ಕಳೆದ ಲೋಕಸಭಾ ಚುನಾವಣ ಸಂದರ್ಭದಲ್ಲಿ ಕೋಲಾರದಲ್ಲಿ ರಾಹುಲ್ ಗಾಂಧಿ ಮಾಡಿದ್ದ ಭಾಷಣದಲ್ಲಿ ಲೂಟಿಕೋರ ರೆಲ್ಲರೂ ಮೋದಿ ಹೆಸರಿನವರೇ ಆಗಿರುವುದೇಕೆ ಎಂಬ ವ್ಯಂಗ್ಯದ ಮಾತುಗಳಿಗಾಗಿ ಸೂರತ್ ನ್ಯಾಯಾಲಯದಿಂದ ಎರಡು ವರ್ಷಗಳ ಸಜೆ ಶಿಕ್ಷೆ ಅನುಭವಿಸಿ ಸಂಸತ್ ಸ್ಥಾನದಿಂದ ಅನರ್ಹಗೊಂಡಿದ್ದಾರೆ.
Advertisement
ಕರ್ನಾಟಕದ ಚುನಾವಣೆ ಆರಂಭವಾಗುವ ಹೊತ್ತಿನಲ್ಲೇ ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿ ಸಂಸತ್ ಸ್ಥಾನದಿಂದ ಅನರ್ಹಗೊಂಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ವಿರುದ್ಧ ತಿರುಗಿ ಬೀಳಲು ದೊಡ್ಡ ಅಸ್ತ್ರ ಸಿಕ್ಕಂತಾಗಿದೆ.ರಾಹುಲ್ ಅನರ್ಹತೆಯನ್ನೇ ಚುನಾವಣ ಅಸ್ತ್ರವನ್ನಾಗಿ ಸಲು ಕೋಲಾರ ನೆಲವೇ ಸೂಕ್ತ ಎಂಬ ನಿರ್ಧಾರಕ್ಕೆ ಕಾಂಗ್ರೆಸ್ ಬಂದಿದೆ. ಇದೇ ಕಾರಣದಿಂದ ಕೆಪಿಸಿಸಿ ರಾಹುಲ್ ಗಾಂಧಿಗೆ ಅಹ್ವಾನ ನೀಡಿದ್ದು, ಯಾವ ನೆಲದಲ್ಲಿ ನಿಂತು ಮಾಡಿದ ಭಾಷಣಕ್ಕಾಗಿ ಅನರ್ಹಗೊಳ್ಳಬೇಕಾಯಿತೋ ಅದೇ ನೆಲದಿಂದ ಕರ್ನಾಟಕದ ಚುನಾವಣ ಪ್ರಚಾರವನ್ನು ಆರಂಭಿಸಬೇಕು, ಹಾಗೆಯೇ ಅನರ್ಹಗೊಳಿಸಿರುವ ಬಿಜೆಪಿಗೆ ತಿರುಗೇಟು ನೀಡಬೇಕು ಎಂಬ ಕಾರ್ಯತಂತ್ರವನ್ನು ಕಾಂಗ್ರೆಸ್ ರೂಪಿಸಿದೆ.
Related Articles
Advertisement
ಎಐಸಿಸಿಯ ಅಭಿಷೇಕ್ ದತ್ತ ನೇತೃತ್ವದಲ್ಲಿ ಮೂರು ಜಿಲ್ಲೆಗಳ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಿ ಜನರನ್ನು ಕ್ರೋಢೀಕರಿಸುವ ಕುರಿತು ಅಗತ್ಯ ಸಿದ್ಧತೆಗಳನ್ನು ನಡೆಸುವ ಜವಾಬ್ದಾರಿಗಳನ್ನು ಮುಖಂಡರಿಗೆ ಒಪ್ಪಿಸುತ್ತಿದ್ದಾರೆ.
ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಸ್ವಾಗತಿಸಲು ಉತ್ಸುಕತೆಯಿಂದ ಓಡಾಡುತ್ತಿದ್ದಾರೆ. ಕೋಲಾರ ಜತೆಗೆ ಬೆಂಗಳೂರು ಗ್ರಾಮಾಂತರ ಪ್ರದೇಶದಿಂದಲೂ ಜನರನ್ನು ಕರೆ ತರುವ ಜವಾಬ್ದಾರಿಯನ್ನು ತಮ್ಮ ಬೆಂಬಲಿಗರಿಗೆ ಒಪ್ಪಿಸುತ್ತಿದ್ದಾರೆ.ಕೋಲಾರ ಕಾಂಗ್ರೆಸ್‌ನ ಮತ್ತೂಂದು ಗುಂಪು ರಮೇಶ್‌ಕುಮಾರ್ ನೇತೃತ್ವದಲ್ಲಿ ವಿವಿಧ ಮುಖಂಡರು ಸಮಾವೇಶ ನಡೆಯುವ ಸ್ಥಳದಲ್ಲಿ ಸಿದ್ಧತೆಗಳ ಉಸ್ತುವಾರಿಯನ್ನು ಹೊತ್ತುಕೊಂಡಿದ್ದಾರೆ. ಕೋಲಾರ ಸಮಾವೇಶದ ಬಳಿಕ ಇದೇ ರೀತಿಯ ಅನೇಕ ಸಮಾವೇಶಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಸಲು ಕೆಪಿಸಿಸಿ ತೀರ್ಮಾನಿಸಿದೆ. ಈ ಮೂಲಕ ಅನರ್ಹತೆಯಿಂದ ರಾಹುಲ್‌ಗಾಂಧಿ ದೃತಿಗೆಟ್ಟಿಲ್ಲ ಎಂಬ ಸಂದೇಶ ರವಾನಿಸುವುದರ ಜತೆಗೆ, ಇದೇ ವಿಚಾರವನ್ನು ಚುನಾವಣ ಪ್ರಚಾರದ ಅಸ್ತ್ರವನ್ನಾಗಿಸಿಕೊಳ್ಳಲು ಕಾಂಗ್ರೆಸ್ ಸಜ್ಜಾಗುತ್ತಿದೆ. ಕೋಲಾರ ಕ್ಷೇತ್ರ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆಂಬ ಕಾರಣಕ್ಕಾಗಿ ರಾಜ್ಯದ ಗಮನ ಸೆಳೆದಿತ್ತು. ಈಗ ರಾಹುಲ್‌ಗಾಂಧಿ ಅದೇಕೋಲಾರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕೋಲಾರದಿಂದಲೂ ಎರಡನೇ ಕ್ಷೇತ್ರವಾಗಿ ಸ್ಪರ್ಧಿಸುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ಸಿದ್ದರಾಮಯ್ಯ ಬೆಂಬಲಿಗರು ಯೋಜಿಸಿದ್ದಾರೆ.
ಸಿದ್ದರಾಮಯ್ಯ ಕೋಲಾರದಿಂದಲೂ ಸ್ಪರ್ಧಿಸಲೇ ಬೇಕು ಎಂದು ಪಟ್ಟು ಹಿಡಿದಿರುವ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ನೇತೃತ್ವದ ಗುಂಪು ಈಗಾಗಲೇ ಈ ಕುರಿತು ಹೈಕಮಾಂಡ್ ಮೇಲೂ ಒತ್ತಡ ಹೇರುತ್ತಿದೆ. ಕೋಲಾರಕ್ಕೆ ರಾಹುಲ್ ಗಾಂಧಿ ಬರುವ ಮುನ್ನವೇ ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಕೋಲಾರದಿಂದ ಸಿದ್ದರಾಮಯ್ಯ ಹೆಸರು ಪ್ರಕಟವಾಗಬೇಕು. ಇಲ್ಲವಾದರೆ ಎಪ್ರಿಲ್ 5 ಸಮಾವೇಶದಲ್ಲಿ ರಾಹುಲ್‌ಗಾಂಧಿಯೇ ಸಿದ್ದರಾಮಯ್ಯ ಕೋಲಾರದಿಂದಲೂ ಸ್ಪರ್ಧಿಸುತ್ತಾರೆಂದು ಘೋಷಿಸಬೇಕೆಂದು ಬಯಸುತ್ತಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಆರಂಭದಲ್ಲಿಯೇ ಕೋಲಾರದಿಂದ ಆರಂಭವಾಗುತ್ತಿರುವ ಮೊದಲ ಕಾಂಗ್ರೆಸ್ ಪ್ರಚಾರ ಸಭೆಗೆ ರಾಹುಲ್‌ಗಾಂಧಿಯೇ ಆಗಮಿಸುತ್ತಿರುವುದು ರಾಜ್ಯ ಮತ್ತು ಜಿಲ್ಲಾ ಕಾಂಗ್ರೆಸ್ ಮುಖಂಡರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. -ಕೆ.ಎಸ್.ಗಣೇಶ್