Advertisement

High Court: “ಜೈ ಶ್ರೀರಾಮ್‌’ ಘೋಷಣೆ ಕೂಗಿದರೆ ಧಾರ್ಮಿಕ ಭಾವನೆ ಕೆರಳದು

11:02 PM Oct 15, 2024 | Team Udayavani |

ಬೆಂಗಳೂರು: ಜೈ ಶ್ರೀರಾಮ್‌’ ಎಂದು ಘೋಷಣೆ ಕೂಗುವುದು ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತದೆ’ ಎಂಬ ವಾದ ಅರ್ಥವಾಗುತ್ತಿಲ್ಲ ಎಂದು ಹೇಳಿರುವ ಹೈಕೋರ್ಟ್‌, ಮಸೀದಿಯಲ್ಲಿ ಜೈ ಶ್ರೀರಾಮ್‌ ಘೋಷಣೆ ಕೂಗಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪದಲ್ಲಿ ಇಬ್ಬರು ಯುವಕರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ರದ್ದುಪಡಿಸಿದೆ.

Advertisement

2023ರ ಸೆ. 24ರಂದು ರಾತ್ರಿ ಸುಮಾರು 10.50ರ ವೇಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ಗ್ರಾಮದ ಮರ್ದಾಳದ ಬದ್ರಿಯಾ ಜುಮ್ಮಾ ಮಸೀದಿಯ ಆವರಣ ಪ್ರವೇಶಿಸಿ ಜೈ ಶ್ರೀರಾಮ್‌ ಘೋಷಣೆ ಕೂಗಿದ ಆರೋಪದಲ್ಲಿ ತಮ್ಮ ವಿರುದ್ಧ ಕಡಬ ಠಾಣೆಯಲ್ಲಿ 2023ರಲ್ಲಿ ದಾಖಲಾಗಿರುವ ಎಫ್ಐಆರ್‌ ಪುತ್ತೂರು 2ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಹಾಗೂ ಜೆಎಂಎಫ್ಸಿ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಬಿಳಿನೆಲೆ ಗ್ರಾಮದ ಯುವಕರಾದ ಕೀರ್ತನ್‌ ಕುಮಾರ್‌, ಎನ್‌.ಎಂ. ಸಚಿನ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿ ಸಂಬಂಧ ನೀಡಿದ ಆದೇಶದಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಕಡಬ ಪ್ರದೇಶದಲ್ಲಿ ಹಿಂದೂ-ಮುಸ್ಲಿಮರು ಸೌಹಾರ್ದದಿಂದ ಬದುಕುತ್ತಿದ್ದಾರೆ ಎಂದು ಖುದ್ದು ದೂರುದಾರರೇ ಹೇಳಿದ್ದಾರೆ. ಹೀಗಿರುವಾಗ ಇಂತಹ ಘಟನೆ ಆ ಪ್ರದೇಶದಲ್ಲಿ ಸೌಹಾರ್ದಕ್ಕೆ ಧಕ್ಕೆ ತರುತ್ತದೆ ಎಂದು ಕಲ್ಪಿಸಿಕೊಳ್ಳುವುದಕ್ಕೆ ಯಾವುದೇ ಅವಕಾಶವಿಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಆರೋಪಿಗಳ ವಿರುದ್ಧ ಕಿಡಿಗೇಡಿತನ, ಸಮಾಜದಲ್ಲಿ ಬಿರುಕು ಮೂಡಿಸುವುದು, ಅತಿಕ್ರಮ ಪ್ರವೇಶ, ಬೆದರಿಕೆ ಆರೋಪಗಳನ್ನು ಮಾಡಲಾಗಿದೆ. ಆದರೆ ದೂರು, ವಕೀಲರ ವಾದ ಮತ್ತು ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದಾಗ ಅಂತಹ ಆರೋಪಗಳಿಗೆ ಯಾವುದೇ ಪುರಾವೆಗಳು ಕಾಣುತ್ತಿಲ್ಲ. ಹೀಗಿದ್ದಾಗ ಆರೋಪಿಗಳ ವಿರುದ್ಧದ ಪ್ರಕರಣ ಮುಂದುವರಿಸುವುದು ಕಾನೂನಿನ ದುರ್ಬಳಕೆ ಆಗಲಿದೆ ಎಂದು ನ್ಯಾಯಾಲಯ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next