Advertisement

ತ್ಯಾಜ್ಯ ನಿರ್ವಹಣೆಗೆ ಸಿಗದ ಸ್ಥಳ

02:15 PM Jul 07, 2018 | |

ಬೆಂಗಳೂರು: ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಘನ ಹಾಗೂ ದ್ರವ ತ್ಯಾಜ್ಯ ಸಂಸ್ಕರಣೆ ಘಟಕ ನಿರ್ಮಾಣಕ್ಕೆ ಬೆಂಗಳೂರು ನಗರ ಜಿಲ್ಲಾಡಳಿತ ಯೋಜನೆ ರೂಪಿಸಿದೆ. ಆದರೆ, ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಘಟಕ ಸ್ಥಾಪನೆಗೆ ಅಗತ್ಯವಿರುವ ಜಮೀನು ಮಂಜೂರಾಗದ ಹಿನ್ನೆಲೆಯಲ್ಲಿ ಈ ಕಾರ್ಯಕ್ಕೆ ಹಿನ್ನಡೆಯಾಗಿದೆ.

Advertisement

ಬೆಂಗಳೂರು ನಗರ ಜಿ.ಪಂ ವ್ಯಾಪ್ತಿಗೆ ಬರುವ 96 ಗ್ರಾ.ಪಂಗಳು ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿವೆ. ನಗರ ಬೆಳೆದಂತೆ ಪಂಚಾಯತಿಗಳೂ ಅಭಿವೃದ್ಧಿ ಕಾಣುತ್ತಿವೆ. ಇದರಿಂದಾಗಿ ಪಂಚಾಯಿತಿಗಳಲ್ಲಿ ಸಂಗ್ರಹವಾಗುವ ಘನ ಮತ್ತು ದ್ರವ ತ್ಯಾಜ್ಯ ಪ್ರಮಾಣ ಹೆಚ್ಚುತ್ತಿದ್ದು, ಅದರ ನಿರ್ವಹಣೆ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಸ್ವತ್ಛ ಭಾರತ್‌ ಮಿಷನ್‌ (ಗ್ರಾಮೀಣ) ಕಾರ್ಯಕ್ರಮದಡಿ ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ವೈಜ್ಞಾನಿಕವಾಗಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗೆ ಘಟಕ ಸ್ಥಾಪನೆಗಾಗಿ 7ರಿಂದ 20 ಲಕ್ಷ ರೂ.ವರೆಗೆ ಅನುದಾನ ನೀಡಲಾಗುತ್ತಿದೆ. ಇದರೊಂದಿಗೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲೂ ಅನುದಾನ ಲಭ್ಯವಿದೆ. ಆದರೆ, ಘಟಕ ಸ್ಥಾಪಿಸುವ ಜಮೀನು ಗ್ರಾಮ ಪಂಚಾಯಿತಿಗೆ ಸೇರಿರಬೇಕು ಅಥವಾ ಸರ್ಕಾರದಿಂದ ಮಂಜೂರಾಗಬೇಕು ಎಂಬ ನಿಯಮವಿದ್ದು, ಈವರೆಗೆ ಬಹುತೇಕ ಪಂಚಾಯಿತಿಗಳಿಗೆ ಜಮೀನು ಮಂಜೂರಾಗಿಲ್ಲ.

ಈಗಾಗಲೇ, ಆನೇಕಲ್‌ ತಾಲೂಕಿನ ಶಾಂತಿಪುರ ಗ್ರಾ.ಪಂ ಮತ್ತು ಬೆಂಗಳೂರು ಉತ್ತರ ತಾಲೂಕಿನ ರಾಜನಕುಂಟೆ ಗ್ರಾ.ಪಂಗಳಿಗೆ ಮಾತ್ರ ಜಮೀನು ಮಂಜೂರಾಗಿದೆ. ಆ ಪೈಕಿ ಶಾಂತಿಪುರ ಪಂಚಾಯಿತಿ ಕಾಮಗಾರಿ ಪ್ರಗತಿಯಲ್ಲಿದ್ದು, ರಾಜನಕುಂಟೆ ವ್ಯಾಪ್ತಿಯಲ್ಲಿ ಪ್ರಸ್ತಾಪನೆ ಸಿದ್ಧವಾಗುತ್ತಿದೆ. ಉಳಿದಂತೆ ಬೆಂಗಳೂರು ಉತ್ತರ ತಾಲೂಕಿನ ದೊಡ್ಡಜಾಲ ಪಂಚಾಯಿತಿಯಲ್ಲಿ ಮಾತ್ರ ಯೋಜನೆ ಅನುಷ್ಠಾನಗೊಂಡಿದೆ.

ಉಡುಪಿ ಗ್ರಾಮಗಳು ಮಾದರಿ: ಉಡುಪಿ ಜಿ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ (ಎಸ್‌ಎಲ್‌ಆರ್‌ಎಂ) ಯೋಜನೆ ಅನುಷ್ಠಾನವಾಗಿದೆ. ಆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿ.ಪಂ ಹಿರಿಯ ಅಧಿಕಾರಿಗಳ ಮತ್ತು ಚುನಾಯಿತ ಪ್ರತಿನಿಧಿಗಳ ತಂಡ ಉಡುಪಿಯ ಕೆಲವೊಂದು ಪಂಚಾಯಿತಿಗಳಿಗೆ ಭೇಟಿ ನೀಡಿ, ಘನ ತ್ಯಾಜ್ಯ ನಿರ್ವಹಣೆ ಕುರಿತು ಮಾಹಿತಿ ಪಡೆದುಕೊಂಡಿದೆ.

