Advertisement
2016ರಲ್ಲಿ ನಡೆದಿದ್ದ ಜೀರ್ಣೋದ್ಧಾರ ಕಾರ್ಯ: ಅತ್ಯಂತ ಜೀರ್ಣಾವಸ್ಥೆಯಲ್ಲಿದ್ದ ಪಣಿಯೂರು ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನವನ್ನು 2016ರಲ್ಲಿ ಶಿಲಾಮಯವನ್ನಾಗಿ ಸಮಗ್ರ ಜೀರ್ಣೋದ್ಧಾರಗೊಳಿಸಲಾಗಿತ್ತು. ದೈವಸ್ಥಾನದಲ್ಲಿ ಮಂಗಳವಾರ ರಾತ್ರಿ ವಾರ್ಷಿಕ ನೇಮೋತ್ಸವ ನಡೆಯುತ್ತಿದ್ದ ಸಂದರ್ಭ ಗುಡುಗು, ಮಿಂಚು ಸಹಿತ ಗಾಳಿ, ಮಳೆ ಸುರಿಯಲಾರಂಭಿಸಿತ್ತು. ಭಾರೀ ಮಳೆಯ ಕಾರಣದಿಂದಾಗಿ ದೈವದ ನೇಮವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿದ್ದು, ಮತ್ತೆ ಮುಂದುವರಿಸಲು ಯೋಚಿಸಲಾಗಿತ್ತು.
ಒಂದೂವರೆ ಗಂಟೆಯ ಪ್ರಯತ್ನದ ಬಳಿಕ ರಕ್ಷಣೆ: ಈ ಸಂದರ್ಭ ಮಳೆಗಾಗಿ ರಕ್ಷಣೆ ಪಡೆಯಲು ಅಡುಗೆ ಕೋಣೆಯ ಬಳಿ ನಿಂತಿದ್ದ ಜಾರಂದಾಯ ದೈವದ ನೇಮ ವೀಕ್ಷಿಸಲು ಬಂದಿದ್ದ ಹೆಜಮಾಡಿ ನಿವಾಸಿ ವಿಶ್ವನಾಥ್ (46) ಮರದಡಿಯಲ್ಲಿ ಸಿಲುಕಿ ಗಾಯಗೊಂಡಿದ್ದಾರೆ. ಭಾರೀ ಮಳೆ ಮತ್ತು ಗುಡುಗಿನ ನಡುವೆಯೇ ಸುಮಾರು ಒಂದೂವರೆ ಗಂಟೆಗಳ ಕಾಲ ಮರದಡಿಯಲ್ಲಿ ಸಿಲುಕಿ ಜೀವ ಭಯದಿಂದ ಒದ್ದಾಡುತ್ತಿದ್ದ ವಿಶ್ವನಾಥ್ ಅವರನ್ನು ಜಾರಂದಾಯ ದೈವದ ಪ್ರೇರಣೆಯಂತೆ ನೆರೆದಿದ್ದ ಯುವಕರು ಸತತ ಪ್ರಯತ್ನ ನಡೆಸಿ ಮರದಡಿಯಿಂದ ಎತ್ತಿ ರಕ್ಷಿಸಿದ್ದಾರೆ. ಬಳಿಕ 108 ಅಂಬುಲೆನ್ಸ್ ಮೂಲಕ ಉಡುಪಿಗೆ ಕರೆದೊಯ್ದು, ನಂತರ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.
Related Articles
Advertisement
ಜಾರಂದಾಯ ದೈವವೇ ಜನರ ಪ್ರಾಣ ರಕ್ಷಿಸಿತು!: ರಕ್ಷಣೆ ಪಡೆಯಲು ಓಡಿದವರ ಪೈಕಿ ಮಕ್ಕಳು ಮತ್ತು ಹಿರಿಯರು ಪಟ್ಟದ ಕುದುರೆ ಕೊಠಡಿ, ನೇಮ ಕಟ್ಟಿದವರು ಬಂಡಿ ಕುದುರೆ ಕೊಠಡಿ ಹಾಗೂ ದೈವದ ಪಾತ್ರಿಗಳು ಮತ್ತು ಚಾಕರಿ ವರ್ಗದವರು ನೈವಬೇದ್ಯ ಕೋಣೆಯಲ್ಲಿ ಆಶ್ರಯ ಪಡೆದಿದ್ದರು. ಬಂಡಿ ಕುದುರೆ ಕೊಠಡಿಗೆ ತಾಗಿಕೊಂಡೇ ಇರುವ ಪಟ್ಟದ ಕುದುರೆ ಮತ್ತು ನೈವೇದ್ಯ ಕೋಣೆಯನ್ನು ಸವರಿಕೊಂಡು ಬೃಹತ್ ಮರ ಉರುಳಿ ಬಿದ್ದಿತ್ತು. ಮರ ಬೀಳುವಾಗ ಒಂದಿಂಚು ಆಚೀಚೆಯಾಗಿದ್ದರೂ ಕನಿಷ್ಟ 30 – 40 ಮಂದಿ ಸಾವು ನೋವಿಗೆ ಗುರಿಯಾಗುವ ಸಾಧ್ಯತೆಗಳಿದ್ದವು. ಆದರೆ ಸ್ಥಳದಲ್ಲಿದ್ದ ಎಲ್ಲರೂ ಯಾವುದೇ ತೊಂದರೆಗಳಿಲ್ಲದೇ ಪ್ರಾಣಾಪಾಯದಿಂದ ಪಾರಾಗಿದ್ದು, ಇದಕ್ಕೆ ಜಾರಂದಾಯ ದೈವದ ಕೃಪೆಯೇ ಕಾರಣ ಎಂದು ಮಧ್ಯಸ್ಥರಾಗಿ ಆಗಮಿಸಿದ್ದ ವಿಶುಕುಮಾರ್ ಶೆಟ್ಟಿ ಪಡುಬಿದ್ರಿ ಹೇಳಿದ್ದಾರೆ. ಬೃಹತ್ ಮರವನ್ನು ದೈವವೇ ಉರುಳಿಸಿತೇ? : ಪಣಿಯೂರು ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನವು ಅತ್ಯಂತ ಕಾರಣಿಕ ಕ್ಷೇತ್ರವಾಗಿದ್ದು, ಇಲ್ಲಿ 2016ರಲ್ಲಿ ಸರ್ವರ ಸಹಕಾರದೊಂದಿಗೆ ಸಮಗ್ರ ಜೀರ್ಣೋದ್ಧಾರ ಕಾರ್ಯವನ್ನು ನಡೆಸಲಾಗಿತ್ತು. ಜೀರ್ಣೋದ್ಧಾರದ ಸಂದರ್ಭ ಹಾಲೆ ಮರವನ್ನು ಕಡಿಯುವ ಪ್ರಯತ್ನ ಮಾಡಲಾಗಿತ್ತಾದರೂ ದೈವದ ಅಭಯ ಮತ್ತು ಭಕ್ತರ ಅಪೇಕ್ಷೆಯಂತೆ ಮರವನ್ನು ಹಾಗೆಯೇ ಉಳಿಸಲಾಗಿತ್ತು. ಆದರೂ ಕೂಡಾ ಮರ ಬಾಗಿದ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜನರನ್ನು ಭಯಭೀತರಾಗುವಂತೆ ಮಾಡಿತ್ತು. ಆದರೆ ಮಂಗಳವಾರ ರಾತ್ರಿ ಮರವನ್ನು ಜಾರಂದಾಯ ದೈವವೇ ತನಗೆ ಬೇಕಾದ ರೀತಿಯಲ್ಲಿ ಯಾವುದೇ ಸಾವು ನೋವಿಗೆ ಕಾರಣವಿಲ್ಲದೇ ಉರುಳಿಸಿರುವುದು ಪವಾಡವೇ ಸರಿ ಎಂದು ನಾಂಜಾರು ಸಾನದಮನೆ ಅಶೋಕ್ ಪೂಜಾರಿ ಹೇಳಿದ್ದಾರೆ.
ಎಲ್ಲರ ಸಹಕಾರದೊಂದಿಗೆ ಜೀರ್ಣೋದ್ಧಾರಕ್ಕೆ ಚಿಂತನೆ: ನಾಂಜಾರು ಜಾರಂದಾಯ ದೈವಸ್ಥಾನಕ್ಕೆ ಮರ ಬಿದ್ದು ಸುಮಾರು 30 ರಿಂದ 40 ಲಕ್ಷ ರೂ. ನಷ್ಟ ಉಂಟಾಗಿದ್ದು, ಶಿಲಾಮಯ ದೈವಾಲಯ ಮತ್ತು ಹಿತ್ತಾಳೆ ಮಾಡಿಗೂ ಸಂಪೂರ್ಣ ಹಾನಿಯುಂಟಾಗಿದೆ. ಹಾನಿಯ ಬಳಿಕ ದೈವದ ಪ್ರೇರಣೆಯಂತೆ ನೇಮದ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ. ಮುಂದೆ ದೈವಸ್ಥಾನಕ್ಕೆ ಸಂಬಂಧ ಪಟ್ಟ ಗುತ್ತಿನ ಪ್ರಮುಖರು, ಗ್ರಾಮಸ್ಥರು, ಸ್ಥಳವಂದಿಗರು, ನಾಂಜಾರು ಕುಟುಂಬಸ್ಥರು ಮತ್ತು ನಡಿಮನೆ ಕುಟುಂಬಸ್ಥರನ್ನು ಸೇರಿಸಿಕೊಂಡು ಕ್ಷೇತ್ರದಲ್ಲಿ ಅಷ್ಟಮಂಗಳ ಪ್ರಶ್ನೆಯನ್ನಿರಿಸಿ, ಆ ಪ್ರಶ್ನಾ ಚಿಂತನೆಯಲ್ಲಿ ತೋರಿ ಬಂದಂತೆ ಮುಂದಿನ ಕಾರ್ಯಗಳನ್ನು ನಡೆಸಲಾಗುವುದು ಎಂದು ಗುತ್ತಿನಾರ್ ಯೋಗೀಶ್ ಶೆಟ್ಟಿ ಪಣಿಯೂರುಗುತ್ತು ತಿಳಿಸಿದ್ದಾರೆ.