಣನ ಆರ್ಭಟ ಮುಂದುವರಿದ ಹಿನ್ನೆಲೆಯಲ್ಲಿ ಮಹಾಲಕ್ಷ್ಮಿಬಡಾವಣೆ ವಿಧಾನಸಭೆ ಕ್ಷೇತ್ರದ ಕುರುಬರ ಹಳ್ಳಿ ವಾರ್ಡ್ ಅಕ್ಷರಶಃ ಪ್ರವಾಹ ಪೀಡಿತ ಪ್ರದೇಶವಾಗಿ ಮಾರ್ಪಟ್ಟಿತ್ತು. ಕುರುಬರಹಳ್ಳಿಯ ರಾಜಕಾಲುವೆ ಉಕ್ಕಿ ಹರಿದ ಪರಿಣಾಮ ಸುತ್ತಮುತ್ತಲ ಪ್ರದೇಶ ಜಲಾವೃತವಾಗಿ, ಮನೆಗಳಿಗೆ ನೀರು ನುಗ್ಗಿ ಜನ ಇನ್ನಿಲ್ಲದಂತೆ ತೊಂದರೆ ಅನುಭವಿಸಿದರು.
ಮನೆಯಿಂದ ಹೊರಬರುವ ವೇಳೆ ಗೋಡೆ ಕುಸಿದು ದಂಪತಿ ಮೃತಪಟ್ಟರೆ, ದೇವಸ್ಥಾನದ ಅರ್ಚಕ ಹಾಗೂ ತಾಯಿ-ಮಗಳು ಕಾಲುವೆಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಧಾರುಣ ಘಟನೆಗೆ ಕುರುಬರಹಳ್ಳಿ ಸಾಕ್ಷಿಯಾಗಿತ್ತು. ನಗರದ ಹಲವಾರು ಪ್ರದೇಶಗಳು ಜಲಾವೃತವಾಗ ಪರಿಣಾಮ, ಸಾರ್ವಜನಿಕರ ಆಸ್ತಿ ಸೇರಿದಂತೆ 1,660 ಕೋಟಿ ರೂ.ಗಿಂತಲೂ ಹೆಚ್ಚು ಮೊತ್ತದ ನಷ್ಟ ಉಂಟು ಮಾಡಿದ್ದು ವರುಣ ದೇವನ ಹೆಚ್ಚುಗಾರಿಕೆ.
ಇದರೊಂದಿಗೆ ಮಳೆಯಿಂದ ನಗರದಲ್ಲಿ 40 ಸಾವಿರಕ್ಕೂ ಹೆಚ್ಚು ರಸ್ತೆಗುಂಡಿಗಳು ಸೃಷ್ಟಿಯಾಗಿದ್ದು ದೊಡ್ಡ ಸುದ್ದಿಯಾಯಿತು. ಇಂಥ ಗುಂಢಿಗಳ ಶೀಘ್ರ ದುರಸ್ತಿಗೆ ಅಧಿಕಾರಿಗಳು ಮುಂದಾಗದ ಕಾರಣ, ನಗರದಲ್ಲಿ ಅಪಘಾತಗಳಾಗಿ ಸಾವು-ನೋವು ಸಂಭವಿಸಿದವು. ಈ ಸುದ್ದಿಗಳಿಂದಾಗಿ ಸಿಲಿಕಾನ್ ಸಿಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಯಿತು.