Advertisement
ಬಾಲ್ಯದಲ್ಲಿರುವ ನಮ್ಮ ಅರೆ ನಗರ ಮತ್ತು ಪಟ್ಟಣಗಳು ತಾರುಣ್ಯಕ್ಕೆ ಬರುವಾಗ ಹೇಗಿರಬೇಕು? ಅಭಿವೃದ್ಧಿಯ ಬಾಲ್ಯಾವಸ್ಥೆಯಲ್ಲಿರುವ ಎಲ್ಲ ನಮ್ಮ ಅರೆನಗರ ಪ್ರದೇಶಗಳನ್ನು ಕಂಡಾಗ ಮನಸ್ಸಿನಲ್ಲಿ ಮೂಡಿಬರುವ ಪ್ರಶ್ನೆಯಿದು. ಏಕೆಂದರೆ, ಮಹಾನಗರ ಭಾರತ ಎನ್ನುವುದಕ್ಕಿಂತ ಅರೆನಗರ (ರುರ್ಬನ್) ಭಾರತವೇ ಹೆಚ್ಚು ವೇಗದಲ್ಲಿ ಬೆಳೆಯುವ ಲಕ್ಷಣಗಳು ಗೋಚರಿಸುತ್ತಿವೆ. ಬಹುರಾಷ್ಟ್ರೀಯ ಕಂಪೆನಿಗಳೂ ಕಣ್ಣಿಟ್ಟಿರುವುದು ಮಹಾನಗರ ಭಾರತದ ಮೇಲಲ್ಲ ; ಅದರ ಬದಲಾಗಿ ಅರೆನಗರ-ಪಟ್ಟಣ ಭಾರತದ ಮೇಲೆ ಎಂಬುದು ಗುಟ್ಟಾಗೇನೂ ಉಳಿದಿಲ್ಲ.
Related Articles
Advertisement
ಯಾವುದನ್ನು ಅನುಸರಿಸಬೇಕು?ಈ ಪ್ರಶ್ನೆಯನ್ನೂ ನಾವು ಕೇಳಿಕೊಳ್ಳಬೇಕಾದ ಹೊತ್ತು. ಅರೆ ನಗರಗಳು ಉಜ್ವಲ ಭವಿಷ್ಯದತ್ತ ಸಾಗುವಾಗ ಮಾದರಿಯಾಗಿ ಯಾರನ್ನು ಅನುಸರಿಸಬೇಕು? ನಮ್ಮ ಮಹಾನಗರಗಳನ್ನೇ? ಹೌದಾದರೆ ವಿಚಿತ್ರ ಎನ್ನಿಸಬಹುದು. ವಾಸ್ತವವಾಗಿ ಖಂಡಿತಾ ಮಹಾನಗರಗಳಲ್ಲಿನ ಒಳ್ಳೆಯ ಗುಣಗಳ ನ್ನಷ್ಟನ್ನೇ ಹೆಕ್ಕಿಕೊಂಡು, ಅಲ್ಲಾಗಿರುವ ತಪ್ಪುಗಳನ್ನು ಮರುಕಳಿಸದೇ ಸಾಗುವ ಗುಣವನ್ನು ರೂಢಿಸಿ ಕೊಳ್ಳಬೇಕು. ಅದಾಗುತ್ತಿಲ್ಲ ಎನ್ನುವ ಬೇಸರವೂ ಇದೆ. ಈ ಮಾತಿಗೂ ಕಾರಣವಿದೆ. ನಮ್ಮ ಯಾವುದೇ ಅರೆ ನಗರಗಳನ್ನಾಗಲೀ ಅಥವಾ ಅವುಗಳನ್ನು ಆಳುತ್ತಿರುವ ನಮ್ಮ ಸ್ಥಳೀಯ ಆಡಳಿತವನ್ನು ಕಂಡರೆ ಈ ಮಾತು ಸುಳ್ಳೆನಿಸದು. ಎಲ್ಲರೂ ವಿವೇಚನೆಯಿಲ್ಲದ ಅಭಿವೃದ್ಧಿಗೇ ಒತ್ತು ಕೊಡುತ್ತಿದ್ದಾರೆ. ಸರಿಯಾದ ಯೋಜಿತ ಅಭಿವೃದ್ಧಿ ಕುರಿತು ತಲೆ ಕೆಡಿಸಿಕೊಳ್ಳುತ್ತಲೇ ಇಲ್ಲ. ನಮ್ಮ ಅರೆ ನಗರಗಳ ಒಂದೇ ಒಂದು ಜಂಕ್ಷನ್‌ಗಳಲ್ಲಿ ಬೇಕಾಗುವ ಕನಿಷ್ಠ ಮೂಲ ಸೌಕರ್ಯಗಳಿಲ್ಲ. ಕುಡಿಯುವ ನೀರಿದ್ದರೆ, ಶೌಚಾಲಯ ಇರುವುದಿಲ್ಲ. ಅವೆರಡೂ ಇದ್ದರೆ ಬಸ್ ತಂಗುದಾಣವಿರುವುದಿಲ್ಲ. ಈ ಮೂರೂ ಇದ್ದಾವೆಂದುಕೊಳ್ಳಿ. ರಸ್ತೆ ಕಿರಿದಾಗಿರುತ್ತದೆ. ಅದೂ ಸರಿ ಇದೆ ಎಂದುಕೊಂಡರೆ ವಾಹನ ನಿಲುಗಡೆಗೆ ನಿಯಮಗಳೇ ಇರುವುದಿಲ್ಲ. ಇವೆಲ್ಲವೂ ನಮ್ಮ ಮಹಾನಗರಗಳಲ್ಲಿ ಕಾಣುತ್ತಿರುವ ಚಿತ್ರಣವೇ ತಾನೇ. ಅಲ್ಲಿಗೆ ನಮ್ಮ ಅರೆ ನಗರಗಳೂ ಸಮಸ್ಯೆಗಳ ಸ್ವರೂಪದಲ್ಲಿ ಮರಿ ಮಹಾನಗರಗಳಾಗುತ್ತಿವೆಯೇ ಎಂಬುದು ಚರ್ಚೆಗೀಡಾಗಬೇಕಾದ ಪ್ರಶ್ನೆ. ಮಹಾನಗರಗಳು ಹೇಗಿವೆ ಗೊತ್ತೇ?
ದಿಲ್ಲಿಯ ಕಥೆ ನಮಗೆ ಗೊತ್ತಿದೆ. ಇಡೀ ಏಷ್ಯಾದಲ್ಲೇ ಅತಿ ಹೆಚ್ಚು ವಾಯು ಮಾಲಿನ್ಯವನ್ನು ಎದುರಿಸುತ್ತಿರುವ ನಗರವೆಂದು ಜನಪ್ರಿಯವಾಗಿದೆ. ಪ್ರತಿ ವರ್ಷವೂ ಅಲ್ಲಿನ ಜನರು ಉಸಿರಾಡಲು ಸಂಕಷ್ಟ ಎದುರಿಸುತ್ತಿದ್ದಾರೆ. ಹೊಗೆ ಮಾಲಿನ್ಯ, ಕೈಗಾರಿಕಾ ಮಾಲಿನ್ಯವೆಲ್ಲವೂ ಇಡೀ ನಗರವನ್ನು ಮುಳುಗಿಸುತ್ತಿದೆ. ಅದಕ್ಕೆ ಹತ್ತಿರದ ರಾಜ್ಯಗಳ ಕೆಲವು ಚಟುವಟಿಕೆಗಳೂ ಕೊಡುಗೆ ನೀಡುತ್ತಿವೆ. ಒಟ್ಟೂ ಬದುಕುವುದೇ ಕಷ್ಟವೆನ್ನುವ ಹಾಗೆ ಇದೆ. ಇದು ಗಾಳಿಯ ಕಥೆ. ಬೆಂಗಳೂರಿನ ಕಥೆ ಹೊಸದೇನೂ ಅಲ್ಲ. ವಾಹನ ದಟ್ಟಣೆ ಎಂಥಾ ಸ್ಥಿತಿಯನ್ನು ತಂದಿಟ್ಟಿದೆಯೆಂದರೆ ಒಂದು ಕಿ.ಮೀ. ದಾಟಲಿಕ್ಕೂ (ಹೆಚ್ಚು ವಾಹನ ದಟ್ಟಣೆ ಇರುವ ಸಂದರ್ಭದಲ್ಲಿ) ಒಂದೆರಡು ಗಂಟೆ ಬೇಕು ಎನ್ನುವಂತಿದೆ. ಎಲ್ಲಿ ನೋಡಿದರೂ ಟ್ರಾಫಿಕ್ ಜಾಮ್. ಎಷ್ಟು ಮೇಲ್ಸೇತುವೆಗಳನ್ನು ಕಟ್ಟಿಸಿದರೂ ಇಲ್ಲ, ಎಷ್ಟು ಗ್ರೇಡ್ ಸಪರೇಟರ್‌ಗಳನ್ನು ನಿರ್ಮಿಸಿದರೂ ಇಲ್ಲ. ಮೆಟ್ರೋ ಬಂದರೂ ಅದೇ, ಮೋನೊ ರೈಲು ಬಂದರೂ ಅದೇ. ಒಂದು ಬಡಾವಣೆಯಿಂದ ಮತ್ತೂಂದು ಬಡಾವಣೆಗೆ ಸಾಗುವುದೇ ದುಸ್ಸಾಹಸವೆನಿಸಿ ಬಿಟ್ಟಿದೆ. ಹಾಗಾಗಿ ದಿನದ ಹೆಚ್ಚು ಹೊತ್ತು ರಸ್ತೆಗಳಲ್ಲಿ ಕಳೆಯುವಂತಾಗಿದೆ. ಮುಂಬಯಿ ಪ್ರತಿ ವರ್ಷವೂ ಮಳೆಯಲ್ಲಿ ಮುಳುಗುತ್ತಿದೆ. ಮಳೆಯ ನೀರು ಹರಿದುಹೋಗಲು ಸಾಧ್ಯವಾಗದೇ ಮನೆಗಳಿಗೆ, ಅಂಗಡಿಗಳಿಗೆ ಮುನ್ನುಗ್ಗುತ್ತಿದೆ. ರೈಲು, ಬಸ್ಸು ಎಲ್ಲವೂ ಒಮ್ಮೆಲೆ ಸ್ತಬ್ಧಗೊಳ್ಳುತ್ತದೆ. ಮನೆಯೊಳಗಿನ ಜನರು ರಸ್ತೆಗಿಳಿಯದ ಸ್ಥಿತಿ ನಿರ್ಮಾಣವಾಗುತ್ತದೆ.ದೇಶದ ವಾಣಿಜ್ಯ ನಗರದ ಖ್ಯಾತಿ ಹೊಂದಿರುವ ಇಡೀ ಮುಂಬಯಿ ಕೆಲವು ದಿನ ಉಸಿರಾಡುವುದೇ ಇಲ್ಲ. ಅಂಥ ಸ್ಥಿತಿಗೆ ತಲುಪಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಒಂದಿಷ್ಟು ಪ್ರಾಣ ಹಾನಿ, ಒಂದಿಷ್ಟು ಸೊತ್ತು ಹಾನಿ ಎನ್ನುವುದು ಸಾಮಾನ್ಯವಾಗಿಬಿಟ್ಟಿದೆ. ಇವೆಲ್ಲವೂ ಒಂದೆರಡು ಮಳೆಗೆ ಆಗುವ ಅನಾಹುತ. ಕೋಲ್ಕೊತ್ತಾ ಇಂದಿಗೂ ಕನಿಷ್ಠ ಮೂಲ ಸೌಕರ್ಯಗಳ ಕೊರತೆಯಿಂದಲೇ ಬಸವಳಿದಿದೆ. ಮೆಟ್ರೋದಲ್ಲೂ ಎಲ್ಲ ಸೌಕರ್ಯ ಸಿಗುತ್ತಿಲ್ಲ. ಕಿರಿದಾದ ರಸ್ತೆಗಳು, ಅನಿಯಮಿತ ವಿದ್ಯುತ್ ಪೂರೈಕೆ, ಒಳಚರಂಡಿ ಸೌಲಭ್ಯ, ಕುಡಿಯುವ ನೀರು-ಇತ್ಯಾದಿ ಸಮಸ್ಯೆಗಳು ನಗರದ ಬದುಕನ್ನು ಸುಖವಾಗಿಟ್ಟಿಲ್ಲ. ಅತ್ಯಾಧುನಿಕ ನಗರವಾಗಬೇಕಾಗಿದ್ದರ ಪ್ರಾಚೀನ ನಗರದ ಕಥೆಯಿದು. ಚೆನ್ನೈ ಮಳೆಯ ನೀರಿನಲ್ಲಿ ಮುಳುಗಿದ್ದು