ಮಂಗಳೂರು: ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದ ಬಳಿಕ ದ್ವಿತೀಯ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿದ್ದು, ಎ. 27ರಂದು ಬೆಳಗ್ಗೆ 10ಕ್ಕೆ ಬಿ.ಸಿ. ರೋಡ್‌ನಲ್ಲಿ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ, ಬಳಿಕ ಧರ್ಮಸ್ಥಳಕ್ಕೆ ತೆರಳುತ್ತಾರೆ ಎಂದು ಸಚಿವ ಬಿ. ರಮಾನಾಥ ರೈ ಹೇಳಿದರು.
ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ರಾಹುಲ್ ಬಿ.ಸಿ. ರೋಡಿನ ಜೋಡುಮಾರ್ಗ ಉದ್ಯಾನ ವನದ ಬಳಿ ಮೈದಾನದಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಧರ್ಮಸ್ಥಳಕ್ಕೆ ತೆರಳಿ ದೇವರ ದರ್ಶನ ಪಡೆಯುವರು. ಬಳಿಕ ಕೊಡಗು ಜಿಲ್ಲೆಗೆ ತೆರಳುವರು. ಅವರ ಭೇಟಿಯ ಸಂದರ್ಭ ವಿಭಾಗ ಮಟ್ಟದ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಯಾಗಲಿದೆ ಎಂದರು.
ಈ ವಿಧಾನಸಭಾ ಚುನಾವಣೆ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ. ಕಾಂಗ್ರೆಸ್ ನಿರಂತರವಾಗಿ ದುರ್ಬಲರ ಪರ ಕೆಲಸ ಮಾಡಿದ್ದು, ಜನತೆ ಬೆಂಬಲಿಸುವರು. ಹೀಗಾಗಿ ಎಂಟೂ ಕ್ಷೇತ್ರಗಳನ್ನೂ ಕಾಂಗ್ರೆಸ್ ಗೆಲ್ಲಲಿದೆ ಎಂದರು.
ಕರಾವಳಿ ಸಹಿತ ರಾಜ್ಯದಲ್ಲಿ ಬಿಜೆಪಿ ಒಡೆದ ಮನೆಯಾಗಿದ್ದು, ಬಿಜೆಪಿಯ ಹಲವು ನಾಯಕರು ಕಾಂಗ್ರೆಸನ್ನು ಬೆಂಬಲಿಸಲಿದ್ದಾರೆ. ನಾನು ಎಂದಿಗೂ ಜಾತ್ಯತೀತ ನಿಲುವಿನೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಮತೀಯ ವಾದವನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದರು.
ಸಂಸದ ನಳಿನ್ ಅವರು ನನಗೆ ವಿಶ್ರಾಂತಿ ಕೊಡುವ ಮಾತಾಡುತ್ತಿದ್ದಾರೆ. ಆದರೆ ಈಗ ಅವರಿಗೆ ಬಿಜೆಪಿಯವರೇ ವಿಶ್ರಾಂತಿ ಕೊಡಲಿದ್ದಾರೆ ಎಂದು ವ್ಯಂಗ್ಯವಾಡಿದರು.
ರೈ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಅನುದಾನವನ್ನೆಲ್ಲ ಬಂಟ್ವಾಳಕ್ಕೆ ಸುರಿಯುತ್ತಿದ್ದಾರೆ ಎಂದು ನಳಿನ್ ಹಿಂದೆ ಹೇಳುತ್ತಿದ್ದರು. ಆದರೆ ಈಗ ಬಂಟ್ವಾಳದಲ್ಲಿಯೂ ರೈ ಅಭಿವೃದ್ಧಿ ಮಾಡಿಲ್ಲ ಎನ್ನುತ್ತಿದ್ದಾರೆ. ಅವರ ಹೇಳಿಕೆಗಳಲ್ಲೇ ಗೊಂದಲ ಇದೆ ಎಂದ ಅವರು, ಟಿಕೆಟ್ ಹಂಚಿಕೆ ಕುರಿತು ಕಾಂಗ್ರೆಸ್‌ನಲ್ಲಿ ಗೊಂದಲಗಳಿಲ್ಲ ಎಂದು ಸ್ಪಷ್ಪಡಿಸಿದರು. ಕೆಪಿಸಿಸಿ ಕಾರ್ಯದರ್ಶಿ ಯು.ಬಿ. ವೆಂಕಟೇಶ್, ಪ್ರಮುಖರಾದ ಐವನ್ ಡಿ’ಸೋಜಾ, ಹರೀಶ್ ಕುಮಾರ್, ರಾಜಶೇಖರ್ ಕೋಟ್ಯಾನ್, ಇಬ್ರಾಹಿಂ ಕೋಡಿಜಾಲ್, ಧನಂಜಯ ಅಡ³ಂಗಾಯ, ಆರ್.ಕೆ. ಪೃಥ್ವಿರಾಜ್, ಮಮತಾ ಗಟ್ಟಿ, ಭಾಸ್ಕರ್ ಕೆ, ಬಿ.ಎಚ್. ಖಾದರ್, ಎ.ಸಿ. ವಿನಯರಾಜ್, ಶಶಿಧರ್ ಹೆಗ್ಡೆ ಉಪಸ್ಥಿತರಿದ್ದರು.