ಲಕ್ನೋ: ಸಾಮಾನ್ಯವಾಗಿ ಮದರಸಾ ಎಂದಾಕ್ಷಣ ಅದು ಒಂದು ಧರ್ಮೀಯರಿಗಷ್ಟೇ ಸೀಮಿತ ಎನ್ನುವ ಭಾವನೆ ಹೆಚ್ಚಿನವರಲ್ಲಿದೆ. ಆದರೆ ಈ ಮದರಸಾದಲ್ಲಿ ಎಲ್ಲಾ ಧರ್ಮೀಯರೂ ಉತ್ತಮ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ!
ಹೌದು. ಇಂಥದ್ದೊಂದು ಅಪರೂಪದ “ಮದರಸಾ’ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿದೆ. ಸುಡು ಬಿಸಿಲಿನಲ್ಲಿ ಕಾದು ಸುಡುವ ತಗಡಿನಡಿಯಲ್ಲಿ ಕುಳಿತಿರುವ ಅಲ್ ಹುಸೈನ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳು ಪ್ರತಿದಿನ ಅಲ್ಲಾಹು ಅಕºರ್ ಎಂದೂ, ಜೈ ಹನುಮಾನ್ ಜ್ಞಾನಗುಣ ಸಾಗರ್ ಎಂದೂ ಪ್ರಾರ್ಥಿಸುತ್ತಾರೆ. ಅರೇಬಿಕ್ ಜತೆ ಜೊತೆಗೆ ಸಂಸ್ಕೃತ ಪಾಠವೂ ಇಲ್ಲಿ ನಡೆಯುತ್ತದೆ. ಇನ್ನೂ ಒಂದು ಅಚ್ಚರಿಯ ಸಂಗತಿ ಏನೆಂದರೆ, ಈ ಶಾಲೆಯಲ್ಲಿ ಹಿಂದೂ, ಮುಸ್ಲಿಂ ಎರಡೂ ಸಮುದಾಯಕ್ಕೆ ಸೇರಿದ ಶಿಕ್ಷಕರಿದ್ದಾರೆ.
ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಕಾಲೇಜಿನ ಪತ್ರಿಕೋದ್ಯಮ ಪದವೀಧರ, ಪತ್ರಕರ್ತ ಖಾಜಿ ಫರ್ಖಾನ್ ಅಖ್ತರ್ ಅವರು ಉದ್ಯೋಗ ತೊರೆದ ಬಳಿಕ 2015ರಲ್ಲಿ ಈ ಮದರಸಾ ಆರಂಭಿಸಿದರು. ಹುಟ್ಟಿ ಬೆಳೆದ ಊರಿಗೆ ಭೇಟಿ ನೀಡಿದ ವೇಳೆ ಶಿಕ್ಷಣ ಸಂಸ್ಥೆ ಆರಂಭಿಸಬೇಕೆನ್ನುವ ಆಸೆ ಇತ್ತು. ಎಲ್ಲಾ ಸಮುದಾಯದವರೂ ಶಿಕ್ಷಣ ಪಡೆಯುವಂತಹ ಶಾಲೆ ಇದಾಗಬೇಕು ಎನ್ನುವ ಉದ್ದೇಶದಿಂದ ಆರಂಭಿಸಿದ್ದಾಗಿ ಸ್ವತಃ ಖಾಜಿ ಅವರೇ ಹೇಳಿಕೊಂಡಿದ್ದಾರೆ.
ಮದರಸಾ ಎಂದರೆ ಕೇವಲ ಮುಸ್ಲಿಂ ಸಮುದಾಯಕ್ಕೆ ಎನ್ನುವ ಭಾವನೆ ಇದೆ. ಸಮಾಜದಲ್ಲಿ ಅದು ಬದಲಾಗ ಬೇಕು. ಎಲ್ಲಾ ಸಮುದಾಯದವರೂ ಮದರಸಾಗಳಲ್ಲಿ ಶಿಕ್ಷಣ ಪಡೆಯುವ ವಾತಾವರಣ ನಿರ್ಮಾಣಗೊಳ್ಳ ಬೇಕು. ಅದೇ ನಮ್ಮ ಗುರಿ.
ಖಾಜಿ ಫರ್ಖಾನ್ ಅಖ್ತರ್, ಶಾಲೆ ಸಂಸ್ಥಾಪಕ