ಅಹಮದಾಬಾದ್(ಗುಜರಾತ್): 1.07 ಕೋಟಿ ರೂಪಾಯಿ ಕಳ್ಳತನ ಪ್ರಕರಣವನ್ನು ಭೇದಿಸಲು ಪೊಲೀಸ್ ನಾಯಿಯೊಂದು ನೆರವಾಗಿದೆ. ನಾಯಿಯ ಚಾಣಾಕ್ಷತನದಿಂದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
52 ವರ್ಷದ ರೈತರೊಬ್ಬರು ತಮ್ಮ ಗ್ರಾಮಕ್ಕೆ ಸಮೀಪವಿರುವ ಲೋಥಲ್ ಪುರಾತತ್ವ ಸ್ಥಳದ ಬಳಿಯ ಒಂದು ತುಂಡು ಭೂಮಿಯನ್ನು ಮಾರಾಟ ಮಾಡಿದ ನಂತರ ರಾತ್ರೋರಾತ್ರಿ ಮಿಲಿಯನೇರ್ ಆಗಿದ್ದರು. ಅವರಿಗೆ ಭೂಮಿ ಮಾರಾಟದಿಂದ 1.07 ಕೋಟಿ ರೂ.ಕೈಗೆ ಸಿಕ್ಕಿತ್ತು. ಅದಕ್ಕಾಗಿ ಸಂಚು ಹೂಡಿದ್ದ ಕಳ್ಳರು ಕಿಟಕಿಯ ಬಳಿಯಿದ್ದ ಕೆಲವು ಇಟ್ಟಿಗೆಗಳನ್ನು ತೆಗೆದು ಮನೆಯೊಳಗೆ ನುಗ್ಗಿ ಚೀಲದಲ್ಲಿಟ್ಟಿದ್ದ ಹಣವನ್ನು ಕದ್ದು ಪರಾರಿಯಾಗಿದ್ದರು.
ಕಳ್ಳತನ ಮಾಡಿದ್ದ ಬುಧ ಸೋಲಂಕಿ ಮತ್ತು ಆತನ ಸಹಚರ ವಿಕ್ರಮ್ ಸೋಲಂಕಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರೂ ಆರೋಪಿಗಳು ಧೋಲ್ಕಾ ತಾಲೂಕಿನ ಸರಗ್ವಾಲಾ ಗ್ರಾಮದ ನಿವಾಸಿಗಳು.
ಪೆನ್ನಿ ಎಂಬ ಡಾಬರ್‌ಮ್ಯಾನ್ ತಳಿಯ ಹೆಣ್ಣು ಶ್ವಾನದ ಸಹಾಯದಿಂದ ಗುರುವಾರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಮತ್ತು ಅಕ್ಟೋಬರ್ 12 ರಂದು ಅವರು ಕದ್ದಿದ್ದ ಸಂಪೂರ್ಣ ಹಣದ ಮೊತ್ತವನ್ನು ವಶಪಡಿಸಿಕೊಂಡಿದ್ದಾರೆ.
ತನಿಖೆ ವೇಳೆ ಪೆನ್ನಿಯು ಬುಧನ ಮನೆಯಿಂದ ಸ್ವಲ್ಪ ದೂರದಲ್ಲಿ ನಿಂತಿತು. ಅದಾಗಲೇ ಶಂಕಿತರ ಪಟ್ಟಿಯಲ್ಲಿದ್ದ ಆರೋಪಿಯನ್ನು ಇತರ ಶಂಕಿತರೊಂದಿಗೆ ಸಾಲಾಗಿ ನಿಲ್ಲಿಸಿದಾಗ, ಪೆನ್ನಿಯು ಸ್ವಲ್ಪ ಸಮಯದವರೆಗೆ ಬುಧನ ಬಳಿಯೇ ನಿಂತಿತು” ಎಂದು ಪೊಲೀಸರು ತಿಳಿಸಿದ್ದಾರೆ. ಬುಧನ ಮನೆಯಲ್ಲಿ 53.9 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದು,ಉಳಿದದ್ದು ವಿಕ್ರಮ್ ಮನೆಯಲ್ಲಿ ಪತ್ತೆಯಾಗಿದೆ.