Advertisement

Mangaluru: ಜಾಹೀರಾತು ಫಲಕ ನಿರ್ವಹಣೆಗೆ ಹೊಸ ಆ್ಯಪ್‌

05:22 PM Aug 06, 2024 | Team Udayavani |

ಮಹಾನಗರ: ಸರಕಾರಿ ಮತ್ತು ಖಾಸಗಿ ಜಾಗದಲ್ಲಿ ಜಾಹೀರಾತು ಫಲಕ ಅಳವಡಿಸಲು, ನವೀಕರಿಸಲು, ತೆರವುಗೊಳಿಸಲು ಮತ್ತು ಶುಲ್ಕ ಪಾವತಿಗೆ ಇದೀಗ ಹೊಸ ಆ್ಯಪ್‌ ಅಭಿವೃದ್ಧಿಪಡಿಸಲು ಮಹಾನಗರ ಪಾಲಿಕೆ ಮುಂದಾಗಿದೆ.

Advertisement

ಮಂಗಳೂರು ಮಹಾನಗರ ಪಾಲಿಕೆ ಆನ್‌ಲೈನ್‌ ವ್ಯವಸ್ಥೆಗೆ ಒಗ್ಗಿಕೊಳ್ಳುತ್ತಿದ್ದು, ಈಗಾಗಲೇ ಹಲವು ಸೇವೆಗಳು ಆನ್‌ ಲೈನ್‌ ಇದ್ದು, ಜಾಹೀರಾತು ಫಲಕ ನಿರ್ವಹಣೆಯೂ ಇದೇ ವ್ಯವಸ್ಥೆಗೆ ಸೇರಿಸಲಾಗುತ್ತಿದೆ. ಈ ಆ್ಯಪ್‌ ಮೂಲಕ ಅರ್ಜಿದಾರರು ಜಾಹೀರಾತು ಫಲಕ ಅಳವಡಿಸಲು ನಿಗದಿ ಪಡಿಸಿದ ಸ್ಥಳಗಳ ಮಾಹಿತಿ (ಜಿಯೋ ಟ್ಯಾಗಿಂಗ್‌ ಮೂಲಕ) ಪಡೆಯಲು ಅವಕಾಶ ಇರುತ್ತದೆ. ಪಾಲಿಕೆ ಅಧಿಕಾರಿಗಳಿಂದ ಸ್ಥಳ ಪರಿಶೀಲಿಸಲು, ಜಾಹೀರಾತು ಫಲಕಗಳ ನವೀಕರಿಸಲು ಕೂಡ ಈ ತಂತ್ರಾಂಶದ ಮೂಲಕ ಅವಕಾಶ ಮಾಡಿಕೊಡಲಾಗುತ್ತದೆ. ಈಆ್ಯಪ್‌ ಮೂಲಕ ಅರ್ಜಿದಾರರು ಪರವಾನಿಗೆ ಶುಲ್ಕ ಆನ್‌ಲೈನ್‌ ಮೂಲಕ ಪಾವತಿಗೆ ಬ್ಯಾಂಕ್‌ನೊಂದಿಗೆ ಇಂಟರ್‌ಗ್ರೇಶನ್‌ ಮಾಡಬೇಕಾಗಿದೆ. ತನ್ನ ಜಾಹೀರಾತು ಫಲಕದ ಪರವಾನಿಗೆಯ ಪ್ರಸ್ತುತ ಸ್ಥಿತಿ (ಟ್ರ್ಯಾಕ್‌ ಸ್ಟೇಟಸ್‌) ನೋಡಲು ಈ ತಂತ್ರಾಂಶದಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ.

ಪಾಲಿಕೆ ವ್ಯಾಪ್ತಿಯ ಅಧಿಕೃತ, ಅನಧಿಕೃತ ಜಾಹೀರಾತು ಫಲಕಗಳನ್ನು ಮತ್ತು ನವೀಕರಿಸಬೇಕಾದ ಫಲಕಗಳ ವರದಿಯನ್ನು ಅಧಿಕಾರಿಗಳಿಗೆ ಸುಲಭವಾಗಿ ಪಡೆಯಲು ಸಹಕಾರಿ.

ಹಲವು ಸೇವೆಗಳಿಗೆ ಆನ್‌ಲೈನ್‌ ಟಚ್‌

ಪಾಲಿಕೆಯ ಹಲವು ಸೇವೆಗಳು ಈಗಾಗಲೇ ಆನ್‌ಲೈನ್‌ ಆಗಿದ್ದು, ನೀರಿನ ಬಿಲ್‌ ಪಾವತಿ, ಆಸ್ತಿ ತೆರಿಗೆ, ಉದ್ದಿಮೆ ಪರವಾನಿಗೆಯನ್ನು ಆನ್‌ಲೈನ್‌ ಮೂಲಕ ಬಳಸಿಕೊಳ್ಳಬಹುದು. ಅದೇ ರೀತಿ, ಕುದ್ಮುಲ್ ರಂಗರಾವ್‌ ಪುರಭವನ, ಡಾ| ಬಿ.ಆರ್‌. ಅಂಬೇಡ್ಕರ್‌ ಭವನ ಬುಕ್ಕಿಂಗ್‌ ಮಾಡಲೂ ಆನ್‌ಲೈನ್‌ ತಂತ್ರಾಂಶ ಬರಲಿದೆ. ಸ್ಮಾರ್ಟ್‌ ಸಿಟಿ ಯೋಜನೆಯ ಮೂಲಕ “ಒನ್‌ ಟಚ್‌ ಮಂಗಳೂರು’ ಎಂಬ ಹೊಸ ಆ್ಯಪ್‌ ರೂಪುಗೊಂಡಿದ್ದು, ಸದ್ಯ ಚಾಲ್ತಿಯಲ್ಲಿದೆ. ಇದರಲ್ಲಿಯೂ ಹಲವು ಸೇವೆಗಳನ್ನು ಸೇರ್ಪಡೆ ಮಾಡಲಾಗಿದೆ. ಸ್ಮಾರ್ಟ್‌ಸಿಟಿ ಕಮಾಂಡ್‌ ಕಂಟ್ರೋಲ್‌ ಸೆಂಟರ್‌ನಿಂದ ಇದನ್ನು ನಿಗಾ ವಹಿಸಲಾಗುತ್ತಿದೆ.

