Advertisement

UV Fusion: ಛತ್ತಿಸ್‌ಗಢದ ನೆನಪು ಜೀವನಕ್ಕಾಗುವಷ್ಟೂ …

03:40 PM Mar 08, 2024 | Team Udayavani |

ಛತ್ತಿಸ್‌ಗಢದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ “ರಾಷ್ಟ್ರೀಯ ಏಕತಾ ಶಿಬಿರ’ಕ್ಕೆ ನಮ್ಮ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಭಾಗವಹಿಸಿದ್ದವರಲ್ಲಿ ನಾನು ಒಬ್ಬನಾಗಿದೆ. ನಮ್ಮೊಂದಿಗೆ ಭೀಮೇಶ್‌ ಸರ್‌ ಮೇಲ್ವಿಚಾರಕರಾಗಿ ಬಂದಿದ್ದರು.

Advertisement

ಶಿಬಿರದ ಮೊದಲ ದಿನ ಕ್ಯಾಂಪ್‌ನಲ್ಲಿ ಶ್ರಮದಾನ ಮಾಡಿ ಸಂಜೆ ಕಾರ್ಯಕ್ರಮದ ಉದ್ಘಾಟನೆಗೆ ಅಲ್ಲಿಗೆ ಬಂದಿದ್ದ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳು ತಮ್ಮ ತಮ್ಮ ರಾಜ್ಯವನ್ನು ಪ್ರತಿಬಿಂಬಿಸುವ ಉಡುಗೆಗಳನ್ನು ತೊಟ್ಟು ಪಾಲ್ಗೊಂಡರು. ಅಂತೆಯೇ ನಾವು ಕೂಡ.

ಪ್ರತಿದಿನವೂ ಒಂದೊಂದು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಾವು ಸಜ್ಜಾಗಬೇಕಿತ್ತು. ನಾವು ಅಭ್ಯಾಸ ಮಾಡುವ ಪರಿ ನಮ್ಮ ಸಾಮರ್ಥ್ಯವನ್ನು ನಮಗೆ ಮರಳಿ ಮರಳಿ ಪರಿಚಯಿಸುತ್ತಿತ್ತು. ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಲಾವಣಿ ಪದ ಜಾನಪದ ನೃತ್ಯಗಳನ್ನು ಮಾಡಿ ಕರ್ನಾಟಕದ ಸಂಸ್ಕೃತಿಯನ್ನು ಅಲ್ಲಿ ಬಂದಿರುವ ಎಲ್ಲ ರಾಜ್ಯಗಳ ಮುಂದೆ ಪ್ರಸ್ತುತಪಡಿಸಿದೆವು.

ಈ ಮಧ್ಯೆ ಶಿಬಿರದಲ್ಲಿ ಬಮಲೇಶ್ವರಿ ಬೆಟ್ಟಕ್ಕೆ ಚಾರಣಕ್ಕೆ ಕರೆದುಕೊಂಡು ಹೋಗಿದ್ದರು. ಇದು ಅದ್ಭುತವಾಗಿ ನಿರ್ಮಾಣಗೊಂಡಿರುವ ಸಾವಿರಕ್ಕೂ ಹೆಚ್ಚು ಮೆಟ್ಟಿಲುಗಳಿರುವ ಬೆಟ್ಟವಾಗಿದ್ದು, ಬೆಟ್ಟದ ಮೇಲೆ ಬಮಲೇಶ್ವರಿ ದೇವಿಯ ದೇಗುಲವಿದೆ. ಬೆಟ್ಟ ಹತ್ತಿ ದೇವಿಯ ದರ್ಶನವನ್ನು ಮಾಡಿದೆವು.

ಈ ಶಿಬಿರದಲ್ಲಿ ಆಂಧ್ರಪ್ರದೇಶದ ತಂಡ ಮತ್ತು ನಮ್ಮ ನಡುವೆ ವಿಪರೀತವಾದ ಬಾಂಧವ್ಯ ಬೆಳೆದಿತ್ತು. ಅವರ ಭಾಷೆಯನ್ನು ನಾವು ಕಲಿಯುವುದು, ನಮ್ಮ ಭಾಷೆಯನ್ನು ಅವರು ಕಲಿಸುವುದು, ಹೀಗೆ ನಮ್ಮವರ ನಡುವೆ ಅನ್ಯೋನ್ಯತೆ ವೃದ್ಧಿಯಾಗಿತ್ತು. ಬೇರೆ ರಾಜ್ಯಗಳಿಂದ ಬಂದವರಿಗೆ ನಮ್ಮ ಕನ್ನಡ ಕಲಿಸುವುದರಲ್ಲಿ ಇರುವ ಖುಷಿ ಮತ್ತೆ ಯಾವುದರಲ್ಲೂ ಇಲ್ಲ ಅನಿಸಿದಂತು ಸತ್ಯ. ಇದರ ಮಧ್ಯೆ ಹೊನ್ನಾವರದ ರಕ್ಷಿತ್‌ ಮಾಡಿದ ಯಕ್ಷಗಾನ ಎಲ್ಲ ರಾಜ್ಯದವರನ್ನು ಮಂತ್ರಮುಗ್ಧಗೊಳಿಸಿ ಒಂದೇ ದಿನದಲ್ಲಿ ಆತ ಕ್ಯಾಂಪ್‌ನ ಸೆಲಬ್ರೆಟಿಯಾಗಿ ಎಲ್ಲರೂ ಅವನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಆರಂಭಿಸಿದ್ದರು.