Advertisement

ಮಾಸ್ಟರ್‌ ಟ್ರೈನರ್‌ಗಳಿಗೆ ತರಬೇತಿ: ಘನ ತಾಜ್ಯ ನಿರ್ವಹಣೆಯನ್ನು ಸವಾಲಾಗಿ ಸ್ವೀಕರಿಸಿರುವ ಬೆಂಗಳೂರು ನಗರ ಜಿ.ಪಂ, ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರಿಯಾ ಯೋಜನೆಗಳನ್ನು ಹಾಕಿಕೊಂಡಿದೆ. ಪ್ರತಿ ಪಂಚಾಯಿತಿಯಿಂದ ಆಯ್ದ ಟ್ರೈನರ್‌ಗಳಿಗೆ ತರಬೇತಿ ನೀಡುವ ಆಲೋಚನೆ ಕೂಡ ಇದರಲ್ಲಿ ಸೇರಿದೆ.

ಅಲ್ಲದೆ, ಜಾಗದ ಸಮಸ್ಯೆ ಇರುವ ಗ್ರಾ.ಪಂಗಳಲ್ಲಿ ಲಭ್ಯವಿರುವ ಖಾಲಿ ನಿವೇಶನ ಅಥವಾ ಹಳೇ ಕಟ್ಟಡಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಆರಂಭಿಸುವ ಚಿಂತನೆ ನಡೆಸಿದೆ. ಜತೆಗೆ ಮನೆ ಮನೆಗಳಿಂದ ಪ್ರತ್ಯೇಕವಾಗಿ ಹಸಿ ಕಸ ಹಾಗೂ ಒಣ ಕಸ ಸಂಗ್ರಹಿಸಿ, ಹೂವು-ಹಣ್ಣು, ತರಕಾರಿ, ಆಹಾರ ಪದಾರ್ಥಗಳ ತ್ಯಾಜ್ಯದಿಂದ ಗೊಬ್ಬರ ತಯಾರಿಸುವುದು. ಆ ಮೂಲಕ ಉದ್ಯೋಗ ಸೃಷ್ಟಿಸುವ ಉದ್ದೇಶವನ್ನು ಜಿ.ಪಂ ಹೊಂದಿದೆ.

ಆರ್ಥಿಕ ನೆರವು ಹೇಗೆ ದೊರೆಯುತ್ತೆ?: ಸ್ವಚ್‌ ಭಾರತ್‌ ಮಿಷನ್‌ (ಗ್ರಾಮೀಣ) ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದಿಂದ ಶೇ.60ರಷ್ಟು ಮತ್ತು ರಾಜ್ಯ ಸರ್ಕಾರದಿಂದ ಶೇ.40ರಷ್ಟು ಹಣ ಬರುತ್ತದೆ. ಅದರಂತೆ 150 ಕುಟುಂಬಗಳು ಇರುವ ಗ್ರಾಮಕ್ಕೆ 7 ಲಕ್ಷ ರೂ. ಅನುದಾನ ನೀಡಲಾಗುತ್ತದೆ. 300 ಕುಟುಂಬಗಳಿರುವ ಗ್ರಾಮಗಳಿಗೆ 15 ಲಕ್ಷ ಹಾಗೂ 500 ಕುಟುಂಗಳಿರುವ ಗ್ರಾಮಗಳಿಗೆ 20 ಲಕ್ಷ ರೂ. ಅನುದಾನ ದೊರೆಯಲಿದೆ. ಪಂಚಾಯಿತಿಗಳು ಅನುದಾನ ಸಮರ್ಪಕವಾಗಿ ಬಳಸದಿದ್ದರೆ ಅನುದಾನ ವಾಪಸ್‌ ಹೋಗಲಿದೆ. 
  
ತ್ಯಾಜ್ಯ ನಿರ್ವಹಣೆ ಸಂಬಂಧ ಬೆಂಗಳೂರು ನಗರ ಜಿ.ಪಂ ಹಲವು ಕ್ರಿಯಾ ಯೋಜನೆಗಳನ್ನು ರೂಪಿಸಿದೆ. ಇದರಲ್ಲಿ ಮಾಸ್ಟರ್‌ ಟ್ರೈನರ್‌ಗಳಿಗೆ ತರಬೇತಿ ನೀಡುವುದು ಕೂಡ ಸೇರಿದೆ. ಸರ್ಕಾರದಿಂದ ಜಮೀನು ಮಂಜೂರಾಗದ ಕಾರಣ ಯೋಜನೆ ಅನುಷ್ಠಾನ ಕಷ್ಟವಾಗುತ್ತಿದೆ.
-ಕೆ.ಜೆ.ಜಗದೀಶ್‌, ಸಹಾಯಕ ಯೋಜನಾಧಿಕಾರಿ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next