Advertisement

ಪತ್ನಿಗಾಗಿ ವಿಮಾನದಲ್ಲಿ ಬಂದು ಕದಿಯುತ್ತಿದ್ದ ಐಷಾರಾಮಿ ಕಳ್ಳನ ಸೆರೆ

10:23 AM Apr 05, 2022 | Team Udayavani |

ಬೆಂಗಳೂರು: ಪತ್ನಿ ಜತೆ ಪ್ರವಾಸಿ ತಾಣ ಸುತ್ತಲು ಹಾಗೂ ಐಷಾರಾಮಿ ಜೀವನ ನಡೆಸಲು ಗುಜರಾತ್‌ನಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದ ಕುಖ್ಯಾತ ಅಂತಾರಾಜ್ಯ ಕಳ್ಳನೊಬ್ಬ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರ ಬಲೆಗೆ ಬಿದ್ದಿದ್ದಾನೆ.

Advertisement

ಗುಜರಾತ್‌ ಅಹಮದಾಬಾದ್‌ನ ಉಮೇಶ್‌ ಖಟಿಕ್‌ ಅಲಿಯಾಸ್‌ ಅಲಿಯಾಸ್‌ (26) ಬಂಧಿತ. ಆರೋಪಿಯಿಂದ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ.

ಗುಜರಾತ್‌ನಿಂದ ದೇಶದ ಪ್ರಮುಖ ನಗರಗಳಿಗೆ ವಿಮಾನ ದಲ್ಲಿ ಬರುತ್ತಿದ್ದ ಉಮೇಶ್‌, ಬೈಕ್‌ ಕಳ್ಳತನ ಮಾಡಿ, ಅದೇ ಬೈಕ್‌ನಲ್ಲಿ ನಗರದಲ್ಲಿ ಸುತ್ತಾಡಿ, ಒಂಟಿಯಾಗಿ ಓಡಾಡುವ ಮಹಿಳೆ ಯರ ಸರ ಕಸಿದುಕೊಂಡು ರೈಲಿನಲ್ಲಿ ವಾಪಸ್‌ ಹೋಗುತ್ತಿದ್ದ. ಕದ್ದ ಚಿನ್ನವನ್ನು ಗುಜರಾತ್‌ನ ಸಣ್ಣ-ಪುಟ್ಟ ಚಿನ್ನದಂಗಡಿಗೆ ಮಾರಾಟ ಮಾಡುತ್ತಿದ್ದ. ಬಂದ ಹಣದಲ್ಲಿ ಪತ್ನಿಯೊಂದಿಗೆ ಕಾಶ್ಮೀರ, ಗೋವಾ, ದೆಹಲಿ ಸೇರಿ ದೇಶದ ವಿವಿಧೆಡೆ ಸುತ್ತಾಡುತ್ತಿದ್ದ. ಪತ್ನಿ ಜತೆಗೆ ಐಶಾರಾಮಿ ಜೀವನ ನಡೆಸುತ್ತಿದ್ದ ಎಂಬುದು ಗೊತ್ತಾಗಿದೆ.

ಆರೋಪಿ ವಿರುದ್ಧ ಗುಜರಾತ್‌ ಸೇರಿ ಪ್ರಮುಖ ನಗರಗಳಲ್ಲಿ 30ಕ್ಕೂ ಅಧಿಕ ಸರಗಳ್ಳತನ ಪ್ರಕರಣ ದಾಖಲಾಗಿವೆ. ಕ್ಷಣಾರ್ಧದಲ್ಲೇ ತಪ್ಪಿಸಿಕೊಂಡು ಹೋಗುತ್ತಿದ್ದ ಆರೋಪಿ ಇದುವರೆಗೂ ಯಾವ ಪೊಲೀಸರಿಗೂ ಸಿಗುತ್ತಿರಲಿಲ್ಲ. ಈ ಮಧ್ಯೆ ಹೈದರಾಬಾದ್‌ ಪೊಲೀಸರು ಆರೋಪಿ ಪತ್ತೆಗೆ 1 ಲಕ್ಷ ರೂ.ಬಹುಮಾನ ಘೋಷಿಸಿದ್ದರು.

