Advertisement

ಜನಗಣತಿ ವರದಿ ಬಹಿರಂಗಕ್ಕೆ ಪ್ರತಿಭಟನಾ ಮೆರವಣಿಗೆ

01:14 PM Jun 20, 2017 | Team Udayavani |

ದಾವಣಗೆರೆ: ಜಾತಿವಾರು ಜನಗಣತಿ ವರದಿ ಬಹಿರಂಗಕ್ಕೆ ಒತ್ತಾಯಿಸಿ ಜಾತಿ ಜನಗಣತಿ ವರದಿ ಬಿಡುಗಡೆಗಾಗಿ ಒತ್ತಾಯಿಸುವ ಕ್ರಿಯಾಸಮಿತಿ ನೇತೃತ್ವದಲ್ಲಿ ಸೋಮವಾರ ಮೆರವಣಿಗೆ ನಡೆಯಿತು. ಅಂಬೇಡ್ಕರ್‌ ವೃತ್ತದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು, ಉಪ ವಿಭಾಗಾಧಿಕಾರಿ ಕಚೇರಿವರೆಗೆ ಸಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕಳುಹಿಸಲು ಮನವಿ ಸಲ್ಲಿಸಿದರು.

Advertisement

ಜಾತಿವಾರು ಜನಗಣತಿ ವರದಿ ಬಹಿರಂಗಕ್ಕೆ ಒಕ್ಕೊರಲಿನಿಂದ ಒತ್ತಾಯಿಸಿದರಲ್ಲದೆ, ರಾಜ್ಯ ಸರ್ಕಾರ ಆದಷ್ಟು ಬೇಗ ವರದಿ ಬಹಿರಂಗಗೊಳಿಸದಿದ್ದಲ್ಲಿ ರಾಜ್ಯವ್ಯಾಪಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿದರು. 

ಸ್ವಾತಂತ್ರ ನಂತರವೂ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತ ಸಮುದಾಯದವರಿಗೆ ಸಾಮಾಜಿಕನ್ಯಾಯ ಅಕ್ಷರಶಃ ಮರೀಚಿಕೆಯಾಗಿದೆ. ಜಾತಿ ಮೂಲದ ಅನ್ಯಾಯಕ್ಕೆ ಒಳಗಾದ ಅಲಕ್ಷಿತ ಸಮುದಾಯಗಳು ವಂಚನೆಗೊಳಗಾಗುತ್ತಿವೆ. ಅಸಮಾನತೆ ದೂರ ಮಾಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದಿಂದ 1931ರ ನಂತರ ಕರ್ನಾಟಕದಲ್ಲಿ 600 ಕೋಟಿ ವೆಚ್ಚದಲ್ಲಿ ಕೈಗೊಂಡಿದ್ದ ಸಾಮಾಜಿಕ ಶೈಕ್ಷಣಿಕ ಸಮೀಕ್ಷಾ ವರದಿ ಇನ್ನೂ ಬಿಡುಗಡೆ ಆಗಿಲ್ಲ. 

ರಾಜಕೀಯ ಒತ್ತಡ, ಪ್ರಭಾವಕ್ಕೆ ಒಳಗಾಗಿರುವ ರಾಜ್ಯ ಸರ್ಕಾರ ವರದಿ ಬಿಡುಗಡೆಗೆ ಹಿಂಜರಿಯುತ್ತಿರುವುದು ಅತ್ಯಂತ ಖಂಡನೀಯ ಎಂದರು. ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅತಿ ಪ್ರಮುಖವಾಗಿರುವ ಜಾತಿ ಬಾಂಧವರ ಸಂಖ್ಯೆಯ ಬಗ್ಗೆ ನಿಖರ ಮಾಹಿತಿಯ ವರದಿ ಬಿಡುಗಡೆಗೆ ಒತ್ತಾಯಿಸಿ ಹಲವಾರು ದಿನಗಳಿಂದ ನಿರಂತರವಾಗಿ ಒತ್ತಾಯಿಸಲಾಗುತ್ತಿದೆ.