ಮೊನ್ನೆಯೆಂಬಂತಿದೆ. ಅಲ್ಲಿಯೂ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಟ್ರಾಫಿಕ್ ಜಾಮ್ ಇತ್ಯಾದಿ ಸಮಸ್ಯೆ ನಿತ್ಯದ್ದು. ಕೆಲವು ರಸ್ತೆಗಳು ದೊಡ್ಡದಾಗಿದ್ದರೆ, ಉಳಿದವೆಲ್ಲಾ ಕಿರಿದಾದದ್ದು. ಸ್ವತ್ಛತೆ ಎನ್ನುವುದೂ ಸಮರ್ಪಕ ನಿರ್ವಹಣೆಯನ್ನು ಬಯಸುತ್ತಿದೆ. ಇದೆಲ್ಲವೂ ಐದೂ ಮಹಾನಗರಗಳ ಸಣ್ಣದೊಂದು ಸ್ಥೂಲ ನೋಟವಷ್ಟೇ. ಅದರೊಳಗೆ ಇಳಿದರೆ ಇದೇ ಸಮಸ್ಯೆಗಳ ರೂಪ ವಿಸ್ತಾರಗೊಳ್ಳುತ್ತಾ ಹೋಗುತ್ತದೆ. ಈಗ ಹೇಳಿ, ಹೇಗಾಗಬೇಕು?
ಯೋಜಿತವಲ್ಲದ ಅಭಿವೃದ್ಧಿಯ ಪರಿಣಾಮವನ್ನು ಈ ಐದೂ ನಗರಗಳು ಅನುಭವಿಸುತ್ತಿವೆ. ಇವೆಲ್ಲವನ್ನೂ ನೋಡಿಕೊಂಡೂ ನಮ್ಮ ಅರೆ ನಗರ-ಪಟ್ಟಣಗಳು ಹೀಗಾಗಬೇಕೇ? ಅಥವಾ ಈ ಮಹಾನಗರಗಳು ಮಾದರಿಯಾಗಿ ತೋರುತ್ತವೆಯೇ? ಈ ಪ್ರಶ್ನೆಗಳನ್ನು ನಮ್ಮ ಸ್ಥಳೀಯ ಆಡಳಿತ ನಡೆಸುವವರು ಹಾಕಿಕೊಳ್ಳಬೇಕು. ಮಹಾನಗರಗಳಲ್ಲಿನ ಸಮಸ್ಯೆ, ವೈಕಲ್ಯಗಳನ್ನು ಕಾಣುತ್ತಲೇ ಅದಕ್ಕೆ ಪರಿಹಾರ ರೂಪವೆಂಬಂತೆ ನಮ್ಮ ಅರೆನಗರ-ಪಟ್ಟಣಗಳನ್ನು ಬೆಳೆಸಬೇಕು-ರೂಪಿಸಬೇಕು. ಆಗ ನಮ್ಮ ಅರೆ ನಗರಗಳು-ಪಟ್ಟಣಗಳು ಅಭಿವೃದ್ಧಿಯ ತಾಣಗಳಾಗಿ ಬದಲಾಗುತ್ತವೆ. ಆರ್ಥಿಕ ಚಟುವಟಿಕೆಯ ನೆಲೆಯಾಗಿ ಮಾರ್ಪಡಬಲ್ಲದು. ಅಗ ಇಡೀ ದೇಶದ ಹೊಟ್ಟೆ ತುಂಬುವಷ್ಟು ಸಂಪನ್ಮೂಲ ಹಾಗೂ ಸಾಮರ್ಥಯ ನಮ್ಮ ಅರೆನಗರ-ಪಟ್ಟಣಗಳಿಗೆ ಬರುತ್ತದೆ. ಅದಕ್ಕಿಂತಲೂ ಪ್ರಮುಖವಾಗಿ ಸಿಗುವ ಒಂದು ಅವಕಾಶವನ್ನು ಸುವರ್ಣ ಅವಕಾಶವಾಗಿ ಮಾರ್ಪಡಿಸಿಕೊಂಡ ಹೆಮ್ಮೆ ದಕ್ಕಿಸಿಕೊಳ್ಳಬಹುದು. ಈ ನಿಟ್ಟಿನಲ್ಲೇ ಯೋಚಿಸಬೇಕಾದುದು ತುರ್ತು ಅಗತ್ಯ.