ಇದನ್ನೂ ಓದಿ:ಕಾದು ನೋಡಿ…ಶೀಘ್ರ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆ: ಈಶ್ವರಪ್ಪ

Advertisement

ನಗರ ಪೊಲೀಸರಿಂದ ಬಂಧನ

2021ರ ಡಿ.26ರಂದು ಬೆಳಗ್ಗೆ ಗುಜರಾತ್‌ನಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದ ಆರೋಪಿ, ಮಲ್ಲೇಶ್ವರದಲ್ಲಿ ಬೈಕ್‌ ಕಳ್ಳತನ ಮಾಡಿದ್ದ. ಅದೇ ಬೈಕ್‌ನಲ್ಲಿ ಬನಶಂಕರಿ ವ್ಯಾಪ್ತಿಯಲ್ಲಿ ಸುತ್ತಾಡಿ ಬ್ರ್ಯಾಂಡ್‌ ಫ್ಯಾಕ್ಟರಿ 3ನೇ ಅಡ್ಡರಸ್ತೆಯಲ್ಲಿ ಉಷಾ (62) ಅವರಿಗೆ ಚಾಕು ತೋರಿಸಿ, 30 ಗ್ರಾಂ ಚಿನ್ನದ ಮಾಂಗಲ್ಯ ಸರ, 8 ಗ್ರಾಂ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದ. ಅದೇ ದಿನ ಪುಟ್ಟೇನಹಳ್ಳಿ, ಮಾರತಹಳ್ಳಿಯಲ್ಲಿ ಇಬ್ಬರು ಮಹಿಳೆಯರ ಸರಗಳ್ಳತನ ಮಾಡಿದ್ದ. ನಂತರ ಬೈಕ್‌ನಲ್ಲಿ ಕೆ.ಜಿ. ನಗರದಲ್ಲಿ ಬಿಟ್ಟು, ಯಶವಂತಪುರಕ್ಕೆ ತೆರಳಿ ಅಲ್ಲಿಂದ ರೈಲಿನಲ್ಲಿ ಗುಜರಾತ್‌ಗೆ ಪರಾರಿಯಾಗಿದ್ದ.

ಉಷಾ ಅವರು ಸಿ.ಕೆ. ಅಚ್ಚುಕಟ್ಟು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಆರಂಭಿಸಿದ ಪೊಲೀಸರು ಕೃತ್ಯ ನಡೆದ ಸ್ಥಳದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾ ಪರಿಶೀಲಿಸಿ ದಾಗ ಆರೋಪಿಯ ಮುಖ ಚಹರೆ ಪತ್ತೆಯಾಗಿತ್ತು. ನೂರಾರು ಸಿಸಿ ಕ್ಯಾಮೆರಾ ಪರಿಶೀಲಿಸಿ, ಆತನ ಸಿಡಿಆರ್‌ ಮೂಲಕ ಆರೋಪಿಯ ಮೊಬೈಲ್‌ ಕಾರ್ಯ ನಿರ್ವಹಿಸುತ್ತಿದ್ದ ಪ್ರದೇಶ ಪತ್ತೆ ಹಚ್ಚಿದಾಗ ಆತ ರೈಲಿನಲ್ಲಿ ಗುಜರಾತ್‌ಗೆ ಪರಾರಿಯಾಗಿರುವುದು ಕಂಡು ಬಂದಿತ್ತು. ನಂತರ ಅಹಮದಾಬಾದ್‌ ಸಿಸಿಬಿ ಪೊಲೀಸರಿಗೆ ಆರೋಪಿ ಬಗ್ಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಅಲ್ಲಿನ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ನಂತರ ಜೈಲಿನಲ್ಲಿದ್ದ ಆರೋಪಿಯನ್ನು ಬಾಡಿವಾರೆಂಟ್‌ ಮೇಲೆ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತರಲಾಗಿದೆ ಎಂದು ಪೊಲೀಸರು ಹೇಳಿದರು.

ಪತ್ನಿಗಾಗಿ ಕಳ್ಳತನ!: ಉಮೇಶ್‌ ಅಪ್ರಾಪ್ತೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಈ ವಿಚಾರ ತಿಳಿದ ಪೋಷಕರು ಆತನ ವಿರುದ್ಧ ದೂರು ನೀಡಿದ್ದರು. ಆತನನ್ನು ಪೊಲೀಸರು ಬಂಧಿಸಿದ ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದ. ನಂತರ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಲು ಸರ ಕಳ್ಳತನ ಕೃತ್ಯಕ್ಕೆ ಇಳಿದಿದ್ದ. ಬಂದ ಹಣದಲ್ಲಿ ಪತ್ನಿಯನ್ನು ಐಷಾರಾಮಿಯಾಗಿ ನೋಡಿಕೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next