Advertisement

ಶಿಬಿರದಲ್ಲಿ ಪ್ರತಿದಿನವೂ ಕೂಡ ಒಂದೊಂದು ವಿಶೇಷತೆ ಇರುತ್ತಿತ್ತು. ವಿಶೇಷವಾದ ಅತಿಥಿಗಳು ಜತೆ ಸಮಕಾಲಿನ ವಿಚಾರಗಳ ಬಗ್ಗೆ ಸಂವಾದ ನಡೆಯುತ್ತಿತ್ತು. ವಿವಿಧ ಸ್ಪರ್ಧೆಗಳಲ್ಲಿ ನಮ್ಮ ಕರ್ನಾಟಕ ತಂಡ ಗೆದ್ದಾಗ ಖುಷಿಗೆ ಪಾರವೇ ಇರುತ್ತಿರಲಿಲ್ಲ. ಬೆಳಗ್ಗೆ 6ರಿಂದ ರಾತ್ರಿ 10ರ ವರೆಗೆ ಒಂದಲ್ಲ ಒಂದು ಚಟುವಟಿಕೆಯ ಮೂಲಕ ನಮ್ಮನ್ನು ತೊಡಗಿಸಿ ನಮ್ಮ ಸಾಮರ್ಥ್ಯವನ್ನು ನಮಗೆ ಪರಿಚಯಿಸಿ ಇನ್ನೊಬ್ಬರ ವ್ಯಕ್ತಿತ್ವ ಪರಿಚಯವಾಗಿವಂತೆ ಈ ಶಿಬಿರ ಮಾಡಿತ್ತು.

ವಿವಿಧ ರಾಜ್ಯಗಳಿಂದ ಬಂದಿದ್ದ ಸ್ವಯಂಸೇವಕರು ಪರಿಚಯವಾಗುತ್ತಿದ್ದಂತೆ ಅವರ ಸಂಸ್ಕೃತಿ ಆಚಾರ ವಿಚಾರ ಇವೆಲ್ಲವೂ ಕೂಡ ನಮ್ಮೊಳಗೆ ಹೊಸದಾದ ಹುರುಪೊಂದನ್ನು ನಿಡುತ್ತಿತ್ತು. ಶಿಬಿರಕ್ಕೆ ದಿನವೂ ಒಂದೊಂದು ವಿಶ್ವವಿದ್ಯಾಲಯದ ಸರದಿಯಂತೆ ಊಟವನ್ನು ನೀಡಬೇಕಾದ ನಿಯಮವಿತ್ತು. ನಮ್ಮ ಸರದಿ ಬಂದಾಗ ನಾವು ನಮ್ಮ ಧಾರವಾಡದ ಜೋಳದ ರೊಟ್ಟಿ, ಕೆಂಪು ಮೆಣಸಿನಕಾಯಿ ಹಿಂಡಿ, ಕರ್ಚಿಕಾಯಿ ಹೀಗೆ ಹಲವಾರು ನಮ್ಮ ಶೈಲಿಯ ಖಾದ್ಯಗಳನ್ನು ಅಲ್ಲಿನ ಉನ್ನತ ಅಧಿಕಾರಿಗಳಿಗೆ ಉಣಬಡಿಸಿದೆವು.

ಹಲವಾರು ವಿಶೇಷತೆಗಳ ನಡುವೆ ಜೀವನಕಾಗುವಷ್ಟು ನೆನಪಿನ ಬುತ್ತಿಯನ್ನು ಈ ಶಿಬಿರ ಕೊಟ್ಟಿದ್ದು, ಹೋಗಿ ಬಂದ ಮೇಲೂ ಶಿಬಿರದ ಗುಂಗು ಹಾಗೇ ಉಳಿದಿದೆ ಎಂದರೆ ತಪ್ಪಿಲ್ಲ.

 ಅಮೋಘ ಸಾಂಬಾನುಸುತ

ಸರಕಾರಿ ಪ್ರಥಮ ದರ್ಜೆ ಕಾಲೇಜು

ಶಿರಹಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next