ನೀರವ ಮೌನ, ಸದಾ ಬಸ್‌ನಲ್ಲಿ ಬರುವಾಗ ತಂಪಾದ ಗಾಳಿ ನನ್ನ ಮುಂಗುರುಳನ್ನು ಒಮ್ಮೆ ಸೋಕಿ ಹೋಗುವಾಗ ತುಟಿಯ ಅಂಚಿನಲ್ಲಿ ಚಿಕ್ಕ ನಗು ಮೂಡುತ್ತಿದ್ದ ನನ್ನ ಮುಖದಲ್ಲಿ ಅಂದು ಆ ನಗು ಮಾಯವಾಗಿತ್ತು. ಗಾಳಿ ಬಂದು ಮುಂಗುರುಳನ್ನು ತಾಕಿದಾಗ ಕಿರಿಕಿರಿಯ ಅನುಭವ. ಪಕ್ಕದಲ್ಲಿ ಕುಳಿತಿದ್ದ ಗೆಳತಿಗೆ “ಸದಾ ಪಟ ಪಟ ಮಾತಾಡುವ ಇವಳು ಇಂದು ಮೌನ ಮೂರ್ತಿಯಾಗಿದ್ದಾಳಲ್ಲ, ಏಕೆ?’ ಎಂಬ ಪ್ರಶ್ನೆ ಮೂಡಿತ್ತೋ ಏನೋ? ತುಂಬ ದಿನಗಳ ಬಳಿಕ ಮನೆಗೆ ಹೋಗುತ್ತಿದ್ದ ನನಗೆ ಅಂದು ಮೊದಲು ಇರುತ್ತಿದ್ದ ಖುಷಿ ಇರಲಿಲ್ಲ.
ಬಸ್ ಸ್ಟಾಂಡ್‌ನಲ್ಲಿ ಬಸ್ ನಿಂತ ತತ್‌ಕ್ಷಣ ಎದುರಿಗೆ ಕಂಡ ಅಂಗಡಿಯ ಹೆಸರು “ಸಾವಿತ್ರಿ’ ಎಂದಿತ್ತು. ಅದನ್ನು ನೋಡಿದ ಕೂಡಲೆ ಅಮ್ಮನ ನೆನಪಾಯಿತು. ಆಗಿಂದಾಗಲೇ ಬ್ಯಾಗ್ ಅನ್ನು ಕೆಳಗೆ ಇಳಿಸಿ ತೊಡೆಯ ಮೇಲೆ ಇಟ್ಟುಕೊಂಡು ಬಹಳ ದಿನದಿಂದ ಕೂಡಿಟ್ಟ ದುಡ್ಡಿನಲ್ಲಿ ಅಮ್ಮನಿಗೋಸ್ಕರ ಕೊಂಡುಕೊಂಡ “ಸಿಲ್ಕ್ ಸೀರೆ’ ತೆಗೆದು ಒಮ್ಮೆ ಗಟ್ಟಿಯಾಗಿ ಅದನ್ನು ಅಪ್ಪಿಕೊಂಡೆ. ಆ ಕ್ಷಣ ನನಗೇ ಗೊತ್ತಿಲ್ಲದೆ ಕಣ್ಣಲ್ಲಿ ನೀರು ಹರಿಯಲು ಶುರುವಾಯಿತು. ನಾನು ಸಣ್ಣವಳಿದ್ದಾಗಲೇ ಅಪ್ಪ ತೀರಿದ್ದು, ತಮ್ಮ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದು, ಅಮ್ಮ ಕೂಲಿ ಮಾಡಿ ನನ್ನನ್ನು ಸಾಕಿದ್ದು; ಹೀಗೆ ಬಚ್ಚಿಟ್ಟುಕೊಂಡಿದ್ದ ಸಂಗತಿ ಗಳು ನೆನಪಾಗಿ ಮನಸ್ಸಿನ ಬೇಸರ ಇನ್ನೂ ಹೆಚ್ಚಾಗಿತ್ತು. ಅಮ್ಮನಿಗೆ ಒಂದು ಫೋನ್ ಮಾಡುವ ಅನ್ನಿಸಿ ಫೋನ್ ಕೈಗೆತ್ತಿಕೊಂಡೆ.
ಅತ್ತಲಿಂದ ಅಮ್ಮ “ಮಗಳೇ, ಎಲ್ಲಿದ್ದೀಯಾ? ಅಂತು ಐದು ವರ್ಷಗಳ ಅನಂತರ ನಿನ್ನ ನೋಡ್ತೀನಿ. ಇನ್ನು ಎಷ್ಟು ಹೊತ್ತು ಆಗುತ್ತೆ ಮನೆಗೆ ಬರೋಕೆ? ಊರಿ ನವರೆಲ್ಲಾ “ನಿಮ್ಮ ಮಗಳು ಡಾಕ್ಟ್ರರಂತೆ, ಇಲ್ಲೇ ಆಸ್ಪತ್ರೆ ತೆರೀತಾಳಂತೆ, ಅಂಥಾ ಮಗಳನ್ನ ಪಡೆಯೋಕೆ ನೀವು ಪುಣ್ಯ ಮಾಡಿದ್ದೀರಿ ಸಾವಿತ್ರಮ್ಮ ಅಂತ ಹೇಳ್ತಾ ಇದ್ದಾರೆ. ಬೇಗ ಬಾ ಕಂದ. ನಿನ್ನ ನೋಡಿದ ಮರುಕ್ಷಣನೇ ಈ ಮುದುಕಿಗೆ ಸಾವು ಬಂದ್ರು ಚಿಂತೆ ಇಲ್ಲ. ಆ ದೇವರು ನಿನ್ನ ರೂಪದಲ್ಲಿ ನನ್ನ ಜೀವನದಲ್ಲಿ ಬಂದಿದಾನೆ ಕಂದ’ ಎನ್ನುತ್ತಿರುವಾಗಲೇ ನಾನು ಆಯ್ತು ಅಮ್ಮ ಇನ್ನು ಒಂದೂವರೆ ಗಂಟೆಯಲ್ಲೆ ಮನೆಗೆ ಬಂದು ಬಿಡ್ತೀನಿ ಎಂದು ಫೋನ್ ಇಟ್ಟೆ.
