ಮಂಗಳೂರು: ಮಹಿಳೆಯೊಬ್ಬರು ಹತ್ತು ತಿಂಗಳ ಪುತ್ರಿಗೆ ನಿದ್ದೆ ಮಾತ್ರೆ ನೀಡಿ ಕೊಂದು ಬಳಿಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಗರದ ಶಕ್ತಿನಗರದಲ್ಲಿ ನಡೆದಿದೆ. ಮಹಿಳೆ ತನ್ನ ಪುತ್ರ ಮತ್ತು ತಾಯಿಗೂ ಮಾತ್ರೆ ನೀಡಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಕ್ತಿನಗರದ ಕೆ.ಎಚ್.ಬಿ. ಕಾಲನಿಯ ಪ್ರಮೀಳಾ (38) ಕೃತ್ಯ ಎಸಗಿದವರು.ಆಕೆಯ ತಾಯಿ ಶಶಿಕಲಾ (60) ಮತ್ತು ಪುತ್ರ ಆಶಿಸ್ (15) ಪ್ರಾಣಾಪಾಯದಿಂದ ಪಾರಾದವರು. ಮನೆಯ ಯಜಮಾನ, ಪ್ರಮೀಳಾ ಅವರ ಪತಿ ರವಿ ಶೆಟ್ಟಿ ಕೊಟ್ಟಾರದ ಗ್ಯಾರೇಜೊಂದರಲ್ಲಿ ಕೆಲಸ ಮಾಡುತ್ತಿದ್ದು, ಶನಿವಾರವೂ ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿ ಪತ್ನಿ ಆಕೆಯ ತಾಯಿ, ಪುತ್ರ ಆಶಿಸ್ ಮತ್ತು 10 ತಿಂಗಳ ಪುತ್ರಿ ಐಶಾನಿ ಮಾತ್ರ ಇದ್ದರು.
11 ಗಂಟೆಯ ಚಹಾದೊಂದಿಗೆ ಪ್ರಮೀಳಾ ಮನೆಯಲ್ಲಿದ್ದ ಎಲ್ಲರಿಗೂ ನಿದ್ರೆ ಮಾತ್ರೆ ನೀಡಿದ್ದರು. ಅವರೆಲ್ಲರೂ ನಿದ್ರೆಗೆ ಜಾರಿದಾಗ ಮಾಳಿಗೆಯ ಕೊಠಡಿಗೆ ತೆರಳಿ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾರೆ. ಮಾತ್ರೆಯ ಪ್ರಭಾವ ಕಡಿಮೆಯಾದ ಕಾರಣ ಸಂಜೆ 5ರ ಸುಮಾರಿಗೆ ಶಶಿಕಲಾ ಅವರಿಗೆ ಎಚ್ಚರವಾಯಿತು. ಚಹಾ ಮಾಡಿ ಪುತ್ರಿ ಪ್ರಮೀಳಾಳನ್ನು ಕರೆಯಲು ಮಾಳಿಗೆಗೆ ತೆರಳಿದಾಗ ಆಕೆ ಆತ್ಮಹತ್ಯೆಗೈದಿರುವುದು ಬೆಳಕಿಗೆ ಬಂತು. ಕೂಡಲೇ ಪರಿಸರದ ಜನರಿಗೆ, ಪೊಲೀಸರಿಗೆ ಮಾಹಿತಿ ನೀಡಲಾಯಿತು. ಹತ್ತು ತಿಂಗಳ ಬಾಲೆ ಐಶಾನಿ ನಿದ್ದೆ ಮಾತ್ರೆಯ ಅಮಲು ಏರಿ ಸಾವನ್ನಪ್ಪಿರು ವುದು ಬಳಿಕ ಗೊತ್ತಾಗಿದೆ. ಪುತ್ರ ಆಶಿಸ್ ನಿದ್ದೆಯ ಅಮಲಿನಲ್ಲಿದ್ದರೂ ಬಳಿಕ ಆತನಿಗೆ ಎಚ್ಚರವಾಗಿದೆ.
ಮಹಿಳೆಯ ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಆತ್ಮಹತ್ಯೆ ಮಾಡಿಕೊಂಡಿರುವ ಪ್ರಮೀಳಾ ಡೆತ್‌ನೋಟ್ ಬರೆದಿಟ್ಟಿದ್ದು, “ನನಗೆ ಯಾರೂ ಯಾವುದೇ ರೀತಿಯ ಅನ್ಯಾಯ ಮಾಡಿಲ್ಲ. ಯಾರ ಮೇಲೂ ದ್ವೇಷವಿಲ್ಲ. ಸ್ವ ಇಚ್ಛೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಬರೆಯಲಾಗಿದೆ. ಪತ್ರವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಮೀಳಾ ಅವರ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಗೆ ಹಾಗೂ ಮಗುವಿನ ದೇಹವನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಕಂಕನಾಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.