ಕೋವಿಡ್ ಬಂದಾಗಿನಿಂದ ಜಗತ್ತಿನ ಎಲ್ಲ ರಾಷ್ಟ್ರ ಆರ್ಥಿಕ ಸ್ಥಿತಿಯೂ ಹದಗೆಟ್ಟು, ಅಲ್ಲಿನ ದೇಶವಾಸಿಗಳೆಲ್ಲರೂ ಪರದಾಡುವಂತಾಗಿದೆ. ಭಾರತದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಆದರೆ ಈ ಸಂಕಷ್ಟದ ನಡುವೆಯೇ ಇಂಧನ ದರದಲ್ಲಿನ ಗಣನೀಯ ಏರಿಕೆ ಭಾರತೀ ಯರಿಗೆ ಹೊರೆಯಾಗುತ್ತಲೇ ಸಾಗಿದೆ. ಆದಾಗ್ಯೂ ಕೆಲವು ದಿನಗಳಿಂದ ಜಾಗತಿಕ ಕಚ್ಚಾ ತೈಲದ ದರಗಳಲ್ಲಿ ಕುಸಿತ ಕಾಣಿಸಿಕೊಂಡು ಈ ವರ್ಷದಲ್ಲಿ ಇದೇ ಮೊದಲ ಬಾರಿ ಭಾರತದಲ್ಲಿ ಇಂಧನ ದರಗಳು ಕಡಿಮೆಯಾಗಿವೆ ಯಾದರೂ, ಪೈಸೆಗಳ ಲೆಕ್ಕದಲ್ಲಿನ ಪೆಟ್ರೋಲ್-ಡೀಸೆಲ್ ದರಗಳ ಇಳಿಕೆ ಜನಸಾಮಾನ್ಯರಿಗೆ ಸಮಾಧಾನವಂತೂ ತರುವಂತಿಲ್ಲ.
ಈಗ ಸಾರ್ವಜನಿಕ ಚಟುವಟಿಕೆ ಮತ್ತೆ ಯಥಾಸ್ಥಿತಿಗೆ ಬಂದಿದೆ. ಹೀಗಾಗಿ ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲೇ ಇದ್ದ ಜನರಿಗೆ ಇಂಧನ ದರ ಏರಿಕೆ-ಇಳಿಕೆಯ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಈಗ ಎಲ್ಲರೂ ಮತ್ತೆ ಕಚೇರಿ ಹಾಗೂ ಇನ್ನಿತರ ಕಾರ್ಯಗಳಿಗೆ ಓಡಾಡುತ್ತಿದ್ದಾರೆ. ಹೀಗಾಗಿ ಬೇಸಗೆಯ ಧಗದ ಜತೆಗೆ, ಇಂಧನ ಬೆಲೆ ಏರಿಕೆಯ ಬಿಸಯೂ ಅವರನ್ನು ಹೈರಾಣಾಗಿಸಿದೆ. ಕಚ್ಚಾ ತೈಲದ ದರದಲ್ಲಿ ಇಳಿಕೆ ಕಾಣಿಸಿಕೊಂಡಾಗ, ಪೆಟ್ರೋಲ್-ಡೀಸೆಲ್ ಬೆಲೆಯೂ ಇಳಿಯಲಿ ಎಂಬುದು ಜನರ ಆಶಯ. ಆದರೆ ಈಗೆಂದಷ್ಟೇ ಅಲ್ಲ, ಕೋವಿಡ್ ಹಾವಳಿ ಆರಂಭವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರದಲ್ಲಿ ಗಣನೀಯ ಇಳಿಕೆ ಕಂಡುಬಂದಾಗಲೂ ಭಾರತದಲ್ಲಿ ಇಂಧನ ದರ ಕಡಿಮೆಯಾಗುವ ಬದಲು ಹೆಚ್ಚಾಗುತ್ತಲೇ ಹೋಯಿತು.
ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ಪ್ರಮುಖ ಆದಾಯ ಮೂಲಗಳಲ್ಲಿ ಒಂದು ಎನ್ನುವುದೇನೋ ಸರಿ. ರಾಜ್ಯ ಹಾಗೂ ಕೇಂದ್ರವು ಒಟ್ಟಾರೆಯಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 5 ಲಕ್ಷ ಕೋಟಿಗೂ ಅಧಿಕ ತೆರಿಗೆಯನ್ನು ಸಂಗ್ರಹಿಸುತ್ತವೆ. ಇದರಲ್ಲಿ ಬಹುಪಾಲು ತೆರಿಗೆಯು ರಾಜ್ಯ ಸರಕಾರಗಳ ತಿಜೋರಿ ಸೇರುತ್ತದೆ. ಈ ಕಾರಣಕ್ಕಾಗಿಯೇ, ಸಾರ್ವಜನಿಕರು, ಇಂಧನದ ಮೇಲಿನ ತೆರಿಗೆಯನ್ನು ತಗ್ಗಿಸಲು ಆಗ್ರಹಿಸುತ್ತಲೇ ಬಂದಿದ್ದಾರೆ.
ಕೇಂದ್ರ ಬಜೆಟ್ ಹಾಗೂ ಇತ್ತೀಚಿನ ರಾಜ್ಯ ಬಜೆಟ್ ಮಂಡನೆ ಸಂದರ್ಭದಲ್ಲೂ ತೆರಿಗೆ ಕಡಿತವಾಗಬಹುದು ಎಂಬ ಜನಸಾಮಾನ್ಯರ ನಿರೀಕ್ಷೆ ಹುಸಿಯಾಯಿತು. ಇನ್ನು ಪೆಟ್ರೋಲ್ ಡೀಸೆಲ್ ಬೆಲೆಯನ್ನು ಜಿಎಸ್‌ಟಿ ಅಡಿಯಲ್ಲಿ ತರುವ ಮಾತನಾಡಲಾಗಿತ್ತಾದರೂ, ಮುಂದಿನ 8-10 ವರ್ಷಗಳವರೆಗೆ ಈ ಕೆಲಸ ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ.
ಹೀಗಾಗಿ ಈಗ ಉಳಿದಿರುವ ದಾರಿಯೆಂದರೆ, ಇಂಧನ ದರಗಳ ಮೇಲಿನ ತೆರಿಗೆಯನ್ನು ತಗ್ಗಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮುಂದಾಗಬೇಕಿರುವುದು. ಪೆಟ್ರೋಲ್-ಡೀಸೆಲ್ ದರ ಏರಿಕೆಯೆಂದರೆ, ಇದರ ಪರಿಣಾಮ ಅಗತ್ಯ ವಸ್ತುಗಳ ದರಗಳ ಮೇಲೆಯೂ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಜನಸಾಮಾನ್ಯರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಲೇ ಹೋಗುತ್ತಾರೆ. ಈ ಕಾರಣಕ್ಕಾಗಿಯೇ, ಈಗಲಾದರೂ ಸರಕಾರಗಳು ಇಂಧನ ಬೆಲೆಯನ್ನು ಇಳಿಸಲು ಸಂಘಟಿತವಾಗಲೇಬೇಕಿದೆ.