Advertisement

ಅ. 16ಕ್ಕೆ  94ಸಿಸಿ ಅಡಿ ಹಕ್ಕುಪತ್ರ ವಿತರಣೆ: ಸಚಿವ ಪ್ರಮೋದ್‌

09:20 AM Sep 12, 2017 | Harsha Rao |

ಉಡುಪಿ: 94ಸಿಸಿ ಅಡಿ ಜಾಗ ಮಂಜೂರಾತಿ ಗಾಗಿ ಈಗಾಗಲೇ ಸೂಕ್ತ ದಾಖಲೆ ಪತ್ರಗಳೊಂದಿಗೆ ಅರ್ಜಿ ಸಲ್ಲಿಸಿರುವ ಅರ್ಹ ಫ‌ಲಾನುಭವಿಗಳಿಗೆ ಉಡುಪಿ ಫಿರ್ಕಾದಲ್ಲಿ ಅಕ್ಟೋಬರ್‌ 16ಕ್ಕೆ 94ಸಿಸಿ ಅಡಿ ಹಕ್ಕುಪತ್ರಗಳನ್ನು ವಿತರಿಸಲಾಗು
ವುದು ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಮಣಿಪಾಲದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಶ್ರೀ ರಮಾನಂದ ಸ್ಮತಿ ಮಂಟಪದಲ್ಲಿ ಸೋಮವಾರ ನಡೆದ ಉಡುಪಿ ನಗರಸಭೆ ವ್ಯಾಪ್ತಿಯ “ಸರಳೇಬೆಟ್ಟು ವಾರ್ಡ್‌ ಮಟ್ಟದ ಜನಸಂಪರ್ಕ ಸಭೆ’ಯ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನರ ಧ್ವನಿಯಾದ ಜನಸಂಪರ್ಕ ಸಭೆ “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಯಜಮಾನರು’ ಎನ್ನುವ ನೆಲೆಯಲ್ಲಿ ಜನರ ಧ್ವನಿಗೆ ಸ್ಪಂದಿಸಬೇಕೆನ್ನುವ ಉದ್ದೇಶದಿಂದ ಉಡುಪಿ ವಿಧಾನಸಭೆ ವ್ಯಾಪ್ತಿಯಲ್ಲಿ ಆಯೋಜಿಸಿರುವ ವಿಶಿಷ್ಟವಾದ
ಜನಸಂಪರ್ಕ ಸಭೆಗಳಲ್ಲಿ ಇದು  55ನೇ ಸಭೆಯಾಗಿದೆ. ಈ ಸಭೆಯ ಮೂಲಕ ಜನರ ಕುಂದು- ಕೊರತೆಗಳಿಗೆ ಸೂಕ್ತ ಪರಿಹಾರಗಳೊಂದಿಗೆ ಅಗತ್ಯವಾಗಿ ಆಗಬೇಕಿದ್ದ ಕೆಲಸಗಳು ತೃಪ್ತಿದಾಯಕವಾಗಿ ನಡೆಯುತ್ತಿವೆ ಎನ್ನುವ ಮಾತು ಕೇಳಿಬರುತ್ತಿದೆ. ನನೆಗುದಿಗೆ ಬಿದ್ದಿದ್ದ ಹಲವಾರು ಕಾಮಗಾರಿಗಳ ಬಗ್ಗೆ ಜನತೆ ನಿಸ್ಸಂಕೋಚವಾಗಿ ಹೇಳುವ ಮೂಲಕ
ಸರಕಾರವನ್ನು ಎಚ್ಚರಿಸುತ್ತಿದ್ದಾರೆ. ಅಲ್ಲದೇ ಸಭೆಯಿಂದ ಅಧಿಕಾರಿ ವರ್ಗದವರಿಗೂ ಚುರುಕು ಮುಟ್ಟಿಸುವ ಕಾರ್ಯ ನಡೆಯುತ್ತಿದೆ ಎಂದರು. 

