Advertisement

ಕಬ್ಬು ಕಟಾವಿಗೆ ಜಿಲ್ಲಾಡಳಿತ ನೂತನ ಕ್ರಮ: ಗುರುಕರ್‌

10:07 AM Mar 19, 2022 | Team Udayavani |

ಕಲಬುರಗಿ: ಮುಂದಿನ ವರ್ಷದಿಂದ ದಿನಾಂಕವಾರು, ಗ್ರಾಮವಾರು ಆಯಾ ದಿನದಂದೇ ಗ್ರಾಮಗಳ ಕಬ್ಬು ಕಟಾವು ಆಗಲು ವ್ಯವಸ್ಥೆಯೊಂದನ್ನು ಜಿಲ್ಲೆಯಲ್ಲಿ ಕಾರ್ಯಾನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಯಶವಂತ ಗುರುಕರ್‌ ತಿಳಿಸಿದರು.

Advertisement

ಜಿಲ್ಲೆಯ ಭೂಸನೂರಿನ ಎನ್‌ಎಸ್‌ ಎಲ್‌ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ರೈತರ ಕಟಾವು ಆಗದೇ ಉಳಿದಿರುವ ಕಬ್ಬನ್ನು ಇವತ್ತಿನಿಂದಲೇ ದಿನಾಂಕವಾರು ಕಟಾವು ಆಗುವ ಗ್ರಾಮಗಳ ಪಟ್ಟಿ ಯೊಂದನ್ನು ಶುಕ್ರವಾರ ಬಿಡುಗಡೆ ಮಾಡಿ, ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬರುವ ಏಪ್ರಿಲ್‌ 10ರ ಒಳಗೆ ಕಟಾವು ಆಗದೇ ಉಳಿದಿರುವ 4239 ಎಕರೆ ಕಬ್ಬನ್ನು ಸಂಪೂರ್ಣ ಕಟಾವು ಮಾಡಲಾಗುವುದು ಎಂದರು.

ಆ್ಯಪ್‌ ಬಿಡುಗಡೆ

ಮುಂದಿನ ವರ್ಷದಿಂದ ಜಿಲ್ಲೆಯ ರೇಣುಕಾ, ಕೆಪಿಆರ್‌ ಹಾಗೂ ಉಗಾರ್‌ ಸಕ್ಕರೆ ಕಾರ್ಖಾನೆಯಿಂದಲೂ ಯಾವ ದಿನಾಂಕದಂದು ಯಾವ ಗ್ರಾಮದ ಕಬ್ಬು ಕಟಾವು ಎನ್ನುವ ಪಟ್ಟಿ ರೂಪಿಸಲಾಗುವುದು. ಇದರಲ್ಲಿ ಬಹಳ ವ್ಯತ್ಯಾಸವಾದರೆ, ರೈತರ ಶೋಷಣೆಯಾದಲ್ಲಿ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಹಿಂದೇಟು ಹಾಕದು ಎಂದು ಎಚ್ಚರಿಕೆ ನೀಡಿದರು.

Advertisement

ಪ್ರಮುಖವಾಗಿ ಕಬ್ಬು ಕಟಾವು ಆಗುವ ಕುರಿತು, ಜತೆಗೆ ಕಬ್ಬು ಕಟಾವು ಆಗದೇ ಇದ್ದಲ್ಲಿ ದೂರು ದಾಖಲಿಸಲು ಅನುಕೂಲವಾಗುವಂತೆ ಆ್ಯಪ್‌ವೊಂದನ್ನು ರೂಪಿಸಲಾಗುವುದು. ಒಟ್ಟಾರೆ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದಾಗಿದೆ ಎಂದು ವಿವರಿಸಿದರು.

