Advertisement

ಸ್ಥಳೀಯ ಮಾರುಕಟ್ಟೆಗೆ ಜೀವ ತುಂಬುತ್ತಿರುವ ಹಬ್ಬಗಳ ಸಾಲು

09:20 PM Oct 20, 2020 | mahesh |

ನಿಧಾನವಾಗಿ ಶುಭಸಮಾರಂಭಗಳ ಸಂಖ್ಯೆ ಹೆಚ್ಚುತ್ತಿರುವುದು ಸ್ಥಳೀಯ ಆರ್ಥಿಕತೆಗೆ ಜೀವ ತುಂಬುತ್ತಿದೆ. ಅದರೊಂದಿಗೇ ದಸರಾ-ದೀಪಾವಳಿಯಂಥ ಹಬ್ಬಗಳು ಬರುತ್ತಿರುವುದು ಸ್ಥಳೀಯ ಉದ್ಯಮ ವಲಯದಲ್ಲಿ ಹೊಸ ಆಶಾವಾದವನ್ನು ಮೂಡಿಸಿರುವುದು ಸುಳ್ಳಲ್ಲ.

Advertisement

ಕುಂದಾಪುರ/ಕಾರ್ಕಳ: ದಸರಾ ಹಬ್ಬದ ಉತ್ಸಾಹ ಮಾರುಕಟ್ಟೆಯಲ್ಲಿ ಕಾಣತೊಡಗಿದ್ದು, ಶುಭ ಸಮಾರಂಭಗಳೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಸ್ತ್ರ ಮಳಿಗೆಗಳಲ್ಲಿ, ಪೀಠೊಪಕರಣ ಮಳಿಗೆಗಳಲ್ಲಿ ಖರೀದಿ ಉತ್ಸಾಹ ಕಾಣತೊಡಗಿದೆ.

ಜನರು ನಿಧಾನವಾಗಿ ಶುಭ ಸಮಾರಂಭಗಳು, ಹಬ್ಬಗಳಲ್ಲಿ ಪಾಲ್ಗೊಳ್ಳ ತೊಡಗಿದ್ದಾರೆ. ಅದರ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಖರೀದಿ ಭರಾಟೆಯೂ ಹೆಚ್ಚತೊಡಗಿದೆ. ಐಷಾರಾಮಿ ಖರೀದಿಯನ್ನು ಗ್ರಾಹಕ ಸದ್ಯಕ್ಕೆ ಮುಂದೂಡಿದ್ದರೂ ಹಬ್ಬದ ಸಂಭ್ರಮವನ್ನು ಹೆಚ್ಚಿಸುವ ವಸ್ತುಗಳ ಖರೀದಿಗೆ ಹಿಂದೇಟು ಹಾಕದಿರುವುದು ಉದ್ಯಮ ವಲಯಕ್ಕೂ ಸಂತಸ ತಂದಿದೆ.

ಚೇತೋಹಾರಿ
ಕುಂದಾಪುರದ ಗಾಯತ್ರಿ ಡ್ರೆಸ್ಸಸ್‌ನ ಅನಂತ ಪಡಿಯಾರ್‌ ಅವರು, ಮದುವೆ, ಶುಭ ಸಮಾರಂಭ, ಗೃಹಪ್ರವೇಶದಂತಹ ಕಾರ್ಯಕ್ರಮಗಳು ಹೆಚ್ಚಾದಷ್ಟೂ ಜನ ಬಟ್ಟೆ ಖರೀದಿಗೆ ತೊಡಗುತ್ತಾರೆ. ಈ ಹಿಂದಿನ ತಿಂಗಳುಗಳಿಗೆ ಹೋಲಿಸಿದರೆ ಈಗ ಚೇತೋಹಾರಿಯಾಗಿದೆ. ಖರೀದಿ ಭರಾಟೆ ಹಿಂದಿನ ಮಾದರಿಗೇ ಬರುವ ವಿಶ್ವಾಸವಿದೆ. ಇನ್ನು ಕೆಲವು ತಿಂಗಳು ತಗುಲಬಹುದು ಎಂದು ಹೇಳುತ್ತಾರೆ.

ವಹಿವಾಟು ದ್ವಿಗುಣ
ಕಾರ್ಕಳದ ಪ್ರಭಾ ಟೆಕ್ಸ್‌ಟೈಲ್ಸ್‌ನ ಟಿ. ಸುರೇಂದ್ರ ಕಾಮತ್‌, ಬಟ್ಟೆ ವ್ಯಾಪಾರದಲ್ಲಿ ಒಳ್ಳೆಯ ಚೇತರಿಕೆ ಕಾಣಿಸುತ್ತಿದೆ. ಮೇ ತಿಂಗಳಲ್ಲಿ ಶೇ.30 ಇದ್ದ ವಹಿವಾಟು ಈಗ ದ್ವಿಗುಣಗೊಂಡಿದೆ. ದೀಪಾವಳಿ ಅವಧಿಗೆ ಮತ್ತಷ್ಟೂ ಏರಬಹುದು ಎಂದು ಹೇಳುತ್ತಾರೆ.