ಸವಲತ್ತು ವಿತರಣೆ
ಇದೇ ಸಂದರ್ಭ ಸಚಿವರು ಅರ್ಹ ಫ‌ಲಾನುಭವಿಗಳಿಗೆ ಕಂದಾಯ ಇಲಾಖೆಯ ಮನಸ್ವಿನಿ ಯೋಜನೆ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ಯೋಜನೆ ಹಾಗೂ ಶಿಶು ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 6 ಮಂದಿ ಫ‌ಲಾನು ಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್‌ ವಿತರಿಸಿದರು. ಗ್ರಾಮಸ್ಥರಿಂದ ಅಹವಾಲು ಅರ್ಜಿಗಳನ್ನು ಸ್ವೀಕರಿಸಿದ ಸಚಿವರು ಬಹುತೇಕ ಅರ್ಜಿಗಳಿಗೆ ವಿವಿಧ ಇಲಾಖಾಧಿಕಾರಿಗಳ ಮುಖಾಂತರ ಸ್ಥಳದಲ್ಲಿಯೇ ಪರಿಹಾರ ಹೇಳಿದರು. ಕೆಲವಷ್ಟು ಅರ್ಜಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವರೇ ಅಧಿಕಾರಿ ವರ್ಗಕ್ಕೆ ಸೂಚಿಸಿದರು.

ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನರಸಿಂಹಮೂರ್ತಿ, ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕೆರೆ, ಸರಳೇಬೆಟ್ಟು ವಾರ್ಡ್‌ ಸದಸ್ಯೆ ಜ್ಯೋತಿ, ನಗರಸಭೆ ಸದಸ್ಯರಾದ ರಮೇಶ್‌ ಕಾಂಚನ್‌, ನಾರಾಯಣ ಕುಂದರ್‌, ಜನಾರ್ದನ ಭಂಡಾರ್ಕರ್‌, ಗಣೇಶ್‌ ನೇರ್ಗಿ, ಮಣಿಪಾಲ ಸರ್ಕಲ್‌ ಇನ್ಸ್‌ಪೆಕ್ಟರ್‌ ಸುದರ್ಶನ್‌ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿ ನಗರಸಭೆ ಪೌರಾಯುಕ್ತ ಡಿ. ಮಂಜುನಾಥಯ್ಯ ಅವರು ಸ್ವಾಗತಿಸಿ, ಪ್ರಸ್ತಾವನೆಗೈದರು. ಸುಧಾಕರ ಪೆರಂಪಳ್ಳಿ ಅವರು ಕಾರ್ಯಕ್ರಮ ನಿರೂಪಿಸಿದರು.

Advertisement

ಉಡುಪಿಗೆ ವಾರಾಹಿ ನೀರು
ಮಳೆ ಪ್ರಮಾಣ ಕಡಿಮೆಯಾಗಿರುವ ಕಾರಣ ಉಡುಪಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ ವಾರಾಹಿ ನದಿ ನೀರನ್ನು ಉಡುಪಿಗೆ ತರಲು ಸರಕಾರದಿಂದ 252 ಕೋ.ರೂ.

ಮಂಜೂರುಗೊಳಿಸಲಾಗಿದೆ. ಈ ಮೂಲಕ ಉಡುಪಿ ಭಾಗದಲ್ಲಿ ಇನ್ನು ಮುಂದೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರಕಲಿದೆ. ಸರಳೇಬೆಟ್ಟು ವಾರ್ಡ್‌ನಲ್ಲಿ ಈಗಾಗಲೇ ಒಟ್ಟು 3.76 ಲ.ರೂ. ಅಭಿವೃದ್ಧಿ ಕಾಮಗಾರಿ ನಡೆಸಲಾಗಿದ್ದು, ಬಾಕಿ ಉಳಿದಿರುವ ಇನ್ನಷ್ಟು ಜನಪರ ಕಾಮಗಾರಿಗಳನ್ನು ಬೇಡಿಕೆಗನುಸಾರ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವ ಪ್ರಮೋದ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next