ಫೋನ್ ಇಟ್ಟವಳಿಗೆ ಅಮ್ಮನ ಮಾತುಗಳು ಏನೋ ಕೆಡುಕನ್ನು ಬಿಂಬಿಸುವಂತೆ ಅನ್ನಿಸಿತು. ಹೀಗೆ ಯೋಚನೆ ಮಾಡುತ್ತಿರುವಾಗ ಪಿಯುಸಿಯಲ್ಲಿ ಇದ್ದಾಗ ಓದಿದ್ದ ಒಂದು ಕಾದಂಬರಿಯ ಸಾಲು ನೆನಪಾಯಿತು “ಆಪ್ತ ಜೀವಗಳು ನಮ್ಮನ್ನು ಅಗಲುವಾಗ ನಮ್ಮ ಮನಸ್ಸು ಚಿತ್ರಹಿಂಸೆಯನ್ನು ಅನುಭವಿಸುತ್ತದೆ. ಸಾವಿನ ಮನೆಯ ವಿಕಾರ ಮೌನ, ಆಪ್ತರು ಅಗಲುವ ಮುಂಚೆಯೇ ನಮಗೆ ಗೋಚರಿಸುತ್ತದೆ. ಕಣ್ಣರಿಯದಿದ್ದರೂ ಕರುಳರಿಯದೇ? ಆದರೆ ಅದು ಸಾವಿನ ಸೂಚನೆ ಎಂಬುದನ್ನು ಅರಿಯಲಾರದೆ ನಾವು ಒದ್ದಾಡುತ್ತೇವೆ.’ ನನ್ನ ಆ ಸಂಕಟವೂ ಆಪ್ತರ ಸಾವಿನ ಸೂಚನೆಯೇ? ಎಂದು ಒಮ್ಮೆ ಆಲೋಚಿಸುವಾಗ, ಇದೆಲ್ಲಾ ಪುಸ್ತಕದ ಬದನೆಕಾಯಿ ಎಂದು ಮನಸ್ಸಿನ ಯೋಚನೆಯನ್ನು ತಿರುಗಿಸಿ ಬಿಟ್ಟೆ.
ನನ್ನ ಪ್ರಯಾಣಕ್ಕೆ ವಿದಾಯ ಹೇಳುವ ಸಮಯ ಬಂತು, ಬಸ್ಸಿನಿಂದ ಇಳಿದು ಮನೆಯ ದಾರಿಯತ್ತ ಸಾಗಿದೆ. ಮನೆಯ ಬಾಗಿಲು ತಲುಪುತ್ತಿದಂತೆ ಚಿಕ್ಕಮ್ಮ ಅಳುತ್ತಾ ಅಮ್ಮನ ಸಾವಿನ ಸುದ್ದಿ ತಿಳಿಸಿದಳು, ಫೋನ್‌ನಲ್ಲಿ ಮಾತಾಡಿ ಬರುವಾಗ ಅಮ್ಮ ಮಹಡಿಯ ಮೆಟ್ಟಿಲಿಂದ ಜಾರಿ ಬಿದ್ದು ತಲೆಗೆ ತುಂಬ ಪೆಟ್ಟಾಗಿ ತೀರಿ ಹೋದಳು ಎಂದು. ಅಮ್ಮಾ’ ಎಂದು ಕಿರಿಚಿಕೊಂಡವಳೇ ಕಣ್ಣು ತೆರೆದೆ. ಸೂರ್ಯನ ತಿಳಿಯಾದ ಕಿರಣ ಮುಖವನ್ನು ಸ್ಪರ್ಶಿಸುತ್ತಿತ್ತು.
ಬೆಚ್ಚಗಿನ ಚಾದರ ಮೈಯನ್ನು ಆವರಿಸಿತ್ತು, ಕಣ್ಣುಗಳು ಒದ್ದೆಯಾಗಿದ್ದವು, ಮೈ ಬೆವರಿತ್ತು ಎದ್ದು ಕೂತವಳೇ ತತ್‌ಕ್ಷಣ ಹಾಸಿಗೆಯಿಂದ ಎದ್ದು ಅಡುಗೆ ಮನೆಯ ಕಡೆ ಓಡಿದೆ. ಅಮ್ಮ ರೇಡಿಯೋ ನಿನಾದವನ್ನು ಕೇಳುತ್ತಾ ಬಿಸಿ ಬಿಸಿ ತಿಂಡಿ ತಯಾರಿಸುತ್ತಿದ್ದಳು. ಕಣ್ಣುಗಳನ್ನು ಒರೆಸಿಕೊಳ್ಳುತ್ತಾ ಅಮ್ಮನನ್ನು ಬಾಚಿ ತಬ್ಬಿಕೊಂಡೆ. ಅಂದು ನನಗೆ ಅನ್ನಿಸಿತು ಮತ್ತೂಮ್ಮೆ ಆ ನೀರವ ಮೌನ ಇನ್ನೊಂದೂ ಕನಸಲೂ, ನನಸಲೂ ಆವರಿಸದಿರಲೀ ನನ್ನನ್ನು ಎಂದೂ.
ಪದ್ಮರೇಖಾ ಭಟ್, ಎಸ್.ಡಿ.ಎಂ., ಕಾಲೇಜು, ಉಜಿರೆ