Advertisement

ಮತ್ತೆ ಮೊಳಗಿದ ಕರಾವಳಿ ಪ್ರಾತಿನಿಧ್ಯದ ಕೂಗು

11:50 PM Jan 29, 2020 | Team Udayavani |

ಬೆಂಗಳೂರು: ಸಂಪುಟ ವಿಸ್ತರಣೆ ಕಸರತ್ತು ತೀವ್ರಗೊಂಡಿದ್ದು, ಮೂಲ ಹಾಗೂ ವಲಸಿಗ ಬಿಜೆಪಿ ಶಾಸಕರು ಹಿರಿತನ, ತ್ಯಾಗ, ನಿಷ್ಠೆ, ಸಂಘಟನೆ ಹಿನ್ನೆಲೆ ಸೇರಿದಂತೆ ಇತರೆ ಅಂಶಗಳ ಆಧಾರದ ಮೇಲೆ ಸ್ಥಾನಮಾನಕ್ಕಾಗಿ ಒತ್ತಡ ಹೇರುತ್ತಿದ್ದಾರೆ. ಮೊದಲ ಸಂಪುಟ ವಿಸ್ತರಣೆ ವೇಳೆ ಕೇಳಿಬಂದ ಕರಾವಳಿಗೆ ಪ್ರಾತಿನಿಧ್ಯದ ಕೂಗು ಮತ್ತೆ ಕೇಳಲಾರಂಭಿಸಿದೆ.

Advertisement

ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ಒಟ್ಟು 20 ವಿಧಾನಸಭಾ ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಆದರೆ ಒಬ್ಬ ಶಾಸಕರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರಷ್ಟೇ ಸಚಿವರಾಗಿದ್ದು, ಹಿರಿಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ವಿಧಾನಸಭಾಧ್ಯಕ್ಷರಾಗಿದ್ದಾರೆ. ಹಾಗಾಗಿ ಕರಾವಳಿ ಜಿಲ್ಲೆಗಳಿಗೆ ಸಂಪುಟದಲ್ಲಿ ಹೆಚ್ಚಿನ ಸ್ಥಾನಮಾನ ಸಿಗಬೇಕು ಎಂಬ ಆಗ್ರಹ ಮತ್ತೆ ಕೇಳಿಬಂದಿದೆ.

ಈಚಿನ ವರ್ಷಗಳಲ್ಲಿ ಕರಾವಳಿ ಜಿಲ್ಲೆಗಳು ಬಿಜೆಪಿಗೆ ಭದ್ರಕೋಟೆಯಂತೆ ಪರಿವರ್ತನೆಯಾಗಿದೆ. ಆದರೆ ಪಕ್ಷದಲ್ಲಿ ಸ್ಥಾನಮಾನ, ಪ್ರಾದೇಶಿಕ ಪ್ರಾತಿನಿಧ್ಯ ನೀಡಿಕೆ ವಿಚಾರದಲ್ಲಿ ವ್ಯತ್ಯಾಸವಾದಾಗ ಜನ ಪಾಠ ಕಲಿಸಿದ ಉದಾಹರಣೆಗಳು ಇವೆ. ಹಾಗಾಗಿ ಕಡೆಗಣನೆಗೆ ಅವಕಾಶವಿಲ್ಲದಂತೆ ಪ್ರಾತಿನಿಧ್ಯ ಕೊಟ್ಟು ಸಂಘಟನೆಗೆ ಬಲ ತುಂಬಬೇಕೆಂಬುದು ಆ ಭಾಗದ ನಾಯಕರ ಆಗ್ರಹವಾಗಿದೆ.

ಕಾಂಗ್ರೆಸ್‌ ಅವಧಿಯಲ್ಲಿ ಐದು ಸಚಿವರು: ಈ ಹಿಂದೆ 2013ರ ವಿಧಾನಸಭೆ ಚುನಾವಣೆಯಲ್ಲಿ ಕರಾವಳಿ ಜಿಲ್ಲೆಯ 20 ಕ್ಷೇತ್ರಗಳ ಪೈಕಿ 17ರಲ್ಲಿ ಕಾಂಗ್ರೆಸ್‌ ಶಾಸಕರು ಗೆದ್ದಿದ್ದರು. ಆಗ ಮೂರು ಜಿಲ್ಲೆಯಲ್ಲಿ ಒಟ್ಟು ಐದು ಮಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಚಿವ ಸ್ಥಾನ ನೀಡಿದ್ದರು. ಆ ಮೂಲಕ ಕರಾವಳಿ ಜಿಲ್ಲೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿತ್ತು. ಇದೀಗ ಬಿಜೆಪಿಯಿಂದ 18 ಶಾಸಕರಿದ್ದರೂ ಒಬ್ಬರಿಗೂ ಸಚಿವ ಸ್ಥಾನ ನೀಡದಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಪಕ್ಷದಲ್ಲಿ ಕೇಳಿಬಂದಿದೆ.