ಆದರೆ, ರಾಜ್ಯ ಸರ್ಕಾರ ವರದಿ ಬಿಡುಗಡೆ ಮಾಡುವತ್ತ ಗಮನ ನೀಡುತ್ತಿಲ್ಲ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಸಾಮಾಜಿಕ ಶೈಕ್ಷಣಿಕ ಸಮೀಕ್ಷಾ ವರದಿಯನ್ನ ಸರ್ಕಾರ ಬಹಿರಂಗಕ್ಕೆ ಮೀನಾಮೇಷ ಎಣಿಸುತ್ತಿದೆ. ಸರ್ಕಾರದ ವಿಳಂಬ ನೀತಿಗೆ ಪ್ರಬಲ ಸಮುದಾಯಗಳ ಅಡ್ಡಿ ಪ್ರಮುಖ ಕಾರಣ. 

Advertisement

ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೆ ವರದಿ ಬಿಡುಗಡೆ ಮಾಡುವ ಮೂಲಕ ಅಲಕ್ಷಿತ ಸಮುದಾಯದವರಿಗೆ ಸಾಮಾಜಿಕ ನ್ಯಾಯ, ಜನಸಂಖ್ಯಾವಾರು ಮೀಸಲಾತಿ ಸೌಲಭ್ಯ ಪಡೆಯುವ ಅವಕಾಶ ಮಾಡಿಕೊಡಬೇಕು. ಹಿಂದುಳಿದ ವರ್ಗಗಳ ಆಯೋಗಕ್ಕೆ ಶಾಸನಬದ್ಧ ಸ್ಥಾನಮಾನ ನೀಡುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು. 

ಜಿಲ್ಲಾ ಪಂಚಾಯತ್‌ ಸದಸ್ಯ ಜಿ.ಸಿ. ನಿಂಗಪ್ಪ, ತಾಲೂಕು ಪಂಚಾಯತ್‌ ಸದಸ್ಯ ಆಲೂರು ನಿಂಗರಾಜ್‌, ಎಪಿಎಂಸಿ ಉಪಾಧ್ಯಕ್ಷ ಎಂ.ಬಿ. ಹಾಲಪ್ಪ, ಮಾಜಿ ಮೇಯರ್‌ ಎಚ್‌. ಎನ್‌. ಗುರುಮೂರ್ತಿ, ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷ ಎಸ್‌. ಬಸವರಾಜಪ್ಪ, ಸಮಿತಿಯ ಬಿ.ಎಂ. ಸತೀಶ್‌, ಕೆಂಗೋ ಹನುಮಂತಪ್ಪ,

-ಅನೀಸ್‌ ಪಾಷಾ, ಪ್ರೊ| ಎ.ಬಿ. ರಾಮಚಂದ್ರ, ಡಿ. ಬಸವರಾಜ್‌ ಗುಬ್ಬಿ, ಜೆ. ಅಮಾನುಲ್ಲಾಖಾನ್‌, ಅಯಾಜ್‌ ಹುಸೇನ್‌, ರಾಘು ದೊಡ್ಮನಿ, ಗಣೇಶ್‌ ದಾಸಕರಿಯಪ್ಪ, ಯರಬಳ್ಳಿ ಉಮಾಪತಿ, ಐರಣಿ ಚಂದ್ರು, ಹೆಗ್ಗೆರೆ ರಂಗಪ್ಪ, ಪಾಪಣ್ಣ, ಗೋಣಿವಾಡ ಮಂಜುನಾಥ್‌, ಕೆ. ರವಿ. ರೇಣುಕ ಯಲ್ಲಮ್ಮ ಹಾವೇರಿ, ಅಸರ್‌, ಹೂವಿನಮಡು ಚಂದ್ರಪ್ಪ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next