Advertisement
ಕಡಲ ತೀರದ ಭಾರ್ಗವನ ಸಾಹಿತ್ಯದ ಸಾಧನೆಯನ್ನು ಅಜರಾಮರವಾಗಿರುವಂತೆ ಮಾಡಲು ಅವರ ಹುಟ್ಟೂರಾದ ಉಡುಪಿಯ ಕೋಟದ ಕೋಳ್ಕೆರೆಯಲ್ಲಿ ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್ ಅನ್ನು 2011ರಲ್ಲಿ ನಿರ್ಮಿಸಲಾಗಿದೆ. ಇದುಕೋಟ ಮುಖ್ಯರಸ್ತೆಯಿಂದ 300ಮೀ. ದೂರದಲ್ಲಿದ್ದು, ಇಲ್ಲಿ ವಾರದ 7 ದಿನವೂ ಬೆಳಗ್ಗೆ 10 ಗಂಟೆಯಿಂದ ಸಂಜೆ 6ರ ವರೆಗೆ ಭೇಟಿಗೆ ಅವಕಾಶವಿದೆ.
Related Articles
Advertisement
ಈ ಪಾರ್ಕ್‌ನಲ್ಲಿ ಒಂದು ಗ್ರಂಥಾಲಯ ಹಾಗೂ ಕಲಾ ಮಂದಿರ(ಆರ್ಟ್ ಗ್ಯಾಲರಿ)ವಿದ್ದು, ಗ್ರಂಥಾಲಯವು ಕಾರಂತರ ಎಲ್ಲ ಕೃತಿಗಳ ಸಂಗ್ರಹದ ಜತೆಗೆ ಅವರ ವೈಯಕ್ತಿಕ ಸಂಗ್ರಹಣೆಯ ಪುಸ್ತಕಗಳನ್ನೂ ಹೊಂದಿದೆ. ಸ್ಥಳೀಯರು ಇಲ್ಲಿ ನೊಂದಾಯಿಸಿಕೊಂಡು ಇದರ ಸದಸ್ಯತ್ವವನ್ನು ಪಡೆದು ಕೊಳ್ಳಬಹುದು. ಇಲ್ಲಿನ ಕಲಾಮಂದಿರದಲ್ಲಿ ಶಿವರಾಮ ಕಾರಂತರ ಜೀವನ ಮತ್ತು ಕೃತಿಗಳನ್ನು ಬಿಂಬಿಸುವ ಚಿತ್ರಗಳು ಮತ್ತು ಛಾಯಾಚಿತ್ರಗಳನ್ನು ಪ್ರದರ್ಶಿದಸಲಾಗುತ್ತದೆ. ಇಲ್ಲಿ ಒಂದು ಸಂಗೀತ ಕಾರಂಜಿಯಿದ್ದು, ಪ್ರತೀ ತಿಂಗಳ ಮೊದಲ ಶುಕ್ರವಾರದಂದು ಹಾಗೂ ಸ್ವಾತಂತ್ರ್ಯ ದಿನಾಚರಣೆ, ಪ್ರಜಾಪ್ರಭುತ್ವ ದಿನಾಚರಣೆ ಯಂತಹ ರಾಷ್ಟ್ರೀಯ ಹಬ್ಬಗಳಂದು ಉಚಿತವಾಗಿ ಸಂಗೀತ ಕಾರಂಜಿ ಪ್ರದರ್ಶನ ನೋಡಬಹುದು.
ಪ್ರತೀ ವರ್ಷ ಕಾರಂತರ ಜನ್ಮ ವಾರ್ಷಿಕೋತ್ಸವದಂದು ಆಡಿಟೋರಿಯನಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಈ ಸಂದರ್ಭ ಸಾಧಕರಿಗೆ ಕಾರಂತ ಹುಟ್ಟೂರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳ ಉತ್ಸವ, ಯಕ್ಷಗಾನ ಪ್ರದರ್ಶನಗಳು, ವಿಚಾರ ಸಂಕಿರಣಗಳು, ರಂಗಭೂಮಿ ಚಟುವಟಿಕೆಗಳು ಮತ್ತು ಕವಿಗಳ ಸಭೆಯಂತಹ ವಿವಿಧ ಕಾರ್ಯಕ್ರಮಗಳೊಂದಿಗೆ, 10 ದಿನಗಳ ಸುಧೀರ್ಘ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ.
ಕಾರಂತರು ಕನ್ನಡ ಸಾಹಿತ್ಯಕ್ಷೇತ್ರ ಮಾತ್ರವಲ್ಲದೇ ಕರಾವಳಿಯ ಸುಪ್ರಸಿದ್ಧ ಕಲೆ ಯಕ್ಷಗಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಅವರು ತಮ್ಮ ಮನೆಯಲ್ಲಿಯೇ ವಿದ್ಯಾರ್ಥಿಗಳಿಗೆ ಊರ ಆಸಕ್ತರಿಗೆ ಕಾರಂತರು ತರಬೇತಿಯನ್ನು ನೀಡುತ್ತಿದ್ದರು. ಈ ಥೀಮ್ ಪಾರ್ಕ್‌ನ ಆರ್ಟ್‌ಗ್ಯಾಲರಿಯಲ್ಲಿ ಅಂದಿನ ಕಾಲದಲ್ಲಿ ಕಾರಂತರು ಗೆಜ್ಜೆ ಕಟ್ಟಿಕುಣಿಯುತ್ತಿರುವ ಪೋಟೋಗಳನ್ನು ಸಂಗ್ರಹಿಸಿಡಲಾಗಿದೆ. ಕಾರಂತರು ಅಪ್ರತಿಮ ದೇಶ ಭಕ್ತರಾಗಿದ್ದು ಈ ಥೀಮ್ ಪಾರ್ಕ್‌ನ ಸಂಪನ್ಮೂಲ ವ್ಯಕ್ತಿಯಾದ ಪ್ರದೀಪ್ ಬಸರೂಯ ಅವರು ಬರೆದಿರುವ ಪುಸ್ತಕದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಕಾರಂತರ ಭಾಗವಹಿಸುವಿಕೆಯ ಕುರಿತ ಉಲ್ಲೇಖಗಳಿವೆ.
ಕನ್ನಡ ಸಾರಸ್ವತ ಲೋಕವನ್ನು ಬೆಳಗಿದ ಈ ಮಹಾನ್‌ಕವಿಯ ಸಾಧನೆಗಳನ್ನು ಬಿಂಬಿಸುವ ಈ ಪಾರ್ಕ್ ಕನ್ನಡಿಗರೆಲ್ಲರೂ ನೋಡಲೇಬೇಕಾದ ಸ್ಥಳವಾಗಿದೆ.
-ದಿವ್ಯಾ
ನಾಯ್ಕನಕಟ್ಟೆ