ಶಿವರಾಮ ಹೆಬ್ಬಾರ್‌ಗೆ ಸಚಿವ ಸ್ಥಾನ?: ಇತ್ತೀಚೆಗೆ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಳಿಕ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿರುವ ಶಿವರಾಮ ಹೆಬ್ಬಾರ್‌ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ನೀಡಿದರೆ,ಕರಾವಳಿಗೆ ಪ್ರಾತಿನಿಧ್ಯ ನೀಡಿದಂತಾಗುತ್ತದೆ ಎಂಬುದು ರಾಜ್ಯ ನಾಯಕರ ಲೆಕ್ಕಾಚಾರವಾಗಿದೆ. ಆದರೆ, ಅನ್ಯ ಪಕ್ಷದಿಂದ ಬಂದವರಿಗೆ ಸಚಿವ ಸ್ಥಾನ ನೀಡಿದರೆ ಪಕ್ಷದಲ್ಲಿ ತಪ್ಪು ಸಂದೇಶ ರವಾನೆಯಾಗಲಿದೆ ಎಂಬ ಮಾತುಗಳಿವೆ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಕರಾವಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂಬ ಮಾತುಗಳನ್ನು ಹಿರಿಯ ನಾಯಕರು ಹೇಳುತ್ತಿದ್ದಾರೆ.

Advertisement

ಅದರೂ, ಹೆಚ್ಚಿನ ಆದ್ಯತೆಯ ಕೂಗು ಕೇಳಿಬಂದಿದೆ. ಸಂಪುಟದಲ್ಲಿ ಬೆಂಗಳೂರು, ಬೆಳಗಾವಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುವ ನಿರೀಕ್ಷೆ ಇದೆ. ಈಗಾಗಲೇ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾಯಣ ಸೇರಿದಂತೆ ಆರ್‌.ಅಶೋಕ್‌, ಎಸ್‌.ಸುರೇಶ್‌ ಕುಮಾರ್‌, ವಿ.ಸೋಮಣ್ಣ ಸಚಿವರಾಗಿದ್ದಾರೆ. ಇದೀಗ ಕೆ. ಗೋಪಾಲಯ್ಯ, ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜು ಅವರು ಸಚಿವರಾಗುವ ಸಾಧ್ಯತೆ ಹೆಚ್ಚಾಗಿದ್ದು, ಅವಕಾಶ ಸಿಕ್ಕರೆ ಬೆಂಗಳೂರು ಸಚಿವರ ಸಂಖ್ಯೆ ಏಳಕ್ಕೆ ಏರಿಕೆಯಾಗಲಿದೆ.

ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸೇರಿದಂತೆ ಶಶಿಕಲಾ ಜೊಲ್ಲೆ ಸಚಿವೆಯಾಗಿದ್ದಾರೆ. ರಮೇಶ್‌ ಜಾರಕಿಹೊಳಿ, ಉಮೇಶ್‌ ಕತ್ತಿ ಅವರು ಸಚಿವರಾಗುವುದು ಬಹುತೇಕ ಖಚಿತವಾಗಿದ್ದು, ಮಹೇಶ್‌ ಕುಮಟಳ್ಳಿ, ಶ್ರೀಮಂತ ಪಾಟೀಲ್‌ ಕೂಡ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಹೀಗೆ ಬೆಂಗಳೂರು, ಬೆಳಗಾವಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಟ್ಟು ಕರಾವಳಿ ಜಿಲ್ಲೆಗಳನ್ನು ಕಡೆಗಣಿಸುವುದು ಎಷ್ಟು ಸರಿ ಎಂಬ ಬಗ್ಗೆ ಕಾರ್ಯಕರ್ತರ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಲಸಿಗರ ಪ್ರಶ್ನೆ ಉದ್ಭವಿಸದು: ಅನ್ಯ ಪಕ್ಷದವರು ಬಿಜೆಪಿ ಸೇರಿದ ಬಳಿಕ ಮೂಲ- ವಲಸಿಗ ಎಂಬ ಪ್ರಶ್ನೆ ಉದ್ಭವಿಸದು. ಹಾಗೆಂದು ಉತ್ತರ ಕನ್ನಡ ಜಿಲ್ಲೆಯ ಒಬ್ಬರಿಗೆ ಸಚಿವ ಸ್ಥಾನ ನೀಡಿ ಅದನ್ನೇ ಕರಾವಳಿ ಕೋಟಾ ಎಂದು ಪರಿಗಣಿಸುವಂತೆ ಹೇಳುವುದು ಸರಿಯಲ್ಲ. ಪಕ್ಷವನ್ನು ಇನ್ನಷ್ಟು ಬಲವಾಗಿ ಸಂಘಟಿಸಲು ಪ್ರಾತಿನಿಧ್ಯ ಅನಿವಾರ್ಯವಾಗಿದೆ. ಪಕ್ಷ ಗೊಂದಲಕ್ಕೆ ಅವಕಾಶವಿಲ್ಲದಂತೆ ಪಕ್ಷ ಹಾಗೂ ಸರ್ಕಾರದ ಪ್ರಮುಖರು ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಕರಾವಳಿ ಜಿಲ್ಲೆಯ ಶಾಸಕರೊಬ್ಬರು ತಿಳಿಸಿದರು.

ಸಂಪುಟದಲ್ಲಿ ಕರಾವಳಿ ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಗಬೇಕು. ಜನ, ಕಾರ್ಯಕರ್ತರ ಅಪೇಕ್ಷೆ ಕೂಡ ಇದೇ ಆಗಿದೆ. ಪಕ್ಷವು ಸೂಕ್ತ ನಿರ್ಧಾರ ಕೈಗೊಂಡು ಗೊಂದಲಗಳಿಗೆ ತೆರೆ ಎಳೆಯಬೇಕು. ಪ್ರಾದೇಶಿಕ ಪ್ರಾತಿನಿಧ್ಯ ಸಿಗಲೇಬೇಕಿದೆ. ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧ.
-ಎಸ್‌. ಅಂಗಾರ, ಬಿಜೆಪಿ ಹಿರಿಯ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next