ಸರ್ಕಾರಕ್ಕೆ ವರದಿ

ಕಬ್ಬು ಕಟಾವು ಆಗದೇ ಇದ್ದುದರಿಂದ ಜತೆಗೆ ಕಬ್ಬು ಒಣಗುತ್ತಿರುವುದರಿಂದ ಕೆಲವೆಡೆ ಆಕಸ್ಮಿಕವಾಗಿ ಕಬ್ಬಿಗೆ ಬೆಂಕಿ ತಗುಲಿ ನಷ್ಟ ವಾಗಿದೆ. ಇನ್ನು ಕೆಲವೆಡೆ ಕಬ್ಬು ಕಟಾವು ಆಗದೇ ಇರುವುದರಿಂದ ರೈತರು ನೊಂದು ಕಬ್ಬಿಗೆ ಬೆಂಕಿ ಹಚ್ಚಿರುವ ಘಟನೆಗಳು ನಡೆದಿವೆ. ಇವುಗಳ ಕುರಿತು ಸರ್ಕಾರಕ್ಕೆ ವರದಿ ಕಳುಹಿಸಲಾಗುವುದು ಎಂದು ತಿಳಿಸಿದರು.

ಕಬ್ಬು ಪೂರೈಸಿದ ರೈತರಿಗೆ ಹಣ ಪಾವತಿಸಲು ಮೀನಾಮೇಷ ಎಣಿಸುತ್ತಿದ್ದ ಸಕ್ಕರೆ ಕಾರ್ಖಾನೆಗಳಿಗೆ ನೋಟಿಸ್‌ ನೀಡಲಾಗಿತ್ತು. ಶೇ. 43ರಷ್ಟು ಇದ್ದ ಬಿಲ್‌ ಪಾವತಿ ಪ್ರಮಾಣ ಈಗ ಶೇ. 87ರಷ್ಟು ಪ್ರತಿಶತವಾಗಿದೆ ಎಂದು ಹೆಚ್ಚುವರಿ ಜಿಲ್ಲಾಕಾರಿ ಭೀಮಾಶಂಕರ ತೆಗ್ಗೆಳ್ಳಿ ತಿಳಿಸಿದರು.

ಪಿಂಚಣಿಗೆ ಸಹಾಯವಾಣಿ

ನಿವೃತ್ತಿ ನೌಕರರಿಗೆ ಸಕಾಲಕ್ಕೆ ಪಿಂಚಣಿ ದೊರಕಲು ಕ್ರಮ ಕೈಗೊಳ್ಳಲಾಗುತ್ತಿದ್ದು, ದೂರುಗಳನ್ನು ಸ್ವೀಕರಿಸಿ ತಕ್ಷಣ ಸ್ಪಂದಿಸಲು ಸಹಾಯವಾಣಿ ತೆರೆಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಯಶವಂತ ಗುರುಕರ್‌ ತಿಳಿಸಿದರು.

ನಿವೃತ್ತ ನೌಕರರಿಗೆ ಸರಳವಾಗಿ ಪಿಂಚಣಿ ತಲುಪದಿರುವ ಕುರಿತು ನಿವೃತ್ತ ನೌಕರರಿಂದ ಆಕ್ಷೇಪ ವ್ಯಕ್ತವಾಗುತ್ತಿರುವುದನ್ನು ಮನಗಂಡು ಟೋಲ್‌ ಫ್ರೀ ವ್ಯವಸ್ಥೆ ವ್ಯವಸ್ಥೆಯನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲಾಗುವುದು ಎಂದು ಹೇಳಿದರು.