Advertisement

ಪರಿಸ್ಥಿತಿ ಸುಧಾರಣೆ
ಕುಂದಾಪುರದ ಪ್ಲೆಸೆಂಟ್‌ ಪೀಠೊಪಕರಣ ಮಳಿಗೆಯ ಇಬ್ರಾಹಿಂ ಸಾಹೇಬ್‌ ಅವರು, ಗೃಹಪ್ರವೇಶ ಮೊದಲಾದ ಶುಭ ಸಮಾರಂಭಗಳಿಗೆ ಖರೀದಿ ಮಾಡುವಂಥ ವಾತಾವರಣ ಇನ್ನೂ ಆರಂಭವಾಗಬೇಕು. ದಿನಗಳೆದಂತೆ ವ್ಯಾಪಾರ ಚುರುಕುಗೊಳ್ಳುತ್ತಿರುವ ಲಕ್ಷಣಗಳಿವೆ. ತೀರಾ ನಿರಾಸೆಯ ದಿನ ಕಳೆದಿದೆ. ಸದ್ಯ ಉಳಿತಾಯದ ಹಣವನ್ನು ಹೆಚ್ಚು ಮಂದಿ ವಿನಿಯೋಗಿಸುತ್ತಿರುವುದರಿಂದ ಎಚ್ಚರ ವಹಿಸುತ್ತಿದ್ದಾರೆ. ಈ ಪರಿಸ್ಥಿತಿ ಸುಧಾರಣೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಖರೀದಿಯಲ್ಲಿ ಏರಿಕೆ
ಬಟ್ಟೆ ಖರೀದಿ ತೀರಾ ಆವಶ್ಯಕ ವಸ್ತುಗಳ ಸಾಲಿನಲ್ಲಿಯೂ ಇದೆ. ಐಷಾರಾಮಿ ಖರೀದಿ ಕಡಿಮೆಯಿದ್ದರೂ ಅನಿವಾರ್ಯ ಖರೀದಿಗೆ ಭಂಗ ಬಂದಿಲ್ಲ. ಶುಭ ಸಮಾರಂಭಗಳು ಹೆಚ್ಚಿದಂತೆ ಖರೀದಿ ಪ್ರಕ್ರಿಯೆಯಲ್ಲಿ ಏರಿಕೆಯಾಗುವುದು ಖಚಿತ ಎನ್ನುವುದು ಕುಂದಾಪುರದ ಜೆ.ಪಿ. ಫ್ಯಾಶನ್‌ನ ಮಾಲಕ ರತ್ನಾಕರ ಶೆಟ್ಟಿಯವರ ಅಭಿಪ್ರಾಯ.

ದೀಪಾವಳಿಗೆ ಮತ್ತಷ್ಟು ಹೆಚ್ಚಬಹುದು
ನವರಾತ್ರಿ ಅವಧಿಗೆ ತುಸು ಚೇತರಿಕೆ ಕಂಡಿದ್ದು ದೀಪಾವಳಿ ಹೊತ್ತಿಗೆ ಮತ್ತಷ್ಟು ಹೆಚ್ಚಬಹುದು ಎಂಬ ಆಶಯ ಹೊಂದಿದ್ದೇವೆ ಎಂದು ಹೇಳುತ್ತಾರೆ ಕಾರ್ಕಳದ ಆದಿಲಕ್ಷ್ಮೀ ಫ‌ರ್ನಿಚರ್ಸ್‌ನ ದಿನೇಶ್‌.

ರೈತ ಬೆಳೆದ ಬೆಳೆ, ಉತ್ಪನ್ನ ಮಾರುಕಟ್ಟೆಗೆ ಬರಲಿಕ್ಕೆ ಇನ್ನು ಸ್ವಲ್ಪ ದಿನ ಬೇಕು. ಅದರಿಂದ ದೀಪಾವಳಿ ಖರೀದಿ ಇನ್ನಷ್ಟು ಹೆಚ್ಚಬಹುದು ಎಂಬ ಆಶಾವಾದ ಉದ್ಯಮ ವಲಯದ್ದು.

Advertisement

Udayavani is now on Telegram. Click here to join our channel and stay updated with the latest news.

Next