ಚಿಕ್ಕಬಳ್ಳಾಪುರ: ಇಂದಿನ ಆಧುನಿಕ ಸಮಾಜದಲ್ಲಿ ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿಯು ಪ್ರಬಲ ಪೈಪೋಟಿ ಇರುವುದರಿಂದ ತಾಂತ್ರಿಕ ಶಿಕ್ಷಣ ಓದುವ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಇರಬೇಕೆಂದು ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯದ ಉಪ ಕುಲಪತಿ ಡಾ.ಕರಿಸಿದ್ದಪ್ಪ ತಿಳಿಸಿದರು.
ನಗರದ ಹೊರ ವಲಯದ ಮುದ್ದೇನಹಳ್ಳಿಯ ವಿಟಿಯು ಸಂಶೋಧನಾ ಕೇಂದ್ರದಲ್ಲಿ ಉನ್ನತ ಶಿಕ್ಷಣ ಅಕಾಡೆಮಿ ವಾಣಿಜ್ಯ ವಿಭಾಗದ ವತಿಯಿಂದ ಎರಡು ದಿನದ ಅಂತಾರಾಷ್ಟ್ರೀಯ ಮಟ್ಟದ ಇ-ಪೋಸ್ಟರ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಸಂಶೋಧನೆ ಅಭಿರುಚಿ ಬೆಳೆದಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುತ್ತದೆ ಎಂದರು.
ಕೌಶಲ್ಯ ವೃದ್ಧಿಸಿಕೊಳ್ಳಿ: ವಿದ್ಯಾರ್ಥಿಗಳು ಯಾವುದೇ ವಿಷಯವನ್ನು ಆಸಕ್ತಿಯಿಂದ ಕಲಿಯಬೇಕು. ಇಂದಿನ ಸಮಾಜದಲ್ಲಿ ಓದಿಗಿಂತ ಕೌಶಲ್ಯಕ್ಕೆ ಹೆಚ್ಚು ಮಹತ್ವ ಇರುವುದರಿಂದ ವಿದ್ಯಾರ್ಥಿಗಳು ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು. ಇಂತಹ ಸಮ್ಮೇಳನಗಳಲ್ಲಿ ಭಾಗವಹಿಸುವಿಕೆಯಿಂದ ಜ್ಞಾರ್ನಾಜನೆ ಹೆಚ್ಚುತ್ತದೆ. ವಿದ್ಯಾರ್ಥಿಗಳು ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಸಂಶೋಧನೆ ನಡೆಸಬೇಕೆಂದರು.
ಅಂತಾರಾಷ್ಟ್ರೀಯ ಸಮ್ಮೇಳನದ ಸಂಚಾಲಕ ಡಾ.ದಿನೇಶ್ ರಂಗಪ್ಪ ಮಾತನಾಡಿ, ಸಮ್ಮೇಳನವು ಆಡಳಿತ ನಿರ್ವಹಣೆ, ವಾಣಿಜ್ಯ, ಆರೋಗ್ಯ ನಿರ್ವಹಣೆ, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ವ್ಯವಹಾರ ವಿಶ್ಲೇಷಣೆ ಮತ್ತಿತರ ವಿಚಾರಗಳನ್ನು ಮಂಡಿಸಲು ಹಾಗೂ ಚರ್ಚಿಸಲು ವೇದಿಕೆಯನ್ನು ಕಲ್ಪಿಸಿಕೊಡಲಿದೆ.
ಸಂಶೋಧನಾ ಪ್ರವೃತ್ತಿ: ವಿಶೇಷವಾಗಿ ಸಂಶೋಧನಾ ವಿದ್ಯಾರ್ಥಿಗಳಿಗೆ ತಮ್ಮ ಸಂಶೋಧನೆಗಳನ್ನು ಮಂಡಿಸಲು, ಜ್ಞಾನ ವೃದ್ಧಿಸಲು ಹಾಗೂ ಪ್ರಸ್ತುತ ಸಂಶೋಧನೆಯಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು ಹಾಗೂ ಸಂಶೋಧನಾ ಪ್ರವೃತ್ತಿ ಬೆಳೆಸುವ ನಿಟ್ಟಿನಿಂದ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಸಮ್ಮೇಳನ ಆಯೋಜಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಸಮ್ಮೇಳನದ ಸಹ ಸಂಚಾಲಕರಾದ ಡಾ.ಸುಶೀಲಾ ಸಿಂಗ್, ಡಾ.ಎಸ್.ವಿ.ಲೋಕೇಶ್, ಸಮ್ಮೇಳನದ ಕಾರ್ಯದರ್ಶಿ ಡಾ.ಪ್ರಸನ್ನ ಡಿ.ಶಿವರಾಮು ಸೇರಿದಂತೆ ವಿಟಿಯು ಸಂಶೋಧನಾ ಕೇಂದ್ರದ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದೇಶ, ವಿದೇಶಗಳಿಂದ ಪ್ರತಿನಿದಿಗಳ ಭಾಗಿ: ಎರಡು ದಿನಗಳ ಇ-ಪೋಸ್ಟರ್ ಸಮ್ಮೇಳನದಲ್ಲಿ ದೇಶ ಹಾಗೂ ವಿದೇಶಗಳ ಕಾಲೇಜುಗಳಿಂದ ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಿದ್ದರು. ಸುಮಾರು 150 ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.
ಇ-ಪೋಸ್ಟರ್ ಮೂಲಕ ಪ್ರಬಂಧ ಮಂಡಿಸಲಾಗಿದೆ. ಎನ್‌ಇಎಸ್ ಎ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಎರಡು ಸಂಸ್ಥೆಗಳ ವತಿಯಿಂದ ವಿದ್ಯಾರ್ಥಿಗಳಗೆ 150 ಪ್ರಬಂಧಗಳನ್ನು ಮಂಡಿಸಿ ನಂತರ ವಿಚಾರಗೋಷ್ಠಿ ಏರ್ಪಡಿಸಿ ವಿದ್ಯಾರ್ಥಿಗಳಗೆ ಪರಿಸರದಲ್ಲಿ ಸಿಗುವ ಸಂಪನ್ಮೂಲಗಳ ಬಗ್ಗೆ ಅರಿವು ಮೂಡಿಸಲಾಯಿತು.