ಕಟಾವಾಗದೇ ಉಳಿದ ಕಬ್ಬಿನ ವಿಸ್ತೀರ್ಣ

ನಿಂಬರ್ಗಾ ವಿಭಾಗದಲ್ಲಿ 550 ಎಕರೆ, ಆಳಂದ ವಿಭಾಗದಲ್ಲಿ 410 ಎಕರೆ, ಕಲಬುರಗಿ ವಿಭಾಗದಲ್ಲಿ 1205 ಎಕರೆ, ಚೌಡಾಪುರ ವಿಭಾಗದಲ್ಲಿ 1458 ಎಕರೆ, ಅಫಜಲಪುರ ವಿಭಾಗದಲ್ಲಿ 184 ಎಕರೆ, ಕರಜಗಿ ವಿಭಾಗದಲ್ಲಿ 130 ಎಕರೆ, ಕಡಗಂಚಿ ವಿಭಾಗದಲ್ಲಿ 302 ಸೇರಿ ಒಟ್ಟು 4239 ಎಕರೆ ಪ್ರದೇಶಗಳಿಂದ ಅಂದಾಜು 1,24,768 ಮೆಟ್ರಿಕ್‌ ಟನ್‌ ಬಾಕಿ ಕಬ್ಬು ಕಟಾವು ಮಾಡಲು ಸಮಯ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ ಗುರುಕರ್‌ ತಿಳಿಸಿದರು.

ಕಬ್ಬಿನ ಬಿಲ್‌ ಪಾವತಿ ವಿವರ

2021-22ನೇ ಸಾಲಿಗೆ ಎನ್‌ಎಸ್‌ಎಲ್‌ ಕಾರ್ಖಾನೆಯು 6,594 ರೈತರಿಂದ 8,27,737 ಮೆಟ್ರಿಕ್‌ ಟನ್‌ ಕಬ್ಬು ಖರೀದಿಸಿ 24,128.53 ಲಕ್ಷ ರೂ. ಮೊತ್ತದ ಪೈಕಿ 19,348.45 ಲಕ್ಷ ರೂ. (ಶೇ.80.18ರಷ್ಟು) ರೈತರಿಗೆ ಪಾವತಿಸಿದ್ದು, 4,780.08 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ. ನಾನು ಅಧಿಕಾರ ವಹಿಸಿದಾಗ ಪಾವತಿ ಪ್ರಮಾಣ ಶೇ.38 ಇತ್ತು, ಇದೀಗ ಅದು 80.18 ತಲುಪಿದೆ ಎಂದರು.

ಅಫಜಲಪುರ ತಾಲೂಕಿನ ಹವಳಗಾದ ರೇಣುಕಾ ಶುಗರ್ ಕಾರ್ಖಾನೆಯು 11,250 ರೈತರಿಂದ 11,73,010 ಮೆಟ್ರಿಕ್‌ ಟನ್‌ ಕಬ್ಬು ಖರೀದಿಸಿ 34,765.67 ಲಕ್ಷ ರೂ. ಮೊತ್ತದ ಪೈಕಿ 30,442.36 ಲಕ್ಷ ರೂ. (ಶೇ.87.56) ಪಾವತಿಸಿದ್ದು, 4,323.31 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ. ಅದೇ ರೀತಿ ಯಡ್ರಾಮಿ ತಾಲೂಕಿನ ಮಳ್ಳಿ ಉಗಾರ್‌ ಶುಗರ್‌ ಕಾರ್ಖಾನೆಯು 4,36,550 ಮೆಟ್ರಿಕ್‌ ಟನ್‌ ಕಬ್ಬು ಖರೀದಿಸಿ 13,573.34 ಲಕ್ಷ ರೂ. ಮೊತ್ತದ ಪೈಕಿ 8,920.463 ಲಕ್ಷ ರೂ. (ಶೇ.65.73) ಪಾವತಿಸಿದ್ದು, 4,651.877 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ.

ಕಬ್ಬು ಕಟಾವು ಆಗದೇ ಹೊಲದಲ್ಲಿ ಒಣಗುತ್ತಿರು ವುದನ್ನು, ರೈತರು ನಿರಾಸೆಯಾಗಿ ಬೆಂಕಿ ಹಚ್ಚುತ್ತಿರುವುದನ್ನು ತಪ್ಪಿಸಲು, ಜತೆಗೆ ಸಕಾಲಕ್ಕೆ ಕ್ರಮಾನುಸಾರ ಕಬ್ಬು ಕಟಾವು ಆಗಲು ಜಿಲ್ಲಾಡಳಿತದಿಂದ ನೂತನ ಕ್ರಮ ಕೈಗೊಳ್ಳಲಾಗುತ್ತಿದೆ. -ಯಶವಂತ ಗುರುಕರ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next