Advertisement
ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾ.ಪಂ. ವ್ಯಾಪ್ತಿಯ ಅಲ್ಲಿಪಾದೆ, ಉಜಿರಾಡಿ ಕ್ವಾಟ್ರಸ್ ನಲ್ಲಿ ಬಡ ಕುಟುಂಬ ತಾತ್ಕಾಲಿಕವಾಗಿ ನಿರ್ಮಿಸಿದ ಗುಡಿಸಲಿನಲ್ಲಿ ವಾಸವಾಗಿದ್ದು, ಗಾಳಿ – ಮಳೆಗೆ ಅವರಿಗೆ ಇಲ್ಲಿ ವಾಸ ನರಕ ಸದೃಶವಾಗಿದೆ. ಸಂಜೀವ-ಸುನಂದಾ ದಂಪತಿ ಕಳೆದ 7 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ. ಗುಡ್ಡದ ಮೇಲ್ಭಾಗದಲ್ಲಿ ಸರಕಾರಿ ಸ್ಥಳದಲ್ಲಿ ಚಿಕ್ಕ ಒಂದು ಕೋಣೆಯ ಗುಡಿಸಲು ನಿರ್ಮಿಸಿ ಮೇಲ್ಭಾಗಕ್ಕೆ ಟರ್ಪಾಲು ಹಾಸಿದ್ದಾರೆ. ಆದರೆ ಈಗ ಟಾರ್ಪಾಲು ಹರಿದಿದ್ದು, ಮಳೆಗೆ ಸೋರುತ್ತಿದೆ. ರಾತ್ರಿ ನಿದ್ದೆ ಇಲ್ಲದೆ ಕಳೆಯುವಂತಹ ಪರಿಸ್ಥಿತಿ ಈ ಕುಟುಂಬದವರದ್ದಾಗಿದೆ. ಅವರ ಗುಡಿಸಲು ಗುಡ್ಡದ ಮೇಲ್ಭಾಗದಲ್ಲಿದ್ದು, ಇದಕ್ಕೆ ಹೋಗಲು ದಾರಿಯೇ ಇಲ್ಲ. ಮಣ್ಣನ್ನು ಕೆತ್ತಿ ಮೆಟ್ಟಿಲು ತರಹ ಮಾಡಿದ್ದರೂ ಮಳೆ ನೀರಿಗೆ ಮಣ್ಣು ಕರಗಿ ಹೋಗಿದೆ. ಮಕ್ಕಳು ಈ ದಾರಿಯಲ್ಲೇ ಗುಡ್ಡ ಹತ್ತ ಬೇಕಾಗಿದೆ. ರಾತ್ರಿ ಹೊತ್ತು ಸಂಚಾರವೇ ಅಸಾಧ್ಯ. ಇವರಿಗೆ ಶೌಚಾಲಯ, ವಿದ್ಯುತ್ ವ್ಯವಸ್ಥೆಯೇ ಇಲ್ಲ.
ಸಂಜೀವ ಅವರು ಕೂಲಿ ಕೆಲಸ ಮಾಡುತ್ತಿದ್ದು, ಕಳೆದ ಎಂಟು ತಿಂಗಳಿನಿಂದ ಅನಾರೋಗ್ಯದಿಂದ್ದಾರೆ. ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿರುವ ಅವರಿಗೆ ಶೀಘ್ರ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದರೂ ಆರ್ಥಿಕ ಸಮಸ್ಯೆಯಿಂದ ಅಸಹಾಯಕರಾಗಿದ್ದಾರೆ. ಸುನಂದಾ ಅವರು ಬೀಡಿ ಕೆಲಸ ಮಾಡುತ್ತಿದ್ದು, ಅವರೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸುನಂದಾ ಅವರ ಆದಾಯದಿಂದ ಈ ಕುಟುಂಬದ ನಿರ್ವಹಣೆ ಮತ್ತು 4 ಮಕ್ಕಳ ವಿದ್ಯಾಭ್ಯಾಸದ ವೆಚ್ಚ ಭರಿಸಲು ಕಷ್ಟಕರವಾಗಿದೆ. ಮಕ್ಕಳನ್ನು ಉಚಿತ ಶಿಕ್ಷಣದ ಆಸೆಯಿಂದ ದೂರದ ಖಾಸಗಿ ಶಾಲೆಗೆ ಸೇರಿಸಿದ್ದು, ಈಗ ಬಸ್ ವೆಚ್ಚ, ಸಮವಸ್ತ್ರ ವೆಚ್ಚ ಭರಿಸಲಾಗದೇ ಕಂಗಾಲಾಗಿದ್ದಾರೆ. ಹಲವಾರು ಸಮಾಜಮುಖೀ ಸೇವಾ ಕಾರ್ಯಗಳನ್ನು ನಡೆಸುತ್ತಿರುವ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ಈ ಬಡ ಕುಟುಂಬದ ದುಃಸ್ಥಿತಿಯನ್ನು ಮನಗಂಡು ದಾನಿಗಳ ಸಹಕಾರದಿಂದ ಈ ಕುಟುಂಬಕ್ಕೆ ಸಹಾಯ ಹಸ್ತ ನೀಡಲು ಮುಂದೆ ಬಂದಿದೆ. ಅವರೊಡನೆ ಇತರ ಸಂಘ ಸಂಸ್ಥೆಗಳು, ದಾನಿಗಳು ಜತೆಗೂಡಿದರೆ ಈ ಬಡ ಕುಟುಂಬಕ್ಕೆ ಸಹಾಯವಾದೀತು. ಕಷ್ಟದ ಬದುಕು
ಕಳೆದ 7 ವರ್ಷಗಳಿಂದ ಇಲ್ಲಿ ವಾಸವಾಗಿದ್ದೇವೆ. ಮನೆ ನಿರ್ಮಾಣಕ್ಕೆ ಸ್ಥಳದ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದೇವೆ. ಆದರೆ ಹಕ್ಕುಪತ್ರ ಲಭಿಸಿಲ್ಲ. ರೇಷನ್ ಕಾರ್ಡ್ ಇಲ್ಲ. ಬಡತನದಿಂದಾಗಿ ಮನೆ ದುರಸ್ತಿಪಡಿಸಲು ಅನಾನುಕೂಲವಾಗಿದೆ. ಮಕ್ಕಳ ಶಾಲಾ ಖರ್ಚು-ವೆಚ್ಚ ಭರಿಸಲು ಅಸಾಧ್ಯವಾಗಿದೆ. ಮಳೆಯಿಂದಾಗಿ ದಿನ ಕಳೆಯವುದೇ ಕಷ್ಟವಾಗಿದೆ.
– ಸುನಂದಾ, ಗುಡಿಸಲು ನಿವಾಸಿ
Related Articles
ಸುನಂದಾ ಅವರಿಂದ ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಕೆಯಾಗಿಲ್ಲ. ಜಾಗದ ಹಕ್ಕುಪತ್ರ ಲಭಿಸಿದರೆ ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಬಹುದು.
– ರಾಜಶೇಖರ ರೈ, ಪ್ರಭಾರ ಪಿಡಿಒ, ಸರಪಾಡಿ ಗ್ರಾ.ಪಂ.
Advertisement