ಕನಕಪುರ: ರೈತರ ಕೃಷಿ ಪಂಪ್‌ಸೆಟ್‌ಗೆ ರಾತ್ರಿ ಬದಲು ಹಗಲಿನಲ್ಲಿ ವಿದ್ಯುತ್ ಪೂರೈಸಿ, ಕಾಡುಪ್ರಾಣಿಗಳಿಂದ ರೈತರಿಗಾಗುವ ಸಮಸ್ಯೆ ತಪ್ಪಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಚೀಲೂರು ಮುನಿರಾಜು ಬೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು.
ರೇಷ್ಮೆ ರೈತ ಉತ್ಪಾದಕರ ಕಂಪನಿ ಹಾಗೂ ರಾಜ್ಯ ರೈತ ಸಂಘದಿಂದ ಕುರುಪೇಟೆ ಬಳಿ ಇರುವ ಬೆಸ್ಕಾಂ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ತಾಲೂಕು ಬಹುತೇಕ ಕಾಡಂಚಿನ ಗ್ರಾಮಗಳು ಹೆಚ್ಚಾಗಿದ್ದು, ನಿರಂತರವಾಗಿ ಕಾಡು ಪ್ರಾಣಿಗಳ ಹಾವಳಿ ಇರುವುದರಿಂದ ರೈತರು ರಾತ್ರಿ ವೇಳೆ ವಿಷಜಂತುಗಳು, ಕಾಡುಪ್ರಾಣಿಗಳು ದಾಳಿ ಮಾಡುವ ಭಯದಲ್ಲೇ ರೈತರು ತಮ್ಮ ಕೃಷಿ ಬೆಳೆಗಳಿಗೆ ನೀರು ಹಾಯಿಸುವ ಅನಿವಾರ್ಯತೆ ಇದೆ. ಬೆಸ್ಕಾಂ ಇಲಾಖೆ ರಾತ್ರಿ ವೇಳೆ ವಿದ್ಯುತ್ ಪೂರೈಸುವುದರಿಂದ ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಹೇಳಿದರು.
ರೇಷ್ಮೆ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಡಿ.ಕೆ. ರಾಮಕೃಷ್ಣ ಮಾತನಾಡಿ, ರಾಜ್ಯದಲ್ಲಿಯೇ ರಾಮನಗ ಜಿಲ್ಲೆ ಅತಿ ಹೆಚ್ಚು ರೇಷ್ಮೆ ಬೆಳೆಯುವುದರಲ್ಲಿ ಹೆಸರುವಾಸಿ ಆಗಿದೆ. ಜಿಲ್ಲೆಯಲ್ಲಿ ಕನಕಪುರ ತಾಲೂಕಿನಲ್ಲಿ ಅತಿ ಹೆಚ್ಚು ರೇಷ್ಮೆ ಬೆಳೆಯುವ ರೈತರಿದ್ದಾರೆ. ಆದರೆ, ರೇಷ್ಮೆ ಬೆಳೆಗಾರರಿಗೆ ಸರಿಯಾದ ಉತ್ತೇಜನ ಸಿಗದೆ, ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾಡುಪ್ರಾಣಿಗಳ ಭಯ: ತಾಲೂಕಿನ ಬಹುತೇಕ ರೇಷ್ಮೆ ಬೆಳೆಗಾರರು ಕೃಷಿ ಪಂಪ್ ಸೆಟ್ ಅವಲಂಬಿಸಿಯೇ ರೇಷ್ಮೆ ಕೃಷಿ ಮಾಡುತ್ತಾರೆ. ಬೇಸಿಗೆ ಆರಂಭವಾಗಿದೆ. ಹಾಗಾಗಿ, ಎಲ್ಲರೂ ರೇಷ್ಮೆ ತೋಟಕ್ಕೆ ನೀರು ಹಾಯಿಸುವುದು ಅನಿವಾರ್ಯ. ಕೃಷಿ ಪಂಪ್ ಸೆಟ್‌ಗಳಿಗೆ ರಾತ್ರಿ ವೇಳೆ ವಿದ್ಯುತ್ ಕೊಡುವುದರಿಂದ ರೈತರು ಕಾಡುಪ್ರಾಣಿಗಳ ಭಯದಿಂದ ನೀರು ಹಾಯಿಸಲು ಹಿಂಜರಿಯುತ್ತಿದ್ದಾರೆ. ಇದರಿಂದ ಕೃಷಿ ಬೆಳೆಗಳಿಗೆ ನೀರಿನ ಅಭಾವ ಉಂಟಾಗಿ ರೈತರು ಕೃಷಿಯಲ್ಲಿ ನಷ್ಟಕ್ಕೆ ಸಿಲುಕ ಬೇಕಾಗುತ್ತದೆ. ಹಾಗಾಗಿ, ರಾತ್ರಿ ವೇಳೆ ಕೊಡುವ 7 ತಾಸು ವಿದ್ಯುತ್‌ನ್ನು ಹಗಲಿನಲ್ಲಿ ಕೊಡಬೇಕು ಎಂದು ಮನವಿ ಮಾಡಿದರು.
ರೈತ ಸಂಘ ಮತ್ತು ರೇಷ್ಮೆ ರೈತ ಉತ್ಪಾದಕ ಕಂಪನಿಯ ಕರಿಯಪ್ಪ, ಶಿವರಾಜು, ಚಾಮ, ಸತೀಶ್, ವೆಂಕಟೇಶ್, ಮುಕ್ತರ್, ಮುನೇಶ್, ಮುನಿಮಾದು, ಶಿವಕುಮಾರ್, ಬೋಜೆಗೌಡ, ಸಾಗರ್ ಇದ್ದರು.