Advertisement

ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿನಿಧಿಗಳ ಸಭೆ ಕರೆದು ಸೂಕ್ತ ತೀರ್ಮಾನ: ಮಧುಬಂಗಾರಪ್ಪ

08:44 PM Jul 10, 2023 | Team Udayavani |

ವಿಧಾನ ಪರಿಷತ್ತು: ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ 2015ರ ನಂತರ ಈವರೆಗೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸಭಾಪತಿಗಳು ಸೇರಿ ಮೇಲ್ಮನೆಯಲ್ಲಿ ಒಕ್ಕೊರಲ ದನಿ ಕೇಳಿಬಂತು.

Advertisement

ಸೋಮವಾರ ಪ್ರಶ್ನೋತ್ತರ ವೇಳೆ ಬಿಜೆಪಿಯ ಶಶೀಲ್‌ ನಮೋಶಿ ವಿಷಯ ಪ್ರಸ್ತಾಪಿಸಿ, “ಸರ್ಕಾರ ಸ್ವತಃ ಲಿಖೀತವಾಗಿ ನೀಡಿದ ಉತ್ತರದಲ್ಲಿ 2015ರ ಡಿಸೆಂಬರ್‌ನಿಂದ ಈಚೆಗೆ ರಾಜ್ಯದ ಅನುದಾನಿತ ಪ್ರೌಢಶಾಲಾ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ನಿವೃತ್ತಿ, ಮರಣ ಮತ್ತು ರಾಜೀನಾಮೆಯಿಂದ ಕ್ರಮವಾಗಿ 4,783 ಮತ್ತು 2,159 ಹುದ್ದೆಗಳು ಖಾಲಿಯಿವೆ. ಇವುಗಳ ಭರ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾದರೆ, ಶಿಕ್ಷಣ ವ್ಯವಸ್ಥೆಯ ಗತಿ ಏನು’ ಎಂದು ಪ್ರಶ್ನಿಸಿದರು.

ಇದಕ್ಕೆ ದನಿಗೂಡಿಸಿದ ಬಿಜೆಪಿಯ ಡಾ.ನಾರಾಯಣಸ್ವಾಮಿ ಮತ್ತು ಎಸ್‌.ವಿ. ಸಂಕನೂರ, “ಬರೋಬ್ಬರಿ ಎಂಟು ವರ್ಷಗಳಿಂದ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಅನುಮತಿ ನೀಡಿಲ್ಲ. ಇದು ಶಿಕ್ಷಣ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವೇ? ಮಕ್ಕಳ ಭವಿಷ್ಯ ಹೇಗೆ? ಈ ಹಿನ್ನೆಲೆಯಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

“2015ರದ್ದು ಬಿಡಿ; ನಂತರದ್ದು ಹೇಳಿ’: ಸಚಿವ ಮಧು ಬಂಗಾರಪ್ಪ ಮಾತನಾಡಿ, 2015ರ ಪೂರ್ವದಲ್ಲಿ ಅನುದಾನಿತ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಕ್ರಮವಾಗಿ 3,794 ಮತ್ತು 1,396 ಹುದ್ದೆಗಳು ಖಾಲಿ ಇದ್ದವು. ಅವುಗಳ ಭರ್ತಿ ನಂತರ 2016ರಿಂದ ಈಚೆಗಿನ ಹುದ್ದೆಗಳ ಭರ್ತಿಗೆ ನಿಯಮಾನುಸಾರ ಭರ್ತಿಗೆ ಪರಿಶೀಲಿಸಲಾಗುವುದು ಎಂದು ಸಮಜಾಯಿಷಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ ಬಸವರಾಜ ಹೊರಟ್ಟಿ, “2015ರ ಹಿಂದಿನದ್ದು ಬಿಟ್ಟುಬಿಡಿ. ನಂತರದ್ದು ಏನು ಮಾಡುತ್ತೀರಿ ಅದನ್ನು ಮಾತ್ರ ಹೇಳಿ’ ಎಂದು ಕೇಳಿದರು. ಈ ವೇಳೆ ಮಾತನಾಡಿದ ಸಚಿವರು, “ಶೀಘ್ರ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿನಿಧಿಗಳ ಸಭೆ ಕರೆದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Advertisement

ಶಿಥಿಲ ಕೊಠಡಿಗಳ ದುರಸ್ತಿಗೆ ಕ್ರಮ
ಇಡೀ ರಾಜ್ಯದ ಶಿಥಿಲಗೊಂಡಿರುವ ಶಾಲಾ ಕೊಠಡಿಗಳ ಮಾಹಿತಿ ತರಿಸಿಕೊಂಡಿದ್ದು, ಸರಿಪಡಿಸಲು ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಕಾಂಗ್ರೆಸ್‌ನ ಅಬ್ದುಲ್‌ ಜಬ್ಬರ್‌ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಮಳೆಗಾಲದಲ್ಲಿ ಯಾವುದೇ ಅನಾಹುತಗಳು ಆಗದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಜೆಟ್‌ನಲ್ಲಿ ಅಗತ್ಯ ಅನುದಾನವೂ ದೊರಕಿದೆ. ಅತ್ಯವಶ್ಯಕ ಇರುವ ಕಡೆಗಳಲ್ಲಿ ಆದ್ಯತೆ ಮೇರೆಗೆ ಕೊಠಡಿಗಳ ದುರಸ್ತಿಗೆ ಆದೇಶಿಸಲಾಗಿದೆ. ಈಗಾಗಲೇ ರಾಜ್ಯದ ಒಟ್ಟಾರೆ ಶಿಥಿಲಗೊಂಡ ಶಾಲಾ ಕೊಠಡಿಗಳ ಮಾಹಿತಿ ತರಿಸಿಕೊಂಡಿದ್ದೇನೆ. ಅವುಗಳನ್ನು ಸರಿಪಡಿಸಲಿಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ವಿಶೇಷ ಶಿಕ್ಷಕರು; ಬೇಡಿಕೆ ಬಂದರೆ ನೇಮಕ
ವಿಶೇಷ ಶಿಕ್ಷಕರ (ಸಂಗೀತ ಮತ್ತು ಕಲೆ) ನೇಮಕಕ್ಕೆ ಬೇಡಿಕೆ ಬಂದರೆ ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ಅನುಮತಿ ಪಡೆಯಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದರು. ಕಾಂಗ್ರೆಸ್‌ನ ಮಂಜುನಾಥ್‌ ಭಂಡಾರಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, “ಈಗಾಗಲೇ ಮಂಜೂರಾಗಿರುವ 15 ಸಾವಿರ ಶಿಕ್ಷಕರ ಹುದ್ದೆಗಳ ಜತೆಗೆ ಸುಮಾರು 900 ವಿಶೇಷ ಶಿಕ್ಷಕರು ಬೇಕಾಗುತ್ತಾರೆ. ಆ ಹುದ್ದೆಗಳ ನೇಮಕಕ್ಕೆ ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಈ ಸಂಬಂಧ ಬೇಡಿಕೆಗಳು ಬಂದರೆ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

“ಶಿಕ್ಷಕರಿಗೆ ಡ್ರೆಸ್‌ಕೋಡ್‌ ಬಗ್ಗೆ ಸದ್ಯಕ್ಕೆ ಯಾವುದೇ ಆಲೋಚನೆ ಇಲ್ಲ. ಈ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ ಮುಂದುವರಿಯುತ್ತೇವೆ’ ಎಂದಷ್ಟೇ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next