ವಿಜಯಪುರ: ಬಿಜೆಪಿ ರಾಜ್ಯ-ಕೇಂದ್ರ ಸರ್ಕಾರಗಳು ರೈತ ಹಾಗೂ ಜನ ವಿರೋಧಿ ನೀತಿ ಅನುಸರಿಸಲು ಮುಂದಾಗಿವೆ. ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆ ಸೇರಿ ಪ್ರಮುಖ ಮೂರು ಕಾಯ್ದೆಗಳನ್ನು ತಿದ್ದುಪಡಿ ಹಾಗೂ ರಾಜ್ಯ ಸರ್ಕಾರ ಬಂಡವಾಳಶಾಹಿಗಳು ಭೂಮಿ ಕಬಳಿಸುವ ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೆ ಮುಂದಾಗಿದೆ. ಇದನ್ನು ವಿರೋಧಿ ಸಿ ಜೂ. 27ರಿಂದ ದೇಶದಲ್ಲಿ ಒಂದು ವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದರು.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬಂಡವಾಳಶಾಹಿಗಳು ಕೃಷಿಭೂಮಿ ಹೊಂದುವುದಕ್ಕೆ ಮುಕ್ತ ಅವಕಾಶ ಕಲ್ಪಿಸಲು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಲು ಮುಂದಾಗಿರುವ ಕ್ರಮ ರೈತದ್ರೋಹಿ, ಕೃಷಿ ವಿರೋಧಿ ನಿರ್ಧಾರ. ಭವಿಷ್ಯದಲ್ಲಿ ಕೃಷಿ ಮೇಲೆ ಮಾರಕ ಪರಿಣಾಮ ಬೀರುವ ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.
ರಾಜ್ಯ ಗ್ರಾಮೀಣ ಬದುಕನ್ನು ಸ್ಮಶಾನ ಮಾಡುವ ಹುನ್ನಾರ ಇದರಲ್ಲಿ ಅಡಗಿದೆ. ಸಣ್ಣ ಹಿಡುವಳಿದಾರರು, ಗೇಣಿದಾರರು, ಕೃಷಿಕೂಲಿ ಕಾರ್ಮಿಕರು, ಕಸಬುದಾರರು ಕೃಷಿ ಅವಲಂಬಿತರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸರ್ಕಾರ ಹೊಸ ನಿರ್ಧಾರದ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಮಾರಕವಾಗಿದೆ ಎಂದು ಹರಿಹಾಯ್ದರು.
ಸಿದ್ದರಾಮಯ್ಯ ಸರ್ಕಾರ ಕೃಷಿಯೇತರ ವಾರ್ಷಿಕ 20 ಲಕ್ಷ ರೂ. ಆದಾಯ ಹೊಂದಿರುವ ಯಾರಾದರೂ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡಿರುವುದು ರಾಜ್ಯದ ಕೃಷಿ ವ್ಯವಸ್ಥೆಯನ್ನೇ ದುರ್ಬಲಗೊಳಿಸಿತ್ತು. ಈಗ ಬಿಜೆಪಿ ಸರ್ಕಾರ ಈ ಕಲಂ ಕಿತ್ತು ಹಾಕುವ ಮೂಲಕ ರಾಜ್ಯದ ಕೃಷಿ ವ್ಯವಸ್ಥೆಗೆ ಮರಣ ಶಾಸನ ಬರೆದಿದೆ. ಭವಿಷ್ಯದಲ್ಲಿ ಕೃಷಿ ಉತ್ಪನ್ನಗಳ ಮೇಲೆ ಗಂಭಿರ ಪರಿಣಾಮ ಬೀರಲಿದ್ದು ಅನ್ನದಾತರೊಂದಿಗೆ ಜನ ಸಾಮಾನ್ಯರೂ ಇದರ ಪರಿಣಾಮ ಎದುರಿಸಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದ ಕಥೆ ಹೀಗಾದರೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಥೆ ಮತ್ತೂಂದು ರೀತಿಯದು. ಮೋದಿ ಸರ್ಕಾರ ಕೂಡ ರೈತರು ಹಾಗೂ ಕೃಷಿ ಆಧಾರಿತ ವ್ಯವಸ್ಥೆಯನ್ನೇ ನಂಬಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ಮಾಡಿದ್ದು ಅಗತ್ಯ ಸೇವಾ ನಿರ್ವಹಣೆ ಕಾಯ್ದೆ, ಗುತ್ತಿಗೆ ಬೇಸಾಯಕ್ಕೆ ಅವಕಾಶ ಸೇರಿದಂತೆ ಈ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಜಾರಿಗೊಳಿಸಿದೆ. ಇದರೊಂದಿಗೆ ರೈತ ವಿರೋಧಿ ನೀತಿಗಳನ್ನು ಜಾರಿಗೆ ತಂದಿವೆ ಎಂದು ಟೀಕಾ ಪ್ರಹಾರ ನಡೆಸಿದರು.
ಜಿಲ್ಲೆಗೆ ಮರಳಿರುವ ವಲಸೆ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸಿದ್ದಕ್ಕೆ ಎರಡು ತಿಂಗಳಾದರೂ ಹಣ ಪಾವತಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಭೀಮಶಿ ಕಲಾದಗಿ, ಅಣ್ಣಾರಾಯ ಈಳಿಗೇರ ಇದ್ದರು.