ಕಲಬುರಗಿ: ನೂತನ ಶಿಕ್ಷಣ ನೀತಿ (ಎನ್‌ಇಪಿ) ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಹೊಸ ಆಯಾಮ ಒದಗಿಸಿಕೊಡಲಿದ್ದು, ಹಿಂದಿನ ತಪ್ಪುಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ| ಅನಿಲಕುಮಾರ ಬಿಡವೆ ಹೇಳಿದರು.
ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ವಿದ್ಯಾ ಲಿಬರೇಷನ್ ಥ್ರೋ ಕಲ್ಚರಲ್ ಆಕ್ಷನ್(ವಿಎಲ್‌ಟಿಸಿಎ), ಮೆನ್ ಸೆನ್ ಮೆಟ್ ಈನ್ ಮಿಸ್ಸಿ ಜಂಟಿಯಾಗಿ ಆಯೋಜಿಸಿರುವ “ಶಾಂತಿ ಸ್ಥಾಪನೆಯಲ್ಲಿ ಮಾಧ್ಯಮದ ಪಾತ್ರ’ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೂತನ ಶಿಕ್ಷಣ ನೀತಿ (ಎನ್‌ಇಪಿ) 2020 ಬಹು-ಶಿಸ್ತಿನ ವಿಧಾನ ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಇಷ್ಟದ ವಿಷಯವನ್ನು ಆಯ್ಕೆ ಮಾಡಲು, ಲಭ್ಯವಿರುವ ಅವಕಾಶಗಳು ಮತ್ತು ಪದವಿ ಮಧ್ಯದಲ್ಲಿ ತಮ್ಮ ಆಯ್ಕೆಯ ಐಚ್ಛಿಕ ವಿಷಯವನ್ನುಕಲಿಯುವ ಅವಕಾಶ ಮಾಡಿಕೊಟ್ಟಿದೆ. ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ನಿರ್ದಿಷ್ಟ ಕೋರ್ಸ್‌ಗಾಗಿ ಒಂದು ಶೈಕ್ಷಣಿಕ ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯವನ್ನು ವ್ಯಯಿಸದೇ ಹೊಸ ವಿಷಯಗಳ ಜ್ಞಾನವನ್ನು ಪಡೆಯಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುತ್ತದೆ ಎಂದು ವಿವರಿಸಿದರು.
ಶಿಕ್ಷಣದ ಹಳೆ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಒಂದು ಶೈಕ್ಷಣಿಕ ವರ್ಷದಲ್ಲಿ ವಿವಿಧ ವಿಷಯಗಳ ಅಧ್ಯಯನ ಅವಕಾಶಗಳಿಂದ ವಂಚಿತರಾಗುತ್ತಿದ್ದರು. ಆದರೆ ಎನ್ ಇಪಿ-2020ರ ಅನುಷ್ಠಾನದಿಂದ ವಿದ್ಯಾರ್ಥಿಗಳು ತಮ್ಮ ಇಚ್ಛೆಯ ವಿಷಯಗಳನ್ನು ಶಿಕ್ಷಣದ ಮಧ್ಯದಲ್ಲಿ ಆಯ್ಕೆ ಮಾಡುವ ಅವಕಾಶ ಹೊಂದಿದ್ದಾರೆ ಎಂದು ಹೇಳಿದರು. ಎನ್‌ಇಪಿಯಲ್ಲಿ ಅಳವಡಿಸಲಾಗಿರುವ ಬಹು ಶಿಸ್ತಿನ ವಿಧಾನವು ಶಿಕ್ಷಣದ ರೂಪುರೇಷೆಗಳನ್ನು ಬದಲಾಯಿಸುತ್ತದೆ. ಕೌಶಲ್ಯ ಮತ್ತು ಜ್ಞಾನ ಆಧಾರಿತ ಶಿಕ್ಷಣವು ಹೊಸ ಶಿಕ್ಷಣದ ವ್ಯವಸ್ಥೆಗೆ ಕೈಗನ್ನಡಿಯಾಗಿದೆ.
ಈ ದಿಶೆಯಲ್ಲಿ ಕರ್ನಾಟಕವು ದೇಶದ ಎಲ್ಲ ರಾಜ್ಯಗಳಿಗಿಂತ ಮುಂದೆ ಸಾಗುತ್ತಿದ್ದು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಎನ್‌ಇಪಿ 2020ನ್ನು ಜಾರಿಗೆ ತರುವ ನಿರ್ಧಾರ ತೆಗೆದುಕೊಂಡಿದ್ದು ಕರ್ನಾಟಕದ ವಿದ್ಯಾರ್ಥಿಗಳಿಗೆ ಶಿಕ್ಷಣದ ಹೊಸ ಮಾರ್ಗಗಳನ್ನು ತೆರೆಯುತ್ತಿದೆ ಎಂದರು.
ಶಾಂತಿ ಸ್ಥಾಪನೆಯಲ್ಲಿ ಮಾಧ್ಯಮದ ಪಾತ್ರದ ಕುರಿತು ಮಾತನಾಡಿದ ಡಾ| ಬಿಡವೆ, ಪತ್ರಕರ್ತರು ತಮ್ಮ ಜವಾಬ್ದಾರಿಯುತ ವರದಿಗಾರಿಕೆ ಮೂಲಕ ಶಾಂತಿ ನಿರ್ಮಿಸುವಲ್ಲಿ ಪ್ರಬಲವಾದ ಪಾತ್ರ ವಹಿಸಬಹುದು. ಅಲ್ಲದೇ ಆಗಾಗ್ಗೆ ಸಮಾಜದಲ್ಲಿ ಅಡ್ಡಿ ಮತ್ತು ಅಸಮಾಧಾನಕ್ಕೆಕಾರಣವಾಗುವ ಸಂವೇದನಾಶೀಲತೆಗೆ ಬಲಿಯಾಗುವುದಿಲ್ಲ. ಸಮಾಜದ ವಿವಿಧ ವಿಭಾಗಗಳಿಗೆ ಸುಲಭವಾಗಿ ಪ್ರವೇಶ ಪಡೆಯುವ ಪತ್ರಕರ್ತರು ಸಮಾಜದ ಪ್ರಯೋಜನಕ್ಕಾಗಿ ಸರಿಯಾದ ರೀತಿಯ ಪತ್ರಿಕೋದ್ಯಮ ಅನುಸರಿಸಬೇಕು ಎಂದು ಹೇಳಿದರು.
ವಿವಿ ಸಮ ಕುಲಪತಿ ಪ್ರೊ| ವಿ.ಡಿ. ಮೈತ್ರಿ ಉದ್ಘಾಟಿಸಿದರು. ಪ್ರೊ| ಎನ್.ಎಸ್. ಪಾಟೀಲ, ಡಾ| ಎಲೆನೋರೆ ಗೀತಮಾಲಾ, ಡಾ| ಸಾರಿಕಾದೇವಿ ಕಾಳಗಿ ಹಾಗೂ ಇತರರು ಇದ್ದರು. ಸಂಪನ್ಮೂಲ ವ್ಯಕ್ತಿಗಳಾದ ಡಾ|ಹರ್ಷವರ್ಧನ ಶೀಲವಂತ, ಜಿ.ಎನ್. ರಾಜಶೇಖರ ನಾಯ್ಡು ಉಪನ್ಯಾಸ ನೀಡಿದರು.