ಔರಾದ: ನಾಗಮಾರಪಳ್ಳಿ-ರಾಯಿಪಳ್ಳಿ ಗ್ರಾಮದ 2 ಕಿ.ಮೀ. ರಸ್ತೆ ಕಾಮಗಾರಿ ಮುಗಿದು ಆರೇ ತಿಂಗಳಲ್ಲಿ ಹಾಳಾಗಿದ್ದು, ರಸ್ತೆಯಲ್ಲಿ ಗುಂಡಿಗಳು ಬಿದ್ದು ಪ್ರಯಾಣಿಕರು ಸಂಚಾರಕ್ಕೆ ತೊಂದರೆ ಅನುಭವಿಸುವಂತಾಗಿದೆ. ಈ ರಸ್ತೆ ನಿರ್ಮಾಣಕ್ಕಾಗಿ 2014-15ನೇ ಸಾಲಿನಲ್ಲಿ ವ್ಯಯಿಸಲಾಗಿದ್ದ 70 ಲಕ್ಷ ರೂ. ಅನುದಾನ ವ್ಯರ್ಥವಾದಂತಾಗಿದೆ. ಅಂದು ನಾಗಮಾರಪಳ್ಳಿ ಗ್ರಾಮದಿಂದ ರಾಯಿಪಳ್ಳಿ ಗ್ರಾಮದ ವರೆಗಿನ ರಸ್ತೆ ಸಂಪೂರ್ಣ ಹಾಳಾಗಿದೆ ಎಂದು ಶಾಸಕರಿಗೆ, ಸಚಿವರಿಗೆ ಹಾಗೂ ಸರ್ಕಾರಕ್ಕೆ ಪತ್ರ ಬರೆದಿದ್ದರಿಂದ ರಸ್ತೆ ನಿರ್ಮಿಸಲು ಸರ್ಕಾರ ಅನುದಾನ ಬಿಡುಗಡೆ ಮಾಡಿತ್ತು. ಆದರೆ ಇಲಾಖೆಯ ಅ ಧಿಕಾರಿಗಳ ನಿಲಕ್ಷ್ಯಾತನದಿಂದ ಕಾಮಗಾರಿ ಸಂಪೂರ್ಣ ಕಳಪೆಯಾಗಿ ಈಗ ಮತ್ತೆ ರಸ್ತೆ ಹಾಳಾಗಿದೆ. ಈ ರಸ್ತೆಯಲ್ಲಿ ಗುಂಡಿಗಳಲ್ಲಿ ಯಾರು ಯಾವಾಗ ಬಿದ್ದು ಅಪಘಾತಕ್ಕೀಡಾಗುತ್ತಾರೊ ಎನ್ನುವ ಆಂತಕ ನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರವಾಹನ ಸವಾರರು ಹಾಗೂ ಪ್ರಯಾಣಿಕರಲ್ಲಿ ಭಯ ಹುಟ್ಟಿಸಿದೆ. ಆಯುಕ್ತರಿಗೆ ದೂರು: ರಸ್ತೆ ನಿರ್ಮಾಣ ಮಾಡಿದ ಆರೇ ತಿಂಗಳಲ್ಲಿ ಹಾಳಾಗಿದೆ. ಉತ್ತಮ ರಸ್ತೆ ನಿರ್ಮಿಸುವುದರೊಂದಿಗೆ ತಪ್ಪಿತಸ್ಥ ಅಧಿ ಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಎರಡೂ ಗ್ರಾಮಸ್ಥರು ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಅವರ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ನಾಗಮಾರಪಳ್ಳಿ ಗ್ರಾಮಸ್ಥರು ತಿಳಿಸಿದ್ದಾರೆ. ಭೂಸೇನಾ ನಿಗಮದಿಂದ ತಾಲೂಕಿನಲ್ಲಿ ಕಳಪೆ ಕಾಮಗಾರಿಗಳು ನಡೆಯುತ್ತಿವೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ ಔರಾದ ತಾಲೂಕು ಕೆಂದ್ರದಲ್ಲಿ ಸಂಘ ಸಂಸ್ಥೆಯ ಸದಸ್ಯರೊಂದಿಗೆ ಸೇರಿ ಎರಡೂ ಗ್ರಾಮಸ್ಥರು ಪ್ರತಿಭಟನೆ ನಡೆಸುವುದಾಗಿ ರಾಯಿಪಳ್ಳಿ ಗ್ರಾಮದ ದಿನೇಶ ತಿಳಿಸಿದ್ದಾರೆ. ವಾರದಲ್ಲಿ ಹಾಳಾಗಿದ್ದ ರಸ್ತೆ ಸುಧಾರಣೆ ಮಾಡಲು ಇಲಾಖೆಯ ಅಧಿಕಾರಿಗಳು ಮುಂದಾಗಬೇಕು. ಇಲ್ಲವಾದಲ್ಲಿ ಬೀದರನಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸರ್ಕಾರಕ್ಕೆ ಹಾಗೂ ಅಧಿ ಕಾರಿಗಳಿಗೆ ಎರಡೂ ಗ್ರಾಮಸ್ಥರು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ರವೀಂದ್ರ ಮುಕ್ತೇದಾರ