Advertisement
ಇಲ್ವಲ ಎನ್ನುವವನು ಒಬ್ಬ ರಾಕ್ಷಸ ಅವನ ತಮ್ಮ ವಾತಾಪಿ. ಈ ಇಬ್ಬರೂ ಸೋದರರಿಗೆ ಮಾಯವಿದ್ಯೆ ಗೊತ್ತಿತ್ತು. ಇಲ್ವಲನು ಬ್ರಾಹ್ಮಣರನ್ನು ಅತಿಥಿಗಳಾಗಿ ಕರೆಯುತ್ತಿದ್ದ. ತಮ್ಮ ವಾತಾಪಿಯನ್ನು ಮೇಕೆಯನ್ನಾಗಿ ಮಾಡಿ ಆ ಮೇಕೆಯನ್ನು ಕಡಿದು ಅದರ ಮಾಂಸವನ್ನು ಅತಿಥಿಗೆ ಬಡಿಸುತ್ತಿದ್ದ. ಊಟವಾದ ನಂತರ “ವಾತಾಪಿ, ಹೊರಕ್ಕೆ ಬಾ’ ಎಂದು ಕರೆಯುತ್ತಿದ್ದ. ವಾತಾಪಿಯು ಅತಿಥಿಯ ಹೊಟ್ಟೆಯನ್ನು ಸೀಳಿಕೊಂಡು ಹೊರಗೆ ಬರುತ್ತಿದ್ದ. ಆನಂತರದಲ್ಲಿ ಸೋದರರಬ್ಬರು ಸೇರಿಕೊಂಡು ಅತಿಥಿಯನ್ನು ತಿಂದು ಮುಗಿಸುತ್ತಿದ್ದರು. ಹೀಗೆ, ಇವರು ಅನೇಕರನ್ನು ಕೊಂದಿದ್ದರು.
*****
ಒಮ್ಮೆ ಪರ್ವತ ರಾಜ ವಿಂಧ್ಯನಿಗೆ ಸೂರ್ಯನು ಮೇರುವಿಗೆ ಹೆಚ್ಚಿನ ಗೌರವವನ್ನು ತೋರಿಸುತ್ತಾನೆ, ತನ್ನನ್ನು ಕಂಡರೆ ಅವನಿಗೆ ಸಾಕಷ್ಟು ಗೌರವವಿಲ್ಲ ಎನ್ನಿಸಿತು. ವಿಂಧ್ಯನು ಸೂರ್ಯನನ್ನು ಪ್ರಶ್ನಿಸಿದಾಗ ಅವನು, “”ನಾನು ಮೇರುವಿನ ಸುತ್ತ ಪ್ರದಕ್ಷಿಣೆ ಮಾಡುವುದು ನನ್ನ ಇಚ್ಛೆಯಿಂದಲ್ಲ, ಸೃಷ್ಟಿ ನಿಯಮದಂತೆ” ಎಂದ. ವಿಂಧ್ಯನು ತಾನು ಮೇರುವಿಗಿಂತ ಎತ್ತರ ಬೆಳೆಯುವೆನೆಂದು ಹಠ ಹಿಡಿದು ಎತ್ತರ ಬೆಳೆಯಲು ಆರಂಭಿಸಿದ; ಸೂರ್ಯಚಂದ್ರರನ್ನು ತಡೆದು ನಿಲ್ಲಿಸುವೆನೆಂದ. ದೇವತೆಗಳೇ ಬುದ್ಧಿವಾದ ಹೇಳಿದರೂ ಕೇಳಲಿಲ್ಲ. ಈ ಸಂದರ್ಭದಲ್ಲಿ ದೇವತೆಗಳು ಅಗಸ್ತ್ಯರನ್ನು ಪ್ರಾರ್ಥಿಸಿದರು. ಅಗಸ್ತ್ಯರು ಪತ್ನಿ ಲೋಪಾಮುದ್ರೆಯೊಂದಿಗೆ ವಿಂಧ್ಯ ಪರ್ವತದ ಬಳಿಗೆ ಹೋದರು. ವಿಂಧ್ಯನು ಅವರನ್ನು ಗೌರವದಿಂದ ಕಂಡ. ಮಹರ್ಷಿಗಳು, “”ನಾನು ಉತ್ತರಕ್ಕೆ ಹೋಗುತ್ತಿದ್ದೇನೆ. ನೀನು ಹೀಗೆಯೇ ಬೆಳೆಯುತ್ತಿದ್ದರೆ ನಾನು ದಕ್ಷಿಣಕ್ಕೆ ಬರುವುದಕ್ಕೆ ಸಾಧ್ಯವಾಗುವುದಿಲ್ಲ. ನಾನು ಹಿಂದಕ್ಕೆ ಬರುವವರೆಗೆ ಬೆಳೆಯಬೇಡ” ಎಂದು ಹೇಳಿದರು. ಈ ಮಾತಿಗೆ ವಿಂಧ್ಯನು ಒಪ್ಪಿದ. ಅಗಸ್ತ್ಯರು ಹಿಂದಕ್ಕೆ ಬರಲೇ ಇಲ್ಲ. ಪರಿಣಾಮವಾಗಿ, ವಿಂಧ್ಯನ ಅಪಾಯಕಾರಿ ಬೆಳವಣಿಗೆಯು ನಿಂತೇಹೋಯಿತು.
*****
ಕಾಲಕೇಯರೆಂಬ ರಾಕ್ಷಸರು ದೇವತೆಗಳಿಗೆ ಬಹಳ ತೊಂದರೆ ಕೊಡುತ್ತಿದ್ದರು. ತಪಸ್ವಿಗಳಿಗೂ ಹಿಂಸೆ ಕೊಡುತ್ತಿದ್ದರು. ಅವರು ಸಮುದ್ರದೊಳಗೆ ವಾಸ ಮಾಡುವವರು. ಈ ರಕ್ಕಸರ ಕಾಟದಿಂದ ಪಾರಾಗಲು ದೇವತೆಗಳು ಅಗಸ್ತ್ಯರ ಮೊರೆ ಹೊಕ್ಕರು. ಅಗಸ್ತ್ಯರು ದೇವತೆಗಳನ್ನು ಕರೆದುಕೊಂಡು ಸಮುದ್ರತೀರಕ್ಕೆ ಹೋದರು. ದೇವತೆಗಳಿಗೆ, “”ನಾನು ಈಗ ಸಮುದ್ರದ ನೀರನ್ನು ಕುಡಿದು ಬಿಡುತ್ತೇನೆ. ನಿಮ್ಮ ಕೆಲಸವನ್ನು ನೀವು ಮಾಡಿ” ಎಂದರು. ದೇವತೆಗಳು ನೋಡುತ್ತಿದ್ದಂತೆಯೇ ಅಗಸ್ತ್ಯರು ಸಮುದ್ರದ ನೀರನ್ನೆಲ್ಲ ಕುಡಿದುಬಿಟ್ಟರು. ಕಾಲಕೇಯರು ಈಗ ಅಡಗಿಕೊಳ್ಳಲು ಸ್ಥಳವಿರಲಿಲ್ಲ. ಈ ಸಂದರ್ಭದಲ್ಲಿ ದೇವತೆಗಳು ಅವರನ್ನು ಕೊಂದರು. (ಮುಂದೆ ಭಗೀರಥನು ಮತ್ತೆ ಸಮುದ್ರಕ್ಕೆ ನೀರನ್ನು ತಂದುಕೊಟ್ಟ).