Advertisement

ಜನಸ್ನೇಹಿ ಆ್ಯಪ್‌

ನಗರದಲ್ಲಿ ಅನಧಿಕೃತ ಜಾಹೀರಾತುಗಳು, ಅಪಾಯಕಾರಿ ಜಾಹೀರಾತುಗಳು, ಫುಟ್‌ಪಾತ್‌ಗಳಲ್ಲಿ ಅಳವಡಿಸುವ ಜಾಹೀರಾತುಗಳು ಸಹಿತ ಜಾಹೀರಾತು ಫಲಕಗಳಿಂದ ಜನರಿಗೆ ಆಗುವ ತೊಂದರೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಈ ಆ್ಯಪ್‌ನಲ್ಲಿ ಪ್ರತ್ಯೇಕ ವಿಭಾಗ ರೂಪಿಸಲಾಗುವುದು. ಈ ಮೂಲಕ ಜನಸ್ನೇಹಿ ಆ್ಯಪ್‌ ರೂಪಿಸಲು ಪಾಲಿಕೆ ಮುಂದಾಗಿದೆ’ ಎನ್ನುತ್ತಾರೆ ಪಾಲಿಕೆ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲು ಸ್ಥಾಯೀ ಸಮಿತಿ ಅಧ್ಯಕ್ಷ ವರುಣ್‌ ಚೌಟ.

ತಿಂಗಳೊಳಗೆ ಜಾರಿಗೆ

ನಗರದಲ್ಲಿ ಜಾಹೀರಾತು ಫಲಕ ಅಳವಡಿಸಲು, ನವೀಕರಣಕ್ಕೆ ಮತ್ತು ತೆರವುಗೊಳಿಸಲು, ಶುಲ್ಕ ಪಾವತಿಗೆ ಆನ್‌ಲೈನ್‌ ವ್ಯವಸ್ಥೆ ಜಾರಿಗೆ ಪಾಲಿಕೆ ಮುಂದಾಗಿದೆ. ಕೆಲವು ಕಡೆ ಪಾಲಿಕೆಯಿಂದ ಪಡೆದ ಪರವಾನಿಗೆಯ ರೀತಿಯೇ ಜಾಹೀರಾತು ಅಳವಡಿಸುವುದಿಲ್ಲ. ಅವಧಿ ಮುಗಿದ ಜಾಹೀರಾತು ಫಲಕವೂ ನಗರದಲ್ಲಿದೆ. ಇವೆಲ್ಲದರ ಮೇಲೆ ನಿಗಾ ವಹಿಸಲು ತಂತ್ರಾಂಶದಿಂದ ಸಾಧ್ಯವಿದೆ. ಇನ್ನೇನು ತಿಂಗಳೊಳಗೆ ಆನ್‌ಲೈನ್‌ ತಂತ್ರಾಂಶ ಜಾರಿಗೆ ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.

– ಸುಧೀರ್‌ ಶೆಟ್ಟಿ ಕಣ್ಣೂರು, ಮೇಯರ್‌

‘ಸರ್ವರ್‌ ಸಮಸ್ಯೆ’ಯೇ ಪಾಲಿಕೆಗೆ ಸವಾಲು

ಮಂಗಳೂರು ಪಾಲಿಕೆಯಿಂದ ಹಲವು ಆನ್‌ಲೈನ್‌ ಸೇವೆ ಇದ್ದರೂ “ಸರ್ವರ್‌ ಸಮಸ್ಯೆ’ಯೇ ಪಾಲಿಕೆಗೆ ಸವಾಲಾಗಿ ಪರಿಣಮಿಸುತ್ತಿದೆ. ಇ-ಖಾತೆ ಪಡೆಯಲು ಕಳೆದ ಅನೇಕ ತಿಂಗಳಿನಿಂದ ಆಗಾಗ್ಗೆ ಸಮಸ್ಯೆ ಬರುತ್ತಿದೆ. ಇನ್ನುಳಿದ ಕೆಲವು ಸೇವೆಯೂ ಸರ್ವರ್‌ ಕಾರಣದಿಂದ ವ್ಯತ್ಯಯಗೊಳ್ಳುತ್ತಿದೆ. ಆನ್‌ಲೈನ್‌ ವ್ಯವಸ್ಥೆಯ ಆರಂಭ ಒಳ್ಳೆಯ ಉದ್ದೇಶವಾದರೂ ತಾಂತ್ರಿಕ ಸಮಸ್ಯೆ ಪರಿಹಾರಕ್ಕೆ ಈಗಲೇ ಯೋಜನೆ ರೂಪಿಸಬೇಕಿದೆ ಎನ್ನುತ್ತಾರೆ ಸಾರ್ವಜನಿಕರು.

– ನವೀನ್‌ ಭಟ್‌ ಇಳಂತಿಲ

 

Advertisement

Udayavani is now on Telegram. Click here to join our channel and stay updated with the latest news.

Next