ಕುಂಬಳೆ: ಸಾಲ ತೀರಿಸಲಾಗದೆ ಮನೆ ಮಾರಾಟಕ್ಕೆ ಹೊರಟಿದ್ದ ಬಡ ವ್ಯಕ್ತಿಗೆ ಕೇರಳ ಸರಕಾರದ ಲಾಟರಿಯಲ್ಲಿ ಒಂದು ಕೋಟಿ ರೂ. ಲಭಿಸಿದೆ.
ಮಂಜೇಶ್ವರ ಪಾವೂರು ನಿವಾಸಿ, ಪೈಂಟಿಂಗ್ ಕಾರ್ಮಿಕ ಮಹಮ್ಮದ್ ಯಾನೆ ಬಾವ ಲಾಟರಿ ಬಹುಮಾನ ಒಲಿದ ಅದೃಷ್ಟಶಾಲಿ. ಮಹಮ್ಮದ್ ಅವರು ಕೇರಳ ರಾಜ್ಯ 50-50 ಲಾಟರಿಯ ರವಿವಾರದ ಡ್ರಾದಲ್ಲಿ ಈ ಅದೃಷ್ಟ ಒಲಿದಿದೆ.
ಇವರು ಖಾಯಂ ಆಗಿ ಲಾಟರಿ ಖರೀದಿಸುತ್ತಿದ್ದ ಹೊಸಂಗಡಿಯ ಅಮ್ಮಾ ಲಾಟರಿ ಏಜನ್ಸಿಯಿಂದ ಈ ಅದೃಷ್ಟ ಟಿಕೆಟನ್ನು ಖರೀದಿಸಿದ್ದರು.
ಬಡ ಕುಟುಂಬದವರಾದ ಮಹಮ್ಮದ್ ಬಾವ ಕೂಲಿ ಕೆಲಸ ಮಾಡಿಯೇ ಜೀವನ ನಡೆಸುತ್ತಿದ್ದು ಇಬ್ಬರು ಪುತ್ರಿಯರ ವಿವಾಹವನ್ನು ಸಾಲಮಾಡಿ ನೆರವೇರಿಸಿದ್ದರು.
ಅಲ್ಲದೆ ಸಾಲ ಮಾಡಿಯೇ ಮನೆಯನ್ನು ನಿರ್ಮಿಸಿದ್ದರು. ಸಾಲ ಮರುಪಾವತಿ ಮಾಡಲಾಗದೆ ಮನೆಯನ್ನೇ ಮಾರಾಟ ಮಾಡಿ, ಬಾಡಿಗೆ ಮನೆಯಲ್ಲಿ ನೆಲೆಸಲು ಸಿದ್ಧತೆ ನಡೆಸುತ್ತಿದ್ದಂತೆಯೇ ಮಹಮ್ಮದ್ ಬಾವ ಅವರಿಗೆ ಅದೃಷ್ಟದ ಬಾಗಿಲು ತೆರೆದಿದೆ. ತನ್ನ ಬಡತನ ನಿವಾರಣೆಗೆ ದೇವರೇ ದಾರಿ ತೋರಿಸಿದ್ದಾರೆಂದು ಅವರು ಭಾವುಕರಾಗಿ ಹೇಳಿದ್ದಾರೆ.
ದೇವರ ದಯದಿಂದ ದೊರಕಿದ ನಿಧಿಯನ್ನು ಸದ್ವಿನಿಯೋಗ ಮಾಡಲು ಅವರು ನಿರ್ಧರಿಸಿದ್ದಾರೆ.