‘ತುಳು ರಂಗಭೂಮಿಯ ಶ್ರೇಷ್ಠ ನಟ’ ಎಂಬ ಬಿರುದು ಪಡೆದ ಆನಂದ್ ಬೋಳಾರ್ ಅವರಿಗೆ ಸಮರ್ಪಣೆಯಾಗುವ ನೆಲೆಯಲ್ಲಿ ಕೋಸ್ಟಲ್‌ವುಡ್‌ನಲ್ಲಿ ಸಿದ್ಧವಾದ ‘ಪತ್ತೀಸ್ ಗ್ಯಾಂಗ್’ ಆಗಮನಕ್ಕೆ ದಿನ ಫಿಕ್ಸ್ ಆಗಿದೆ. ಆ.10ರಂದು ಸಿನೆಮಾ ಕರಾವಳಿಯಾದ್ಯಂತ ತೆರೆಕಾಣಲಿದೆ. ಆನಂದ್ ಬೋಳಾರ್ ಅವರ ಪುತ್ರ ಸೂರಜ್ ಬೋಳಾರ್ ನಿರ್ಮಾಣದಲ್ಲಿ ಹಾಗೂ ಪ್ರೀತಂ ಎಂ.ಎನ್. ಅವರ ಮುಂದಾಳತ್ವದಲ್ಲಿ ‘ಪತ್ತೀಸ್ ಗ್ಯಾಂಗ್’ ಸಿದ್ಧವಾಗಿದೆ. ಮನೋಜ್ ಕುಮಾರ್ ಅವರು ಈ ಸಿನೆಮಾವನ್ನು ಪ್ರಸ್ತುತಪಡಿಸಿದ್ದಾರೆ.
ವಿಶೇಷವೆಂದರೆ ದೇಶದಲ್ಲಿ ನಡೆದ ನೈಜ ಘಟನೆಗಳನ್ನೇ ಮುಖ್ಯವಾಗಿರಿಸಿಕೊಂಡು ಈ ಸಿನೆಮಾ ಮಾಡಲಾಗಿದೆ. ತಮಿಳುನಾಡು, ಆಂಧ್ರ ಸಹಿ ತ ಬೇರೆ ಭಾಗದಲ್ಲಿ ನಡೆದ ನೈಜ ಕಥಾನಕವನ್ನೇ ಸಿನೆಮಾ ಮೂಡ್‌ನಲ್ಲಿ ಸಿದ್ಧಪಡಿಸಲಾಗಿದೆ. ತಮಿಳು, ಮಲಯಾಳಂನಲ್ಲಿ ಬಳಕೆಯಲ್ಲಿರುವ ಡಾರ್ಕ್ ಕಾಮಿಡಿ ಶೈಲಿಯನ್ನು ಈ ಸಿನೆಮಾದ ಮೂಲಕ ಪರಿಚಯಿಸಲಾಗಿದೆ.
ಅಪರೂಪದ ವಿಚಾರವೆಂದರೆ, ಈ ಸಿನೆಮಾದಲ್ಲಿ ಕುಡಿತದ ದೃಶ್ಯಗಳಿಲ್ಲ. ಸಿಗರೇಟ್ ಸೇದುವ ಸೀನ್ ಇಲ್ಲ. ಐಟಂ ಸಾಂಗ್ ಕೂಡ ಇಲ್ಲ. ಹೀಗಾಗಿ ಕರಾವಳಿಯ ಎಲ್ಲ ಜನರು ಮನೆ ಮಂದಿಯೊಂದಿಗೆ ಕುಳಿತು ನೋಡಬಹುದಾದ ಸಿನೆಮಾವಾಗಿ ಪತ್ತೀಸ್ ಗ್ಯಾಂಗ್ ಮೂಡಿಬಂದಿದೆ.
ಕದ್ರಿ ಮಣಿಕಾಂತ್ ಸಂಗೀತ ಒದಗಿಸಿದ್ದಾರೆ. ಮೋಹನ್ ಶೇಣಿ, ಅಜಯ್‌ರಾಜ್, ವಿಸ್ಮಯ ವಿನಾಯಕ್, ಚಂದ್ರಹಾಸ್ ಉಳ್ಳಾಲ್, ನವ್ಯತಾ ರೈ ಸಹಿತ ಪ್ರಮುಖರು ಮುಖ್ಯ ಭೂಮಿಕೆಯಲ್ಲಿದ್ದಾರೆ. ವಿಶೇಷವೆಂದರೆ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಕಿಶೋರ್ ಡಿ. ಶೆಟ್ಟಿ ಅತಿಥಿ ಪಾತ್ರದಲ್ಲಿದ್ದಾರೆ. ಐವರು ಯುವಕರ ಕಥೆಯನ್ನು ಮನೋಜ್ಞವಾಗಿ ಈ ಸಿನೆಮಾದಲ್ಲಿ ಬಿಂಬಿಸಲಾಗಿದೆ. ಹೀಗಾಗಿ ಸಿನೆಮಾ ಕೋಸ್ಟಲ್‌ನಲ್ಲಿ ಶೈನ್ ಆಗಲಿದೆ ಎಂಬುದು ಚಿತ್ರತಂಡದ ಅಭಿಪ್ರಾಯ.